Advertisement

ಪ್ರಧಾನಿಗೆ ಪ್ರತ್ಯೇಕ ಸುರಂಗ! ; ಸುರಕ್ಷತೆ ದೃಷ್ಟಿಯಿಂದ ಪ್ರತ್ಯೇಕ ಮಾರ್ಗ ನಿರ್ಮಾಣ

09:26 AM Feb 06, 2020 | Hari Prasad |

ಹೊಸದಿಲ್ಲಿ: ಈ ಹಿಂದೆ ಜಮ್ಮು- ಕಾಶ್ಮೀರದಲ್ಲಿ ದೇಶದ ಅತಿ ಉದ್ದದ ಸುರಂಗ ಮಾರ್ಗ ಉದ್ಘಾಟಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಒಂದೆರಡು ವರ್ಷಗಳಲ್ಲಿ ತಮ್ಮದೇ ಆದ ಸ್ವಂತ ಸುರಂಗ ಮಾರ್ಗ ಹೊಂದಲಿದ್ದಾರೆ!

Advertisement

ಪ್ರಸ್ತುತ ಸಂಸತ್‌ ಭವನದ ಸುತ್ತ ವಿಐಪಿಗಳ ಸಂಚಾರದಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆ, ಅದರಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಮತ್ತು ಸುರಕ್ಷತೆ ದೃಷ್ಟಿಯಿಂದ ವಿಶೇಷ ಮಾರ್ಗಗಳನ್ನು ಸಿದ್ಧಪಡಿಸಲಾಗುತ್ತಿದೆ. ಅದರಡಿ ಪ್ರಧಾನಿ ಮೋದಿ ಅವರ ಭದ್ರತೆ ದೃಷ್ಟಿಯಿಂದ ಅವರ ನಿವಾಸದಿಂದ ಕಚೇರಿ ಮತ್ತು ಸಂಸತ್‌ಗೆ ತೆರಳಲು ಪ್ರತ್ಯೇಕ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಕಚೇರಿ ಸಂಸತ್‌ ಭವನ ಮಾತ್ರವಲ್ಲದೆ ಇತರ ಸ್ಥಳಗಳಿಗೂ ಈ ಸುರಂಗ ಸಂಪರ್ಕ ಕಲ್ಪಿಸುತ್ತದೆ ಎನ್ನಲಾಗಿದೆ.

ಈ ಎಲ್ಲ ಮಾರ್ಗ ಬದಲಾವಣೆ, ಹೊಸ ಮಾರ್ಗಗಳ ನಿರ್ಮಾಣ ಸಂಬಂಧ ಕೇಂದ್ರ ಸರಕಾರ ‘ಸೆಂಟ್ರಲ್‌ ವಿಸ್ತಾ’ ಯೋಜನೆ ರೂಪಿಸಿದ್ದು, ಅದರ ವಿನ್ಯಾಸ ಈಗ ಬಹಿರಂಗಗೊಂಡಿದೆ. ಅದರಂತೆ, ಪ್ರಧಾನಿ ನಿವಾಸ ಸಂಸತ್‌ ಭವನದ ಸೌತ್‌ ಬ್ಲಾಕ್‌ ಬಳಿ ಹಾಗೂ ಉಪರಾಷ್ಟ್ರಪತಿಗಳ ನಿವಾಸ ನಾರ್ತ್‌ ಬ್ಲಾಕ್‌ ಹಿಂಭಾಗಕ್ಕೆ ಸ್ಥಳಾಂತರಗೊಳ್ಳಲಿದೆ.

ಹಾಗೇ ಭದ್ರತಾ ಸಿಬಂದಿಯ ಕಚೇರಿಗಳನ್ನು ತೆರವುಗೊಳಿಸಿ ಅಲ್ಲಿ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಕಚೇರಿ ತೆರೆಯಲಾಗುತ್ತಿದೆ. ಜತೆಗೆ, ಸಚಿವರ ನಿವಾಸಗಳನ್ನು ಒಳಗೊಂಡಿರುವ ಸೌತ್‌ ಮತ್ತು ನಾರ್ತ್‌ ಬ್ಲಾಕ್‌ಗಳು ದೇಶದ ಅತ್ಯಾಕರ್ಷಕ ರಾಷ್ಟ್ರೀಯ ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗುತ್ತದೆ. ‘1857ರವರೆಗಿನ ಭಾರತ’ ಹೆಸರಿನ ವಸ್ತುಸಂಗ್ರಹಾಲಯವಾಗಿ ಸೌತ್‌ ಬ್ಲಾಕ್‌ ಕಂಗೊಳಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next