Advertisement

ಸರ್ಕಾರಿ ಆದೇಶಕ್ಕೆ ಕ್ಯಾರೇ ಎನ್ನದ ಪ್ರಾಂಶುಪಾಲರು

09:21 AM Oct 03, 2017 | Team Udayavani |

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗಕ್ಕೆ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯಗೊಳಿಸಿ ವರ್ಷಗಳೇ ಕಳೆದರೂ, ಕೆಲವು ಕಾಲೇಜಿನ ಪ್ರಾಂಶುಪಾಲರು ಬಯೋಮೆಟ್ರಿಕ್‌ ಹಾಜರಾತಿ ಮಾಹಿತಿ ನೀಡಿಲ್ಲ. ಇನ್ನೂಕೆಲವು ಕಾಲೇಜುಗಳಲ್ಲಿ ಅದರ ನಿರ್ವಹಣೆಯನ್ನೇ ಮಾಡುತ್ತಿಲ್ಲ.

Advertisement

 41 ಸರ್ಕಾರಿ ಪಾಲಿಟೆಕ್ನಿಕ್‌, 1 ಎಂಜಿನಿಯರಿಂಗ್‌, 20 ಅನುದಾನಿತ ಪಾಲಿಟೆಕ್ನಿಕ್‌ ಮತ್ತು 2 ಅನುದಾನಿ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲರು ತಿಂಗಳುವಾರು ಕ್ರೋಢೀಕೃತ ಬಯೋಮೆಟ್ರಿಕ್‌ ಹಾಜರಾತಿಯನ್ನೇ ಇಲಾಖೆಗೆ ಕಳುಹಿಸಿಲ್ಲ. ರಾಜ್ಯದ 14
ಸರ್ಕಾರಿ ಪಾಲಿಟೆಕ್ನಿಕ್‌, 7 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ತಲಾ 7 ಅನುದಾನಿತ ಪಾಲಿಟೆಕ್ನಿಕ್‌ ಹಾಗೂ ಅನುದಾನಿತ ಎಂಜಿನಿಯರಿಂಗ್‌ ಕಾಲೇಜು ಪ್ರಾಂಶುಪಾಲರು ಬಯೋಮೆಟ್ರಿಕ್‌ ಹಾಜರಾತಿ ನಿರ್ವಹಣೆಯ ಮಾಹಿತಿಯನ್ನೇ ನೀಡಿಲ್ಲ.  ಈ ಹಿನ್ನೆಲೆಯಲ್ಲಿ ಬಯೋಮೆಟ್ರಿಕ್‌ ಮಾಹಿತಿ ಹಾಗೂ ಹಾಜರಾತಿ ಮಾಹಿತಿ ನೀಡದ ಕಾಲೇಜಿನ ಪ್ರಾಂಶುಪಾಲರಿಗೆ ಖಡಕ್‌ ಸೂಚನೆ ನೀಡಿರುವ ಇಲಾಖೆಯು, ಬಯೋಮೆಟ್ರಿಕ್‌ ಹಾಜರಾತಿ ದಾಖಲಾತಿ ನಿಗದಿಪಡಿಸಿರುವ ಸಮಯದ ವಿವರ, ಬಯೋಮೆಟ್ರಿಕ್‌ಗೆ ಸೇರಿಸಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಟ್ಟಿ, ಬಯೋಮೆಟ್ರಿಕ್‌ ವ್ಯವಸ್ಥೆಯೊಳಗೆ ನೋಂದಣಿಯಾಗದ ಬೋಧಕ, ಬೋಧಕೇತರ ಸಿಬ್ಬಂದಿ ಪಟ್ಟಿ ತುರ್ತಾಗಿ ಸಲ್ಲಿಸಲು ಆದೇಶಿಸಿದೆ. ತಪ್ಪಿದರೆ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ.

ಬಯೋಮೆಟ್ರಿಕ್‌ ಕಡ್ಡಾಯ ಮಾಡಿಕೊಂಡಿದ್ದರೂ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್‌ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳ ಪೈಕಿ 35 ಕಾಲೇಜಿನಲ್ಲಿ ಇದರ ನಿರ್ವಹಣೆಯ ಬಗ್ಗೆ ಯಾವುದೇ ಮಾಹಿತಿಯನ್ನು ತಾಂತ್ರಿಕ ಶಿಕ್ಷಣ ಇಲಾಖೆಗೆ ನೀಡಿಲ್ಲ. ಇದನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರುವ ಇಲಾಖೆ, ಇಂತಹ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಪ್ರಾಂಶುಪಾಲರು, ಉಪನ್ಯಾಸಕರು ಸೇರಿ ಸಿಬ್ಬಂದಿ ವರ್ಗ ಕಾಲೇಜು ಸಮಯದಲ್ಲಿ ಬೇರೆ ಕೆಲಸದಲ್ಲಿ ತೋಡಗಿಕೊಂಡರುತ್ತಾರೆ. ಕಾಲೇಜಿಗೆ ಸರಿಯಾದ ಸಮಯಕ್ಕೆ ಬರುವುದಿಲ್ಲ ಮತ್ತು ಅವಧಿಗೂ ಮುಂಚೆಯೇ ಮನೆಗೆ ಹೋಗುತ್ತಾರೆ ಎಂಬುದನ್ನು ಮನಗಂಡು ರಾಜ್ಯ ಸರ್ಕಾರ 2012ರಲ್ಲಿ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯ ಮಾಡಿತ್ತು.

ನಿರ್ವಹಣೆ ಮಾಹಿತಿ ನೀಡದ ಕಾಲೇಜುಗಳು ಬೀಳಗಿ ಸರ್ಕಾರಿ ಪಾಲಿಟೆಕ್ನಿಕ್‌, ಬೆಂಗಳೂರಿನ ಎಸ್‌.ಜೆ.(ಸಂಜೆ)ಪಾಲಿಟೆಕ್ನಿಕ್‌, ಸರ್ಕಾರಿ ಮುದ್ರಣ ಮತ್ತು ತಂತ್ರಜ್ಞಾನ ಸಂಸ್ಥೆ, ಸರ್ಕಾರಿ ಆರ್‌ಸಿಎನ್‌ ವಾಣಿಜ್ಯ ನಿರ್ವಹಣಾ ಸಂಸ್ಥೆ ಸೇರಿ 14 ಸರ್ಕಾರಿ ಪಾಲಿಟೆಕ್ನಿಕ್‌, ಬೆಂಗಳೂರಿನ ಸರ್ಕಾರಿ  ಎಸ್‌ ಕೆಎಸ್‌ಜೆಟಿ ಸಂಸ್ಥೆ, ರಾಮನಗರದ ಸರ್ಕಾರಿ ಎಂಜಿನಿಯರಿಂಗ್‌ ಸೇರಿ 7 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಬಾಗಲಕೋಟೆ, ಹುನಗುಂದ, ಗುಳೇದಗುಡ್ಡ ಸೇರಿ 7 ಅನುದಾನಿತ ಪಾಲಿಟೆಕ್ನಿಕ್‌, 7 ಅನುದಾನಿತ ಎಂಜಿನಿಯರಿಂಗ್‌ ಕಾಲೇಜುಗಳು ಬಯೋಮೆಟ್ರಿಕ್‌ ನಿರ್ವಹಣೆಯ ಮಾಹಿತಿಯನ್ನೇ ಇಲಾಖೆಗೆ ನೀಡಿಲ್ಲ.

ಹಾಜರಾತಿ ಮಾಹಿತಿ ಕೊಟ್ಟಿಲ್ಲ 
ಬೆಂಗಳೂರು, ಬಳ್ಳಾರಿ, ಹಾಸನ, ಚಿಂತಾಮಣಿ, ಮೈಸೂರು, ದಾವಣಗೆರೆ, ತುಮಕೂರು ಸೇರಿ ರಾಜ್ಯದ 41 ಸರ್ಕಾರಿ ಪಾಲಿಟೆಕ್ನಿಕ್‌, 1 ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಮತ್ತು 20 ಅನುದಾನಿತ ಪಾಲಿಟೆಕ್ನಿಕ್‌ ಹಾಗೂ 2 ಅನುದಾನಿತ ಎಂಜಿನಿಯರಿಂಗ್‌ ಸಂಸ್ಥೆಗಳು ಬಯೋಮೆಟ್ರಿಕ್‌ ಹಾಜರಾತಿಯ ಕ್ರೋಢೀಕೃತ ಮಾಹಿತಿ ನೀಡಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ರಾಜು ಖಾರ್ವಿ ಕೊಡೇರಿ 
 

Advertisement

Udayavani is now on Telegram. Click here to join our channel and stay updated with the latest news.

Next