Advertisement

ಯುವಕರ ಆಶಯಗಳನ್ನು ಛಿದ್ರಗೊಳಿಸಿದ ಪ್ರಧಾನಿ ಮೋದಿ: ವೇಣುಗೋಪಾಲ

12:21 PM Jan 12, 2018 | |

ವಿಜಯಪುರ: ಭವ್ಯ ಭಾರತ, ದೇಶಾಭಿಮಾನ, ಯುವಕರಿಂದಲೇ ದೇಶಾಭಿವೃದ್ಧಿ ಅಂತೆಲ್ಲ ಮಾತೃಭೂಮಿ ಕುರಿತು ಭಾವನಾತ್ಮಕತೆ ಕನಸು ಬಿತ್ತಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದ ಕೋಟ್ಯಂತರ ಯುವಕರ ಆಶಯಗಳನ್ನೇ ಛಿದ್ರಗೊಳಿಸಿದ್ದಾರೆ ಎಂದು ಕರ್ನಾಟಕ ರಾಜ್ಯದ ಕಾಂಗ್ರೆಸ್‌ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಕಿಡಿಕಾರಿದರು.

Advertisement

ನಗರದಲ್ಲಿ ಗುರುವಾರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಆಯೋಜಿಸಿದ್ದ ಬೂತ್‌ ಮಟ್ಟದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. ಪೆಟ್ರೋಲ್‌ ಬೆಲೆ ಇಳಿಸುತ್ತೇವೆ. ಅಭಿವೃದ್ಧಿ ಸೂಚ್ಯಾಂಕ ಏರಿಸುತ್ತೇವೆ. ನಿರುದ್ಯೋಗ ನಿವಾರಣೆಗೆ ಕೌಶಲ್ಯ ವೃದ್ಧಿ, ಕೋಟಿ ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ. ಅಂತೆಲ್ಲ ಭಾವನಾತ್ಮಕವಾಗಿ ನೂರಾರು ಕನಸು ಬಿತ್ತಿ ಯುವಕರನ್ನು ದುರ್ಬಳಕೆ ಮಾಡಿಕೊಂಡಿರುವುದೇ ಮೋದಿ ಅವರ ನಾಲ್ಕು ವರ್ಷಗಳ ಸರ್ಕಾರದ ಸಾಧನೆ. ಕಾಮ್‌ಕಿ ಬಾತ್‌ ಇಲ್ಲದ ಮನ್‌ ಕಿ ಬಾತ್‌ ಎಂಬ ಮಾತಿಗೆ ಮಾತ್ರ ಅವರ ಅಭಿವೃದ್ಧಿ ಸೀಮಿತವಾಗಿದೆ.ಯುವಕರ ಸಹನೆ ಕಟ್ಟೆ ಒಡೆಯುವಂತೆ ಮಾಡಿದ್ದಾರೆ ಎಂದು ಟೀಕಿಸಿದರು. 

ಕೆಲವೇ ತಿಂಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಗಳ ವಿರುದ್ಧ ನಮ್ಮ ಹಾಗೂ ಎಲ್ಲ ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಿ ಮತೀಯ ವಾದವನ್ನು ಮಟ್ಟ ಹಾಕಬೇಕಿದೆ. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಇದಕ್ಕಾಗಿ ಮುಂಬೈ-ಕರ್ನಾಟಕದಲ್ಲಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸಲು ಎಐಸಿಸಿ ಕಾರ್ಯದರ್ಶಿ ಮಾಣಿಕಂ ಟ್ಯಾಗೋರ್‌ ನೇತೃತ್ವದಲ್ಲಿ
ಬೂತ್‌ ಮಟ್ಟದಲ್ಲಿ ಕಾರ್ಯಕರ್ತರಿಗೆ ಅಗತ್ಯ ತರಬೇತಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕರ್ತರ ಉತ್ಸಾಹವನ್ನು ಅವಲೋಕಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ವಿಜಯಪುರ ಜಿಲ್ಲಾ ಉಸ್ತುವಾರಿ ಹೊಂದಿರುವ ಜಲಸಂಪನ್ಮೂಲ ಸಚಿವ ಡಾ|ಎಂ.ಬಿ. ಪಾಟೀಲ ಮಾತನಾಡಿ, ಗುಜರಾತ್‌ ವಿಧಾನಸಭೆಯಲ್ಲಿ ಮೇಲ್ವರ್ಗದ ಪಟೇಲರು, ಅಹಿಂದ ವರ್ಗಗಳ ಎಲ್ಲ ಸಮುದಾಯಗಳು, ವ್ಯಾಪಾರಿಗಳೆಲ್ಲ ಒಗ್ಗಟ್ಟಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದರೂ ಕೆಲವೇ ಸ್ಥಾನಗಳ ಕೊರತೆ ಪರಿಣಾಮ ಅ ಧಿಕಾರ ಕೈತಪ್ಪಿದೆ. ಬೂತ್‌ ಮಟ್ಟದ ಕಾರ್ಯಕರ್ತರ ಕ್ರಿಯಾಶೀಲತೆ ಕೊರತೆ ಜತೆಗೆ ಚುನಾವಣೆ ಮತಗಟ್ಟೆಗಳಲ್ಲಿ ಪಕ್ಷದ ಏಜೆಂಟರು ಇರಲಿಲ್ಲ. ಹೀಗಾಗಿ ಕೆಲವೇ ಸ್ಥಾನಗಳ ಅಂತರದಲ್ಲಿ ಅಧಿಕಾರ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಕರ್ನಾಟಕ ರಾಜ್ಯದಲ್ಲಿ ಇಂಥ ಅಚಾತುರ್ಯಕ್ಕೆ ಅವಕಾಶ ನೀಡದಂತೆ ಕಾರ್ಯಕರ್ತರು ಪ್ರಾಮಾಣಿಕ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.

ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ 8ರಲ್ಲಿ 7 ಕ್ಷೇತ್ರಗಳನ್ನು ಕಾಂಗ್ರೆಸ್‌ ಗೆದ್ದಿದ್ದು, ಈ ಬಾರಿ 8 ಸ್ಥಾನ ಗೆಲ್ಲಲು ಕಾರ್ಯಕರ್ತರು ಈಗಿನಿಂದಲೇ ಮತಗಟ್ಟೆ ಹಂತದಲ್ಲಿ ಪಕ್ಷವನ್ನು ಸಂಘಟಿಸಬೇಕು ಎಂದು ಸೂಚಿಸಿದರು. ಯುಪಿಎ ಆಡಳಿತಾವಧಿಯಲ್ಲಿ ಇಂಧನ ಸಚಿವರಾಗಿದ್ದ ಸುಶೀಲಕುಮಾರ ಸಿಂಧೆ ಅವರಿಗೆ ಸಹಾಯಕ ಸಚಿವರಾಗಿದ್ದ ಕೆ.ಸಿ. ವೇಣುಗೋಪಾಲ ಅವರ ಪರಿಶ್ರಮದ ಫಲವಾಗಿಯೇ ವಿಜಯಪುರ ಜಿಲ್ಲೆಯ ಕೂಡಗಿ ಬಳಿ ಎನ್‌ಟಿಪಿಸಿ ಸೂಪರ್‌ ಥರ್ಮಲ್‌ ಘಟಕ ಸ್ಥಾಪನೆ ಸಾಧ್ಯವಾಯಿತು. ಅದರೊಂದಿಗೆ ಕೈಗಾರಿಕಾ ನಕ್ಷೆಯಲ್ಲಿ ವಿಜಯಪುರ ಜಿಲ್ಲೆಗೂ ಮಹತ್ವದ ಸ್ಥಾನ ತಂದುಕೊಟ್ಟಿದ್ದಾರೆ ಎಂದು ಬಣ್ಣಿಸಿದರು. 

Advertisement

ಎಐಸಿಸಿ ಕಾರ್ಯದರ್ಶಿ ಮಾಣಿಕಂ ಟ್ಯಾಗೋರ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ, ಜಿಲ್ಲೆಯ ಕಾಂಗ್ರೆಸ್‌ ಶಾಸಕರಾದ ಡಾ| ಎಂ.ಎಸ್‌.ಬಾಗವಾನ, ಪ್ರೊ| ರಾಜು ಆಲಗೂರ, ಕೆಪಿಸಿಸಿ ವೀಕ್ಷಕ ಡಿ.ಆರ್‌.ಪಾಟೀಲ, ಜಲಜಾ ನಾಯಕ, ಡಿ.ಸಿ. ಚಂದ್ರಶೇಖರ, ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ, ದಯಾನಂದ ಪಾಟೀಲ, ಕಾಂತಾ ನಾಯಕ, ರಾಮಲಿಂಗಯ್ಯ, ಬಿ.ಆರ್‌. ನಾಯ್ಡು, ಬಸವಪ್ರಭು ಸರನಾಡಗೌಡ, ಸಂಗಮೇಶ ಬಬಲೇಶ್ವರ, ಬ್ಲಾಕ್‌ ಅಧ್ಯಕ್ಷ ಜಾವೀದ್‌ ಬಾಗವಾನ, ಮಂಜುಳಾ ಗಾಯಕವಾಡ, ಅಫ್ತಾಬ ಖಾದ್ರಿ, ಕಾಂಗ್ರೆಸ್‌ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಹಾದೇವಿ ಗೋಕಾಕ, ಅಜಯ ಪಾಟೀಲ ಮತ್ತಿತರ ಪದಾ ಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next