ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಜಾಪ್ರಭುತ್ವ ಹಾಳು ಮಾಡಲು ಹುಟ್ಟಿ ಬಂದಿರುವ ಆಧುನಿಕ ಭಸ್ಮಾಸುರ ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಯಲ್ಲಿದ್ದುಕೊಂಡು ಶಾಸಕರ ಖರೀದಿಗೆ ಬೆಂಬಲವಾಗಿ ನಿಂತಿರುವುದು ದುರಾದೃಷ್ಟ.
ಗುಜರಾತ್‌ನಲ್ಲಿ ಆಪರೇಷನ ಕಮಲ ನಡೆಸುತ್ತಿರುವುದು ಪ್ರಜಪ್ರಭುತ್ವ ವಿರೋಧಿ ಕ್ರಮವಾಗಿದೆ. ಆಪರೇಶನ್ ಕಮಲದ ಜನಕ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡ ಗುಜರಾತ್‌ನಲ್ಲಿ ರಾಜ್ಯಸಭೆಗೆ ಬಿಜೆಪಿಯವರೇ ಆಯ್ಕೆಯಾಗುತ್ತಾರೆ ಎಂದು ಹೇಳುವ ಮೂಲಕ ಅವರ ಅಸಂವಿಧಾನಿಕ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ದೂರಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಗೋವಾ, ಮಣಿಪುರದಲ್ಲಿಯೂ ವಾಮ ಮಾರ್ಗದಿಂದ ಅಧಿಕಾರ ಹಿಡಿದ ಅವರು, ಈಗ ಬಿಹಾರದಲ್ಲಿಯೂ ಸಿಬಿಐ ಬಳಸಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಕುಟುಂಬದ ಮೇಲೆ ಚುನಾವಣೆ ಸಂದರ್ಭದಲ್ಲಿಯೂ ಪ್ರಕರಣಗಳು ದಾಖಲಾಗಿದ್ದವು.
ಆಗ ಯಾವುದೇ ಕ್ರಮ ಕೈಗೊಳ್ಳದ ಬಿಜೆಪಿ ಈಗ ಸಿಬಿಐ ಮೂಲಕ ನೊಟಿಸ್ ಕೊಡಿಸಿ, ಅವರ ವಿರುದ್ಧ ಷಡ್ಯಂತ್ರ ಮಾಡಿ, ಸರ್ಕಾರದಲ್ಲಿ ಪಾಲುದಾರರಾಗಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿಯವರು ಎಂತಹ ಹೀನ ಕೃತ್ಯಕ್ಕೂ ಹಿಂಜರಿಯುವುದಿಲ್ಲ. ಕಾಂಗ್ರೆಸ್ ಮುಕ್ತ ಭಾರತ ಮಾಡುವ ಅವರ ಕನಸು ನನಸು ಮಾಡಲು ಈ ದೇಶದ ಜನತೆ ಬಿಡುವುದಿಲ್ಲ. ಅವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಉಗ್ರಪ್ಪ ಹೇಳಿದರು.
ಇದೇ ವೇಳೆ, ಪ್ರಧಾನಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಜಿಎಸ್‌ಟಿ ಜಾರಿಗೆ ಬಂದ ಮೇಲೆ ಸಾಮಾನ್ಯರು ಬಳಸುವ ಎಲ್ಲ ವಸ್ತುಗಳ ಬೆಲೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಆದರೆ, ತರಕಾರಿಯಿಂದ ಹಿಡಿದು ಪೆಟ್ರೋಲ್‌ವರೆಗೂ ಯಾವ ವಸ್ತುವಿನ ಬೆಲೆ ಕಡಿಮೆಯಾಗಿಲ್ಲ. ಪ್ರಧಾನಿ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಜುಗರಕ್ಕೊಳಗಾದ ಉಗ್ರಪ್ಪ: ಗುಜರಾತ್ ಶಾಸಕರನ್ನು ಬಿಜೆಪಿ ಆಪರೇಷನ್ ಕಮಲ ಮಾಡುವ ಮೂಲಕ ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ ಎಂದು ಹೇಳಿದರು. ರಾಜ್ಯದಿಂದ ಕೆ.ಸಿ. ರಾಮಮೂರ್ತಿಯನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಸಂದರ್ಭದಲ್ಲಿಯೂ ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಖರೀದಿ ಮಾಡಿಯೇ ಆಯ್ಕೆ ಮಾಡಲಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ತಡವರಿಸಿದರು. ಅದಕ್ಕೆ ಸಮಜಾಯಿಷಿ ನೀಡಲು ಪ್ರಯತ್ನ ಪಟ್ಟರು.
ಅವರಿಗೆ ಎಚ್.ಎಂ. ರೇವಣ್ಣ ಸಾಥ್ ನೀಡಲು ಮುಂದಾಗಿ ಅವರೂ ಮುಜುಗರಕ್ಕೊಳಗಾದರು. ಆಗಿನ ಸಂದರ್ಭದಲ್ಲಿ ಶಾಸಕರ ಸಂಖ್ಯೆಯ ಕೊರತೆಯಿಂದ ಬೇರೆ ಪಕ್ಷದ ಶಾಸಕರು ಮತ ಹಾಕಿದ್ದರು ಎಂದು ಸಮಜಾಯಿಸಿ ನೀಡಲು ಮುಂದಾದರೆ, ಆಗ ಇಕ್ಬಾಲ್ ಅಹಮದ ಸರಡಗಿ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದರೂ, ಅವರ ಬದಲಿಗೆ ಪಕ್ಷೇತರ ಅಭ್ಯರ್ಥಿ ಬೈರತಿ ಸುರೇಶ್ ಗೆಲುವು ಸಾಧಿಸಲು ಕಾಂಗೆÅಸ್ ಶಾಸಕರೇ ಮತ ಹಾಕಿದ್ದರಲ್ಲಾ ಎಂದು ಕೇಳಿದಾಗ ಎರಡೂ ಪ್ರಕರಣಗಳ ಬಗ್ಗೆ ಸಮರ್ಥಿಸಿಕೊಳ್ಳಲಾಗದೇ ಉಗ್ರಪ್ಪ ಪತ್ರಿಕಾಗೋಷ್ಠಿಯನ್ನು ಅಂತ್ಯಗೊಳಿಸಿದರು.