ಬ್ರಹ್ಮಾವರ: ಕೇಂದ್ರ ಸರಕಾರ ಜನಸಾಮಾನ್ಯರ ಕಣ್ಣೀರೊರೆಸುವ ಕೆಲಸ ಮಾಡುತ್ತಿದೆ. ಒಲೆಯ ಮುಂದೆ ಕುಳಿತು ಕಣ್ಣೀರುಡುತ್ತಿದ್ದ ತಾಯಂದಿರ ಮುಖದಲ್ಲಿ ಇಂದು ಮಂದಹಾಸ ಕಾಣುತ್ತಿದೆ. ಒಲೆಯ ಮುಂದೆ ಹೊಗೆಯ ಜತೆಗೆ ಕೂರುತ್ತಿದ್ದ ಕುಟುಂಬ ಇಂದು ಗ್ಯಾಸ್ ಸೌಲಭ್ಯ ಪಡೆದು ಸಂತೋಷವಾಗಿದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಮಂಗಳವಾರ ಕೊಕ್ಕರ್ಣೆ ಶ್ರೀ ಗಣೇಶ ಕಲಾ ಮಂದಿರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾ ಕಾಂಕ್ಷೆಯ ಯೋಜನೆಯಾದ ಉಜ್ವಲ ಯೋಜನೆಯ ಉಚಿತ ಗ್ಯಾಸ್ ಸಂಪರ್ಕ ವಿತರಿಸಿ ಅವರು ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ಒಟ್ಟು 20,000 ಫಲಾನುಭವಿಗಳಿಗೆ ಗ್ಯಾಸ್ ಸೌಲಭ್ಯ ಈಗಾಗಲೇ ದೊರಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮೈರ್ಮಾಡಿ ಸುಧಾಕರ ಶೆಟ್ಟಿ, ಪ್ರತಾಪ್ ಹೆಗ್ಡೆ ಮಾರಾಳಿ, ಚೇರ್ಕಾಡಿ ಪಂಚಾಯತ್ ಅಧ್ಯಕ್ಷ ಹರೀಶ್ ಶೆಟ್ಟಿ, ಕೊಕ್ಕರ್ಣೆ ಪಂಚಾಯತ್ ಅಧ್ಯಕ್ಷೆ ಆಶಾಲತಾ, ಉದ್ಯಮಿ ಬಾಲಕೃಷ್ಣ ಹೆಗ್ಡೆ, ತಾಲೂಕು ಪಂಚಾಯತ್ ಸದಸ್ಯರಾದ ಭುಜಂಗ ಶೆಟ್ಟಿ, ಸುನೀತಾ ಡಿ. ಶೆಟ್ಟಿ, ಶಾರದಾ ಎಚ್.ಪಿ. ಗ್ಯಾಸ್‌ನ ಗೀತಾ ಶ್ಯಾನುಭಾಗ್, ಜಿಲ್ಲಾ ನೋಡಲ್ ಅಧಿಕಾರಿ ಜುನೈದ್, ವೈದ್ಯಾಧಿಕಾರಿ ಸುರೇಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
400 ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಯಿತು. ಇದೇ ಸಂದರ್ಭ ಉಜ್ವಲ ಯೋಜನೆ ಕುರಿತು ಗ್ರಾಮೀಣ ಪ್ರದೇಶದಲ್ಲಿ ಮಾಹಿತಿ ನೀಡುವ ಉದ್ದೇಶದಿಂದ ಉಜ್ವಲ ರಥಕ್ಕೆ ಚಾಲನೆ ನೀಡಲಾಯಿತು. ಧ್ವನಿ ಸುರುಳಿ ಬಿಡುಗಡೆಗೊಳಿಸಲಾಯಿತು.
ಮಾಧವ ಪೈ ಸ್ವಾಗತಿಸಿ, ಹರೀಶ್ ಶ್ಯಾನುಭಾಗ್ ವಂದಿಸಿದರು. ಶಶಿಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.