Advertisement

Karnataka: ಶಾಲೆಗಳು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಪರಿಹರಿಸಿ

12:54 AM Sep 23, 2024 | Team Udayavani |

ರಾಜ್ಯದಲ್ಲಿನ ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಹಾಜರಾತಿ ದಾಖಲಾತಿಗಾಗಿ ಆ್ಯಪ್‌ ಆಧಾರಿತ ವಿಧಾನ ಅಳವಡಿಸುವ ಪ್ರಸ್ತಾವವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರಕಾರದ ಮುಂದಿರಿಸಿದೆ.

Advertisement

ಮಕ್ಕಳ ಹಾಜರಾತಿಯನ್ನು ಖಾತರಿಪಡಿಸಲು ಮತ್ತು ಪ್ರತೀದಿನ ಎರಡು ಹೊತ್ತು ಮಕ್ಕಳ ಹಾಜರಿಯನ್ನು ಕರೆದು ಹಾಜರಾತಿ ಪುಸ್ತಕದಲ್ಲಿ ದಾಖಲಿಸುವ ಹೊಣೆಗಾರಿಕೆಯಿಂದ ಶಿಕ್ಷಕರು ಮುಕ್ತವಾಗಲಿದ್ದಾರೆ. ಆ್ಯಪ್‌ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಇಲಾಖೆ ಈಗಾಗಲೇ ಜಿಲ್ಲೆಯ ಒಂದೊಂದು ಶಾಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದು, ಇದು ಉದ್ದೇಶಿತ ಗುರಿ ಸಾಧನೆಯಲ್ಲಿ ಯಶ ಕಂಡಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ವ್ಯವಸ್ಥೆಯನ್ನು ರಾಜ್ಯದ ಎಲ್ಲ ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ವಿಸ್ತರಿಸಲು ಗಂಭೀರ ಚಿಂತನೆ ನಡೆಸಿದೆ. ಶಿಕ್ಷಣ ಇಲಾಖೆಯ ಈ ಪ್ರಸ್ತಾವ ವಿದ್ಯಾರ್ಥಿಗಳ ಹಾಜರಾತಿಯನ್ನು ಹೆಚ್ಚಿಸುವುದರ ಜತೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸುವಲ್ಲಿಯೂ ಸಹಕಾರಿಯಾಗಲಿದೆ.

ಸದ್ಯ ಸರಕಾರಿ ಶಾಲೆಗಳಲ್ಲಿ ಪ್ರತೀದಿನ ಬೆಳಗ್ಗೆ ಮತ್ತು ಅಪರಾಹ್ನದ ತರಗತಿ ಆರಂಭಕ್ಕೂ ಮುನ್ನ ಮಕ್ಕಳ ಹಾಜರಿಯನ್ನು ಕರೆದು ಹಾಜರಾತಿಯನ್ನು ದಾಖಲಿಸಿಕೊ­ಳ್ಳಲಾಗುತ್ತಿದೆ. ಇದರಿಂದಾಗಿ ಹಾಜರಿ ಕರೆಯುವ ಸಂದರ್ಭದಲ್ಲಿ ಶಾಲೆಯಲ್ಲಿರುವ ವಿದ್ಯಾರ್ಥಿಗಳು ಆ ಬಳಿಕ ತರಗತಿಗಳಿಗೆ ಗೈರಾಗುತ್ತಿರುವ ಪ್ರಕರಣಗಳು ಹೆಚ್ಚಿವೆ. ಇದನ್ನೇ ಚಾಳಿಯನ್ನಾಗಿರಿಸಿಕೊಂಡಿರುವ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವುದೇ ಅಲ್ಲದೆ ಅವರ ಶೈಕ್ಷಣಿಕ ಭವಿಷ್ಯವೂ ಮಸುಕಾಗುತ್ತಿದೆ. ಸದ್ಯ ರಾಜ್ಯದಲ್ಲಿ ಒಂದರಿಂದ ಎಂಟನೇ ತರಗತಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವಂತಿಲ್ಲ. ಆದರೆ ಆ ಬಳಿಕದ ತರಗತಿಗಳಲ್ಲಿ ವಾರ್ಷಿಕ ಪರೀಕ್ಷೆಯ ಅಂಕಗಳನ್ನು ಆಧರಿಸಿ ವಿದ್ಯಾರ್ಥಿಗಳನ್ನು ತೇರ್ಗಡೆಗೊಳಿಸುವುದರಿಂದ ಇದು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡ ಬೀಳುವಂತೆ ಮಾಡುವುದಲ್ಲದೆ ಫ‌ಲಿತಾಂಶದಲ್ಲೂ ಏರುಪೇರುಗಳಾಗುತ್ತಿವೆ. ಅಷ್ಟು ಮಾತ್ರವಲ್ಲದೆ ಇದು ಎಸೆಸೆಲ್ಸಿಯಲ್ಲಿನ ಒಟ್ಟಾರೆ ಫ‌ಲಿತಾಂಶದ ಮೇಲೂ ಪರಿಣಾಮ ಬೀರುತ್ತಿದೆ. ಇವೆಲ್ಲವನ್ನು ಪರಿಗಣಿಸಿ ಶಿಕ್ಷಣ ಇಲಾಖೆ ಆ್ಯಪ್‌ ಆಧಾರಿತ ಹಾಜರಾತಿ ವಿಧಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.

ಶಿಕ್ಷಣ ಇಲಾಖೆಯ ಈ ಪ್ರಸ್ತಾವನೆ ಸ್ವಾಗತಾರ್ಹವಾಗಿದ್ದು ಮಕ್ಕಳ ಹಾಜರಾತಿ, ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉತ್ತೇಜನದಾಯಕ ಕ್ರಮವಾಗಿದೆ. ಇದೇ ವೇಳೆ ಶಿಕ್ಷಣ ಇಲಾಖೆ ಸದ್ಯ ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳು ಎದುರಿಸುತ್ತಿರುವ ಕೆಲವು ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ದಿಸೆಯಲ್ಲಿ ತುರ್ತಾಗಿ ಕಾರ್ಯೋನ್ಮುಖವಾಗಬೇಕು. ಸದ್ಯ ಪ್ರಾಥಮಿಕ ಶಾಲೆಗಳಂತೂ ದಿನಾಚರಣೆ, ಪಠ್ಯೇತರ ಚಟುವಟಿಕೆ, ಪ್ರವಾಸ ಮತ್ತಿತರ ಕಾರ್ಯಚಟುವಟಿಕೆಗಳಿಗೇ ಮೀಸಲಾಗುತ್ತಿವೆ. ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಮತ್ತು ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸುವ ನಿಟ್ಟಿನಲ್ಲಿ ದಶಕಗಳ ಹಿಂದೆ ಆರಂಭಿಸಲಾಗಿರುವ ಬಿಸಿಯೂಟ ಯೋಜನೆ, ಅದಕ್ಕೆ ಪೂರಕವಾಗಿ ಸೇರ್ಪಡೆಗೊಳ್ಳುತ್ತಲೇ ಬಂದಿರುವ ಮೊಟ್ಟೆ ವಿತರಣೆ ಸಹಿತ ವಿವಿಧ ಯೋಜನೆಗಳು ಶಿಕ್ಷಕರು ಮತ್ತು ಅಡುಗೆ ಸಿಬಂದಿಗೆ ಬಲುದೊಡ್ಡ ಹೊರೆಯಾಗಿ ಪರಿಣಮಿಸಿದೆ. ಬೆರಳೆಣಿಕೆ ಸಂಖ್ಯೆಯ ಶಾಲೆಗಳನ್ನು ಹೊರತುಪಡಿಸಿದಂತೆ ಬಹುತೇಕ ಸರಕಾರಿ ಶಾಲೆಗಳನ್ನು ಶಿಕ್ಷಕರ ಕೊರತೆ ಇನ್ನಿಲ್ಲದಂತೆ ಕಾಡುತ್ತಿದ್ದು ಇವೆಲ್ಲದರ ಪರಿಣಾಮ ಬೋಧನೆಯ ಮೇಲೆ ಬೀಳುತ್ತಿದೆ. ಇನ್ನು ಅನುದಾನಿತ ಶಾಲೆಗಳ ಬಗೆಗಿನ ಸರಕಾರದ ತಾರತಮ್ಯ ಧೋರಣೆ ಇನ್ನೂ ಮುಂದುವರಿದಿದೆ.

ಇನ್ನಾದರೂ ಶಿಕ್ಷಣ ಇಲಾಖೆ ಮತ್ತು ಸರಕಾರ ಹೊಸ ಯೋಜನೆಗಳ ಅನುಷ್ಠಾನಕ್ಕೂ ಮುನ್ನ ಪ್ರಾಥಮಿಕ ಶಾಲೆಗಳಲ್ಲಿನ ಹಾಲಿ ಗೊಂದಲ, ಅವ್ಯವಸ್ಥೆ ಮತ್ತು ಕೊರತೆಗಳನ್ನು ನಿವಾರಿಸಲು ಮುಂದಾಗಬೇಕು. ಶಿಕ್ಷಕರ ಮೇಲಣ ಒತ್ತಡ ಕಡಿಮೆ ಮಾಡಬೇಕು. ಇವೆಲ್ಲವೂ ಬಗೆಹರಿದಲ್ಲಿ ಮಾತ್ರವೇ ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಸರಕಾರದ ಮಹತ್ವಾಕಾಂಕ್ಷೆ ಈಡೇರಲು ಸಾಧ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next