Advertisement

ಪ್ರಧಾನಿ ಮೋದಿಗಿಲ್ಲ ರೈತಪರ ಕಾಳಜಿ: ಎಚ್‌ಡಿಕೆ

08:07 AM Jan 30, 2018 | |

ಮುದ್ದೇಬಿಹಾಳ: ಮಹದಾಯಿ ನದಿ ನೀರನ್ನು ಕರ್ನಾಟಕ ಬಳಸಲು ಅವಕಾಶ ಒದಗಿಸಿ ಕೊಡುವ ಕುರಿತು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಕೇಂದ್ರಕ್ಕೆ ಮನವರಿಕೆ ಮಾಡಿ ಕೊಟ್ಟಿದ್ದರೂ ಪ್ರಧಾನಿ ಮೋದಿಯವರು ರೈತರ ಬಗ್ಗೆ ಕನಿಕರ ಇಲ್ಲದವರಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

Advertisement

ಮುದ್ದೇಬಿಹಾಳ ತಾಲೂಕಿನ ಹುಲ್ಲೂರ- ಬಸವನ ಬಾಗೇವಾಡಿ ತಾಲೂಕು ಜೀರಲ  ಭಾವಿ ಮಾರ್ಗ ಮಧ್ಯೆ ಕರ್ನಾಟಕ ವಿಕಾಸ ವಾಹಿನಿ ಪ್ರಚಾರ ವಾಹನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಮಹದಾಯಿ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವ ಅಧಿಕಾರ ಪ್ರಧಾನಿಗಿದೆ. ಅಂತಾ ರಾಜ್ಯ ನೀರಿನ ಹಂಚಿಕೆ ವಿಷಯದಲ್ಲಿ ಸಮಸ್ಯೆ ಬಂದಾಗೆಲ್ಲ ಆಗಿನ ಪ್ರಧಾನಿಗಳು ತಾತ್ಕಾಲಿಕ ಪರಿಹಾರ ನೀಡಿದ ಉದಾಹರಣೆಗಳಿವೆ. ಕಾವೇರಿ ನೀರಿನ ಹಂಚಿಕೆಯಲ್ಲಿ ಟ್ರಿಬ್ಯೂನಲ್‌ ಅಂತಿಮ ತೀರ್ಪು ಬರುವುದಕ್ಕೂ ಮೊದಲೇ ಆಗ ಪ್ರಧಾನಿಯಾಗಿದ್ದ ದೇವೇಗೌಡರು, ಅಂತಿಮ ತೀರ್ಪಿಗೆ ಒಳಪಟ್ಟಂತೆ ಇಂತಿಷ್ಟು ನೀರನ್ನು ಕುಡಿಯಲು ಉಪಯೋಗಿಸ ಬಹುದು ಎಂದು ಕರ್ನಾಟಕದ ಪರ ಆದೇಶ ಮಾಡಿದ್ದರು. ಅದೇ ಮಾದರಿಯಲ್ಲಿ ಪ್ರಧಾನಿ ಮೋದಿ ಕೂಡ ಆದೇಶ ಮಾಡಲು ಸಾಧ್ಯವಿದೆ. ಆದರೆ ಇದರಲ್ಲಿ ರಾಜಕೀಯ ನಾಟಕ ನಡೆದಿದೆ ಎಂದರು. 

2 ವರ್ಷದಿಂದ ನಮ್ಮ ರೈತರು ಕುಡಿಯಲು  7.56 ಟಿಎಂಸಿ ನೀರಿನ ಬೇಡಿಕೆ ಇಟ್ಟು ಕೊಂಡು ಮಹದಾಯಿಗಾಗಿ ಹೋರಾಟ ಮಾಡುತ್ತಿದ್ದಾರೆ. ಪ್ರಧಾನಿ ಮನಸ್ಸು ಮಾಡಿದರೆ ಅಂತಿಮ ತೀರ್ಪಿಗೆ ಒಳಪಟ್ಟು ನೀರು ಉಪಯೋಗಿಸಲು ಅನುಮತಿ ಕೊಡಬಹುದು. ಪರಿವರ್ತನಾ ಯಾತ್ರೆ ಆರಂಭಿಸಿ ದಾಗ ಯಡಿಯೂರಪ್ಪ 2017ರ ಡಿ.15ರೊಳಗೆ ಮಹದಾಯಿ ನೀರು ತತೇìನೆ ಅಂತ ಜನರಿಗೆ ಮಾತು ಕೊಟ್ಟರು. ಅಲ್ಲಿಂದ ಇಲ್ಲಿಯವರೆಗೆ ಬಿಜೆಪಿ, ಕಾಂಗ್ರೆಸ್‌ ಒಬ್ಬರ ವಿರುದ್ಧ ಮತ್ತೂಬ್ಬರು ಹೇಳಿಕೆ ಕೊಡುತ್ತಾ ರೈತರ ನಂಬಿಕೆ ಜೊತೆ ಚೆ‌ಲ್ಲಾಟ ಆಡುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಜೆಡಿಎಸ್‌ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಮಹದಾಯಿ ವಿಷಯದಲ್ಲಿ ಜೆಡಿಎಸ್‌ ಕೇಂದ್ರದೊಂದಿಗೆ ಕುಳಿತು ಚರ್ಚಿಸಲು ತೆರೆದ ಮನಸ್ಸು ಹೊಂದಿದೆ. ಏಕೆಂದರೆ ಜೆಡಿಎಸ್‌ ರಾಜ್ಯದಲ್ಲಿ ಸದೃಢವಾದಾಗ ನರೇಂದ್ರ ಮೋದಿ, ಸೋನಿಯಾಗಾಂಧಿ ಎಚ್ಚರಗೊಳ್ಳುತ್ತಾರೆ. ಕರ್ನಾಟಕದ ಜನರ ಭಾವನೆಗಳಿಗೆ ಸ್ಪಂದಿಸದಿದ್ದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ದೇವರಹಿಪ್ಪರಗಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ, ಮಹಾದೇವಿ ಪಾಟೀಲ ನಡಹಳ್ಳಿ ಇದ್ದರು.

ಕೈ ಮುಗಿಯುವೆ ನನ್ನ ಸಂದರ್ಶನ ಬೇಡ
ಬಾಗಲಕೋಟೆ: ಟಿ.ವಿ. ಮಾಧ್ಯಮಗಳು ನನ್ನ ಪಕ್ಷ ಹಾಗೂ ನಮ್ಮ ಸುದ್ದಿಗಳನ್ನೇ ಪ್ರಸಾರ ಮಾಡುತ್ತಿಲ್ಲ. ಹೀಗಾಗಿ ನನ್ನ ಸಮಯ ಏಕೆ ವ್ಯರ್ಥ ಮಾಡಬೇಕು. ಕೈ ಮುಗಿದು ಕೇಳುವೆ ನನ್ನ ಸಂದರ್ಶನವೇ ಬೇಡ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಖಾಸಗಿ ಹೊಟೇಲ್‌ನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ನನ್ನ ಪಕ್ಷ ಹಾಗೂ ನನ್ನ ಸುದ್ದಿಗಳನ್ನು ಕಸದ ಡಬ್ಬಿಗೆ ಬಿಸಾಕುತ್ತಿದ್ದಾರೆ. ಟಿ.ವಿ. ಮಾಧ್ಯಮಗಳು ನಮ್ಮ ಪಕ್ಷದ ಸುದ್ದಿಯನ್ನೇ ಬಿತ್ತರಿಸುತ್ತಿಲ್ಲ. ಬಿಜೆಪಿ-  ಕಾಂಗ್ರೆಸ್‌ ಬಗ್ಗೆ ಮಾತ್ರ ಸುದ್ದಿ ಪ್ರಸಾರ ಮಾಡಲಾಗುತ್ತಿದೆ. ಆದ್ರೆ ಜೆಡಿಎಸ್‌ ಸುದ್ದಿ ಏಕೆ ಪ್ರಸಾರ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈಗ ಎಲ್ಲ ಸುದ್ದಿ ವಾಹಿನಿಗಳು ನಡೆದು ಕೊಳ್ಳುವ ರೀತಿ ನನಗೆ ತೀವ್ರ ನೋವು ತರಿಸಿದೆ. ಹೀಗಾಗಿ ನಾನು ನನ್ನ ಸಮಯ ವ್ಯರ್ಥ ಮಾಡಿಕೊಳ್ಳುವುದಿಲ್ಲ. ಎಲ್ಲದಕ್ಕೂ ನಾನೇಕೆ ರಿಯಾಕ್ಷನ್‌ ಕೊಡಬೇಕು. ನಾನು ಈಗಾಗಲೇ ಮಾಜಿ
ಮುಖ್ಯಮಂತ್ರಿಯಾಗಿ ಹೋಗಿದ್ದೇನೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next