ಚಂಡಿಗಢ: ರೈತರಿಗೆ ಸಂಕಷ್ಟ ಉಂಟಾದಾಗ ಪ್ರಧಾನಿ ಮೋದಿಯವರ ಕಣ್ಣಿನಲ್ಲಿ ನೀರು ಬರುವುದಿಲ್ಲ. ಆದರೆ, ಕಾಂಗ್ರೆಸ್ ತೊರೆದ ನಾಯಕರು ಅವರ ಬಳಿ ಹೋದಾಗ ಅವರ ಕಣ್ಣಲ್ಲಿ ನೀರು ಜಿನುಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ಬೃಹತ್ ರ್ಯಾಲಿಯಲ್ಲಿ ಅವರು ಮಾತನಾಡಿದ್ದಾರೆ.
ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್ ಅವರು ರಾಜ್ಯಸಭಾ ಸದಸ್ಯತ್ವದಿಂದ ನಿವೃತ್ತರಾದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ವಿದಾಯ ಕೂಟದಲ್ಲಿ ಪ್ರಧಾನಿ ಮೋದಿ ಕಣ್ಣೀರು ಸುರಿಸಿದ್ದನ್ನು ಪರೋಕ್ಷವಾಗಿ ಖರ್ಗೆ ಉಲ್ಲೇಖಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ದೇಶಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಇದರಿಂದಾಗಿ ಬಿಜೆಪಿಗೆ ಅಂಜಿಕೆಯಾಗಿದೆ. ಆರು ರಾಜ್ಯಗಳಲ್ಲಿ ನಮ್ಮ ಪಕ್ಷದ ಪರ ಜನಾಭಿಪ್ರಾಯ ಬಂದಿದ್ದರೂ, ಬಿಜೆಪಿ ಆ ರಾಜ್ಯಗಳನ್ನು ನಮ್ಮಿಂದ ಕಿತ್ತುಕೊಂಡಿತು. ತಾಲಿಬಾನ್ ಆಡಳಿತದಲ್ಲಿ ಮಹಿಳೆಯರಿಗೆ ಹೇಗೆ ಗೌರವಯುತ ಸ್ಥಾನ ಇಲ್ಲವೋ ಅದೇ ರೀತಿ ಮನುವಾದವನ್ನು ಅನುಸರಿಸುವ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ಹೆಣ್ಣು ಮಕ್ಕಳಿಗೆ ಮೌಲ್ಯಯುತ ಸ್ಥಾನ ಇಲ್ಲ ಎಂದೂ ಖರ್ಗೆ ಹೇಳಿದರು.
ಇವಿಎಂಗಳಲ್ಲಿ ಮತದಾನ ಮಾಡಿದ ಬಳಿಕ ವಿವಿಪ್ಯಾಟ್ ಸ್ಲಿಪ್‌ಗ್ಳನ್ನು ಮತದಾರರ ಕೈಗೆ ನೀಡಬೇಕು. ಮತದಾರರು ಅದನ್ನು ಮೈಕ್ರೋಚಿಪ್ ರಹಿತ ಮತ ಪೆಟ್ಟಿಗೆಗೆ ಹಾಕಬೇಕು. ಆ ಬಳಿಕ ವಿವಿಪ್ಯಾಟ್ ಸ್ಲಿಪ್ ಕೌಂಟಿಂಗ್ ಮಷೀನ್ ಅಳವಡಿಸಿ, ಆ ಸ್ಲಿಪ್‌ಗಳ ಆಧಾರದಲ್ಲೇ ಫಲಿತಾಂಶ ಘೋಷಿಸಬೇಕು – ದಿಗ್ವಿಜಯ್ ಸಿಂಗ್, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ