Advertisement

ಜು.23 : ಉಜ್ವಲ ಫಲಾನುಭವಿಗಳ ಸಮಾವೇಶ

07:10 AM Jul 22, 2017 | |

ಮಂಗಳೂರು: ಉಚಿತ ಅಡುಗೆ ಅನಿಲ ಸಂಪರ್ಕ ಹಾಗೂ ಗ್ಯಾಸ್‌ಸ್ಟವ್‌ ನೀಡುವ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳ ಸಮಾವೇಶ ಹಾಗೂ ಮಾಹಿತಿ ಕಾರ್ಯಕ್ರಮ ಜು.23ರಂದು ಬ್ರಹ್ಮರಕೂಟ್ಲುವಿನಲ್ಲಿರುವ ಬಂಟರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೆಳಗ್ಗೆ 11 ಗಂಟೆಯಿಂದ ನಡೆಯುವ ಕಾರ್ಯಕ್ರಮದಲ್ಲಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಪಡೆಯುವ ಬಗ್ಗೆ ಮಾಹಿತಿ ಹಾಗೂ ಅರ್ಜಿ ನೀಡಲು ಬಾಕಿ ಇರುವವರರಿಂದ ಅರ್ಜಿ ಸ್ವೀಕಾರ, ಉಚಿತ ಅಡುಗೆ ಅನಿಲ ಸಂಪರ್ಕ ಹಾಗೂ ಗ್ಯಾಸ್‌ಸ್ಟವ್‌ ವಿತರಣೆ ಮುಂತಾದುವುಗಳು ಒಳಗೊಂಡಿದೆ. ಜಿಲ್ಲೆಯ 46 ಎಲ್‌ಪಿಜಿ ವಿತರಕಕರು ಪಾಲ್ಗೊಳ್ಳುವರು ಎಂದರು.

ಜಿಲ್ಲೆಯಲ್ಲಿ 44,000 ಫಲಾನುಭವಿಗಳು
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ದೇಶದಲ್ಲಿರುವ ಬಡವರಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಇದರಂತೆ ದ.ಕನ್ನಡ ಜಿಲ್ಲೆಯಲ್ಲಿ 2011ರ ಸಾಮಾಜಿಕ, ಅರ್ಥಿಕ ಗಣತಿಯಂತೆ 44,000 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಈಗಾಗಲೇ 4,000 ಮಂದಿಗೆ ವಿತರಿಸಲಾಗಿದೆ ಎಂದು ಸಂಸದರು ತಿಳಿಸಿದರು.

ಉಜ್ವಲ ಪ್ಲಸ್‌ನಲ್ಲಿ ಇನ್ನಷ್ಟು ಅವಕಾಶ
ಬಾಕಿಯುಳಿದಿರುವ ಫಲಾನುಭವಿಗಳು ಕೂಡ ಈ ಯೋಜನೆಯ ಪ್ರಯೋಜನವನ್ನು ಪಡೆಯುವ ನಿಟ್ಟಿನಲ್ಲಿ ಉಜ್ವಲ ಪ್ಲಸ್‌ ಎಂಬ ಯೋಜನೆ ರೂಪಿಸಲಾಗಿದ್ದು ಆ.15ರಂದು ಪ್ರಧಾನಿಯವರು ಘೋಷಿಸಲಿದ್ದಾರೆ. ಈ ಯೋಜನೆಗೂ ಈಗಲೇ ಅರ್ಜಿ ಸ್ವೀಕರಿಸಲಾಗುವುದು ಎಂದವರು ವಿವರಿಸಿದರು.ಮಾಜಿ ಶಾಸಕ ಕೆ. ರುಕ್ಮಯ ಪೂಜಾರಿ, ಬಿಜೆಪಿ ನಾಯಕ ರಾಜೇಶ್‌ ನಾೖಕ್‌ ಉಳಿಪಾಡಿ ಅವರು ಉಪಸ್ಥಿತರಿದ್ದರು.

ಉಜ್ವಲ ಗ್ರಾಹಕರಿಗೆ ವಿಮಾ ಸುರಕ್ಷೆ 
ಉಜ್ವಲ ಯೋಜನೆಯಡಿ ಎಲ್‌ಪಿಜಿ ಗ್ರಾಹಕರಿಗೆ ವಿಮಾ ಸುರಕ್ಷೆ ಒದಗಿಸಲಾಗುತ್ತಿದೆ. ಸಾವು ಸಂಭವಿಸಿದಲ್ಲಿ 6 ಲಕ್ಷ ರೂ.ವರೆಗೆ ಪ್ರತಿ ವ್ಯಕ್ತಿಗೆ ಹಾಗೂ ಪ್ರತಿ ದುರ್ಘ‌ಟನೆಗೆ ವ್ಯಕ್ತಿಗತ ಕವರೇಜು ಇರುತ್ತದೆ. ಪ್ರತಿ ದುರ್ಘ‌ಟನೆಗೆ ಒಟ್ಟು 30 ಲಕ್ಷ ರೂ.ವರೆಗೆ ವೈದ್ಯಕೀಯ ಚಿಕಿತ್ಸೆ ವಿಮೆ, ಗರಿಷ್ಠ 2 ಲಕ್ಷ ರೂ.ವರೆಗೆ ಪ್ರತಿ ವ್ಯಕ್ತಿಗೆ ಹಾಗೂ ತತ್‌ಕ್ಷಣಕ್ಕೆ 25,000 ರೂ. ವೈದ್ಯಕೀಯ ಪರಿಹಾರ ಹಾಗೂ ಪ್ರತಿ ದುರ್ಘ‌ಟನೆಗೆ ಅಧಿಕೃತ ಗ್ರಾಹಕರಿಗೆ, ನೋಂದಾಯಿತ ವಿಳಾಸಕ್ಕೆ ಗರಿಷ್ಠ 2 ಲಕ್ಷ ರೂ. ಆಸ್ತಿ ಹಾನಿಗೆ ಪರಿಹಾರ ಲಭಿಸುತ್ತದೆ. ಸಂಬಂಧಪಟ್ಟ ಗ್ಯಾಸ್‌ ವಿತರಕರಿಗೆ ಲಿಖೀತರೂಪದಲ್ಲಿ ತಿಳಿಸಿದಲ್ಲಿ ಅವರು ಸಂಬಂಧಪಟ್ಟ ಕ್ಷೇತ್ರೀಯ /ವಲಯ ಕಾರ್ಯಾಲಯಗಳಿಗೆ ಹಾಗೂ ವಿಮಾ ಕಂಪೆನಿಗೆ ತಿಳಿಸುತ್ತಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next