ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ಎಸಗಿದ್ದು ಕೂಡಲೇ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿ ಗಾಂಧಿ ವೃತ್ತದ ಮುಂಭಾಗದಲ್ಲಿ ಪ್ರಧಾನಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾಜಿ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಪ್ರಧಾನಿ ಮೋದಿ ಅವರು ದೇಶದ ಪ್ರತಿ ಪ್ರಜೆಗಳಿಗೆ ಬರಿ ಸುಳ್ಳನ್ನು ಬಿಂಬಿಸುತ್ತಾ ಜನರಿಗೆ ಮೋಸ ಮಾಡುತ್ತ ಹೊರಟಿದ್ದಾರೆ. ಈಗ ಫ್ರಾನ್ಸ್ ದೇಶದ ಮಾಜಿ ಅಧ್ಯಕ್ಷ ಪ್ರಾಂಕೊಯ್ಸ ಹೊಲೆಂಡ್‌ರವರು ತಮ್ಮ ಹೇಳಿಕೆಯಲ್ಲಿ ರಫೇಲ್ ಯುದ್ಧ ವಿಮಾನದ ಖರೀದಿಯಲ್ಲಿ ಎಲ್ಲಿವರೆಗೆ ಅಂಬಾನಿ ಕಂಪನಿಯವರಿಗೆ ಪಾಲುದಾರರಾಗಿ ಸೇರಿಸುವುದಿಲ್ಲವೊ ಅಲ್ಲಿವರೆಗೆ ಈ ಡೀಲ್‌ಗೆ ಸಹಿ ಹಾಕಲ್ಲ ಅಂತ ಒತ್ತಡ ಹಾಕಿ ಸುಮಾರು 1.30 ಲಕ್ಷ ಕೋಟಿ ರೂ. ಡೀಲ್‌ನಲ್ಲಿ ಅಂಬಾನಿ ಕಂಪನಿಗೆ ಸೇರಿಸಿದ್ದು ಬಹಿರಂಗವಾಗಿದೆ. ಇಷ್ಟೆಲ್ಲ ಆದ ಈ ಡೀಲ್‌ನಲ್ಲಿ ಭಾರತದ ಪ್ರಧಾನಿ ತಮ್ಮ ಪಾಲು ಸಹ ಇದರಲ್ಲಿ ಇಟ್ಟಿರುವುದು ಜಗಜ್ಜಾಹೀರಾಗಿದೆ. ಈ ಸರಕಾರ ಕಾರ್ಪೋರೇಟರಗಳ ಪರವಾಗಿದ್ದು ಮುಂದೆ ಬರುವ ಲೋಕಸಭೆ ಚುನಾವಣೆಯಲ್ಲಿ ಜನ ಇವರಿಗೆ ತಕ್ಕ ಪಾಠ ಕಲಿಸಿ ಇವರನ್ನು ಮನೆಗೆ ಕಳುಹಿಸಲಿದ್ದಾರೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ ಮಾತನಾಡಿ, ಮೋದಿ ಅವರು ಸಬ್ ಕಾ ಸಾಥ ಸಬ್ ಕಾ ವಿಕಾಸ ಅನುವ ಘೋಷಣೆ ಅಡಿಯಲ್ಲಿ ಸಬ್ ಕಾ ಸಾಥ್ ಅಪನಾ ವಿಕಾಸ ಮಾಡಿಕೊಳ್ಳುತ್ತಿದ್ದಾರೆ. ಮಾತೆತ್ತಿದ್ದರೆ ಮನ್ ಕೀ ಬಾತ್ ಅಂತಾ ತಮ್ಮ ಮನ್ ಕೀ ಬಾತನ್ನೆ ಹೇಳುತ್ತಿರುವ ಪ್ರಧಾನಿ ಜನರ ಮನ್ ಕೀ ಬಾತ್ ಕೇಳಲು ತಯಾರಿಲ್ಲ. ಸಾಮಾನ್ಯ ಜನರ ಮೇಲೆ ನೋಟ್ ಬ್ಯಾನ್, ಗಬ್ಬರ್‌ಸಿಂಗ್ ಟ್ಯಾಕ್ಸ್ ನಂತಹ ಹೊರೆಗಳನ್ನು ಹಾಕಿ ಅಂಬಾನಿ, ಅದಾನಿ, ಮಿತ್ತಲ್‌ನಂತಹ ಕೆಲವು ಕಾರ್ಪೊರೇಟರಗಳ ಪರವಾಗಿ ಕೆಲಸ ಮಾಡುತ್ತಿರುವ ಪ್ರಧಾನಿ ರಫೇಲ್ ಡೀಲ್ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ ಮಾತನಾಡಿ, ನರೇಂದ್ರ ಮೋದಿಯವರು ದೇಶದ ಆರ್ಥಿಕ ಪರಿಸ್ಥಿತಿ ಹಾಳುಗೆಡವಿ ದೇಶಕ್ಕೆ ಗಂಡಾಂತರ ತಂದೊಡ್ಡುವ ದಿನ ದೂರವಿಲ್ಲ. ಇವರ ತಪ್ಪು ಆರ್ಥಿಕ ನಿರ್ಧಾರಗಳಿಂದ ದೇಶದಲ್ಲಿ ಪೆಟ್ರೋಲಿಯಂ ದರಗಳು ಗಗನಕ್ಕೇರಿ ಜನರ ಜೀವನ ದುಸ್ತರವಾಗಿದೆ. ನಾನೊಬ್ಬ ನಿಷ್ಠಾವಂತ ನನ್ನನ್ನು ನಂಬಿ ಅಂತ ಜನರನ್ನು ಮಾತಿನಲ್ಲಿ ಮರಳು ಮಾಡಿ ಅಧಿಕಾರಕ್ಕೆ ಬಂದ ಪ್ರಧಾನಿ ಇಂದು ರಫೇಲ್ ಡೀಲ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಎಂ.ಎಲ್. ಶಾಂತಗಿರಿ, ಅಬ್ದುಲ್‌ಹಮೀದ್ ಮುಶ್ರೀಫ್, ಕಾಂತಾ ನಾಯಕ, ಜಮೀರ್‌ಅಹ್ಮದ ಭಕ್ಷಿ, ವೈಜನಾಥ ಕರ್ಪೂರಮಠ, ಮಹಾದೇವಿ ಗೋಕಾಕ, ಅಬ್ದುಲ್ ಖಾದಿರ ಖಾದಿಂ, ಮಂಜುಳಾ ಗಾಯಕವಾಡ, ಡಾ| ಗಂಗಾಧರ ಸಂಖಂಣ್ಣಿ, ಮೊಹ್ಮದ ರಫಿಕ್ ಟಪಾಲ, ಇದ್ರುಸ್ ಭಕ್ಷಿ, ಜಮೀರ ಬಾಂಗಿ, ಚಾಂದಸಾಬ ಗಡಗಲಾವ, ಶ್ರೀದೇವಿ ಉತ್ಲಾಸಕರ, ದತ್ತಾತ್ರೇಯ ಆಲಮೇಲಕರ, ಎಸ್.ಎಂ. ಪಾಟೀಲ ಗಣಿಹಾರ, ಸಾಹೇಬಗೌಡ ಬಿರಾದಾರ, ವಸಂತ ಹೊನಮೊಡೆ ಪಾಲ್ಗೊಂಡಿದ್ದರು.