Advertisement

ಪ್ರಧಾನಿ ಮೋದಿಗೆ ಕರುನಾಡ ಪುಟಾಣಿಯ ಪಾಕೆಟ್‌ ಮನಿ!

09:46 AM Feb 14, 2019 | Team Udayavani |

ಬೆಂಗಳೂರು: ಪ್ರಧಾನಮಂತ್ರಿ ಕೈಗೆ ಕರುನಾಡಿನ ಪುಟಾಣಿಯ ಪಾಕೆಟ್‌ ಮನಿ! ಏನಿದು ಹೊಸ ಯೋಜನೆ ಅಂದುಕೊಂಡಿರಾ? ತಪ್ಪು. ಸ್ವತ್ಛತೆಯ ಜಾಗೃತಿ ಮೂಡಿಸುವ ಉದ್ದೇಶದಿಂದ “ಪಾಯಿಖಾನೆ’ ಎಂಬ ಬೀದಿ ನಾಟಕಗಳನ್ನು ಮಾಡುತ್ತಿದ್ದ, ಬೆಂಗಳೂರಿನ ಪ್ರತ್ಯಕ್ಷ ಬಿ.ಆರ್‌. ಎಂಬ ಪುಟಾಣಿ ಈ ಸಾಧನೆ ಮಾಡಿ, ಈಗ 2019ನೇ ಸಾಲಿನ ಬಾಲ ಪುರಸ್ಕಾರಕ್ಕೆ ಪಾತ್ರಳಾಗಿದ್ದಾಳೆ. ಬೀದಿ ನಾಟಕದಿಂದ ಸಂಗ್ರಹಿಸಿದ ಹಣವನ್ನು ಸ್ವತ್ಛತಾ ಅಭಿಯಾನಕ್ಕೆ ನೀಡಿ, ಮಾದರಿ ಆಗಿದ್ದಾಳೆ. 

Advertisement

ಇತ್ತೀಚೆಗೆ ನವದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಪ್ರತ್ಯಕ್ಷ, ಬೆಂಗಳೂರಿನ ಗಿರಿನಗರದ ಮಾರ್ಟಿನ್‌ ಲೂಥರ್‌ ಆಂಗ್ಲ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ. 6ನೇ ವಯಸ್ಸಿನಿಂದಲೇ ನಾಟಕದ ಗೀಳು ಹತ್ತಿಕೊಂಡ ಈಕೆ “ರಂಗಮಂಟಪ’, “ಪ್ರಸಂಗ’, “ರಂಗ ನಿರಂತರ’ ತಂಡಗಳಲ್ಲಿ ಪಾತ್ರ ಮಾಡುತ್ತಿದ್ದರು. “ಅಕ್ಕು’ ಪಾತ್ರ ಈಕೆಗೆ ಹೆಸರು ತಂದು ಕೊಟ್ಟಿತ್ತು.
 
ಏನಿದು ನಾಟಕ?: ನಾಟಕದ ಮೂಲಕ ರಾಜ್ಯದ 15 ಜಿಲ್ಲೆಯ, 130ಕ್ಕೂ ಹೆಚ್ಚು ಹಳ್ಳಿಗಳ ಬೀದಿಗಳಲ್ಲಿ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸಿರುವ ಈ ಪುಟಾಣಿ, ಏಕಪಾತ್ರ ಅಭಿನಯದ ಮೂಲಕ ಶೌಚಾಲಯದ ಮಹತ್ವ ತಿಳಿಸಿದ್ದಳು. ಹೀಗೆ ನಾಟಕಗಳಿಂದ ಸಂಗ್ರಹಿಸಿದ ಪಾಕೆಟ್‌ ಮನಿಯನ್ನು ಪ್ರಧಾನಿ ಅವರಿಗೆ ಸಮರ್ಪಿಸಿದ್ದಾಳೆ. ಈ ನಾಟಕದ ಮೂಲಕವೇ ಕನಕಪುರ, ರಾಮನಗರ, ಕೊಪ್ಪಳ, ಬಳ್ಳಾರಿ, ಧಾರವಾಡ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳ ಬೀದಿಗಳಲ್ಲಿ ಪ್ರತ್ಯಕ್ಷ ಜಾಗೃತಿ ಮೂಡಿಸಿದ್ದಾಳೆ.

ಬೀದಿಗಳಲ್ಲಿ ವೀಕೆಂಡ್‌!: ಪ್ರತ್ಯಕ್ಷ ಎರಡು, ಮೂರು ವರ್ಷಗಳಿಂದ ವಾರಾಂತ್ಯದ ರಜೆ ದಿನಗಳನ್ನು ಕಳೆದಿದ್ದು, ಬೀದಿಗಳಲ್ಲಿ, ಅದೂ ನಾಟಕಗಳ ಮೂಲಕ. “ನನಗೆ ಕುಟುಂ ಬದವರು, ಶಾಲೆಯಿಂದ ಪ್ರೋತ್ಸಾಹ ಲಭಿಸಿತು. ಎಷ್ಟೋ ಸಲ ಶಾಲೆಗೆ ಹೋಗಲು ಆಗದೇ ಇದ್ದಾಗ, ಮತ್ತೆ ಪಠ್ಯ ಕವರ್‌
ಮಾಡಲು ಶಾಲೆಯ ಎಲ್ಲ ಟೀಚರ್‌ಗಳೂ ನೆರವಾಗುತ್ತಿದ್ದರು. ಪ್ರಾಂಶುಪಾಲರಾದ ಡಾ. ಸುಧಾ ಪ್ರಸನ್ನ ಅವರು ನನ್ನ ಸಾಧನೆಗೆ ಪ್ರೇರಣೆ ನೀಡಿದರು’ ಎನ್ನುತ್ತಾರೆ ಪ್ರತ್ಯಕ್ಷ. ಈ ಪುಟಾಣಿ ಪ್ರಸ್ತುತ, “ಹಸನ’ ಎಂಬ ತಂಡ ಕಟ್ಟಿಕೊಂಡು, ಸ್ಲಂಗಳಲ್ಲಿನ ಬಯಲು ಶೌಚಾಲಯ, ಅದರ ಷ್ಪರಿಣಾಮಗಳನ್ನು ತಿಳಿಸುತ್ತಾ, ತ್ಯಾಜ್ಯಗಳ ಮರುಬಳಕೆ ಕುರಿತೂ ಜಾಗೃತಿ ಮೂಡಿಸುತ್ತಿದ್ದಾಳೆ.

“ಪ್ರಧಾನಿಗಳು ಹೊಸ ಹೊಸ ಐಡಿಯಾಗಳು ಇದ್ದರೆ ಕೊಡಮ್ಮಾ ಅಂತ ಹೇಳಿ, ಮುಂದಿನ ಓದು, ಸೆಮಿಸ್ಟರ್‌ ಬಗ್ಗೆ ತಿಳಿದುಕೊಂಡರು. ಉಡುಗೊರೆಯಾಗಿ ವಾಚ್‌ ಅನ್ನೂ ಕೊಟ್ಟಿದ್ದಾರೆ. ಅದರ ಹಿಂದೆ ನನ್ನ ಹೆಸರಿದೆ. ಮುಂದೆ ಅವರ ಸಹಿ ಇದೆ. ಇದನ್ನು ನೋಡಿದಾಗಲೆಲ್ಲಾ ಇನ್ನೇನಾದರೂ ಸಾಧಿಸಬೇಕು ಅನ್ನೋ ಹುಮ್ಮಸ್ಸು, ಛಲ ಬರುತ್ತದೆ’ ಎಂದು ಪ್ರತ್ಯಕ್ಷ “ಪ್ರತ್ಯಕ್ಷ’ ವರದಿ ನೀಡುತ್ತಾರೆ. 

Advertisement

Udayavani is now on Telegram. Click here to join our channel and stay updated with the latest news.

Next