Advertisement

ವಾರಣಾಸಿಯಲ್ಲಿ ಇಂದು ಮೋದಿ ಮೇನಿಯಾ

10:00 AM Apr 26, 2019 | Hari Prasad |

ವಾರಣಾಸಿ: ಉತ್ತರಪ್ರದೇಶದ ದೇವಳಗಳ ನಗರಿ ವಾರಣಾಸಿಯಿಂದ ಮರು ಆಯ್ಕೆ ಬಯಸಿ ಪ್ರಧಾನಿ ನರೇಂದ್ರ ಮೋದಿ ಅವರು ಎಪ್ರಿಲ್‌ 26ನೇ ಶುಕ್ರವಾರದಂದು ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ಗುರುವಾರದಂದು ವಾರಣಾಸಿಯಲ್ಲಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಇತರೇ ಪ್ರಮುಖ ನಾಯಕರೊಂದಿಗೆ ಹಾಗೂ ಬಿಜೆಪಿ ಅಧಿಕಾರದಲ್ಲಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೂಡಿ ಮೆಗಾ ರೋಡ್‌ ಶೋ ನಡೆಸಲಿದ್ದಾರೆ.

Advertisement

ಪ್ರಧಾನಿ ಮೋದಿ ಅವರಿಗೆ ಎನ್‌.ಡಿ.ಎ. ಮೈತ್ರಿಕೂಟದ ಪ್ರಮುಖ ನಾಯಕರೂ ಸಾಥ್‌ ನೀಡಲಿದ್ದಾರೆ. ಮೋದಿ ರೋಡ್‌ ಶೋ ಕಾರ್ಯಕ್ರಮಕ್ಕಾಗಿ ವಾರಣಾಸಿ ನಗರ ಕೇಸರಿಮಯಗೊಂಡಿದ್ದು ಭದ್ರತೆಯನ್ನು ಆತ್ಯುನ್ನತ ಸ್ಥಿತಿಯಲ್ಲಿರಿಸಲಾಗಿದೆ. ಡ್ರೋಣ್‌ ಕೆಮರಾಗಳ ಮೂಲಕ ನಗರದೆಲ್ಲೆಡೆ ಹದ್ದಿನ ಕಣ್ಣಿನ ಕಾವಲು ಹಾಕಲಾಗಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಕೇಂದ್ರ ಸಚಿವರಾಗಿರುವ ನಿತಿನ್‌ ಗಡ್ಕರಿ, ಸುಷ್ಮಾ ಸ್ವರಾಜ್‌, ಪೀಯೂಷ್‌ ಗೋಯಲ್‌ ಸೇರಿದಂತೆ ಎನ್‌.ಡಿ.ಎ. ನಾಯಕರಾಗಿರುವ ಲಕ್ಷ್ಮಣ್‌ ಆಚಾರ್ಯ, ಸುನೀಲ್‌ ಓಝಾ ಮತ್ತು ಅಶುತೋಷ್‌ ಟಂಡನ್‌ ಪ್ರಧಾನಿ ಮೋದಿ ರೋಡ್‌ ಶೋ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.


ಗುರುವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಾರಣಾಸಿಯ ಬಬತ್‌ ಪುರ್‌ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಅಲ್ಲಿಂದ ನೇರವಾಗಿ ಅವರು ಕಾಲ ಭೈರವ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಬನಾರಸ್‌ ಹಿಂದೂ ವಿಶ್ವವಿದ್ಯಾನಿಲಯದ ಲಂಕಾ ಗೇಟ್‌ ನಿಂದ ಸುಮಾರು 3 ಗಂಟೆಯ ಹೊತ್ತಿಗೆ ರೋಡ್‌ ಶೋ ಪ್ರಾರಂಭವಾಗುವ ನಿರೀಕ್ಷೆಯಿದೆ. ಇಲ್ಲಿ ಇರುವ ಪಂಡಿತ್‌ ಮದನ್‌ ಮೋಹನ್‌ ಮಾಳವೀಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ರೋಡ್‌ ಶೋಗೆ ಚಾಲನೆ ನೀಡಲಿದ್ದಾರೆ.

ಈ ರೋಡ್‌ ಶೋ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಜಾಥಾ ವಾಹನವು ವಾರಣಾಸಿಯ 150 ಕಡೆಗಳಲ್ಲಿ ಸಾಗಿಬರಲಿದೆ. ಇದರಲ್ಲಿ ಮುಸ್ಲಿಂ ಬಾಹುಳ್ಯವಿರುವ ಮದನ್‌ ಪುರ ಹಾಗೂ ಸೋನರ್‌ ಪುರ ಪ್ರದೇಶಗಳೂ ಸೇರಿವೆ. ಸಾಯಂಕಾಲ 6.30ರ ಸುಮಾರಿಗೆ ಇಲ್ಲಿನ ಪುರಾಣ ಪ್ರಸಿದ್ಧ ‘ದಶಾಶ್ವಮೇಧ ಘಾಟ್‌’ನಲ್ಲಿ ಗಂಗಾರತಿ ನೆರವೇರಿಸುವುದರೊಂದಿಗೆ ಪ್ರಧಾನಿ ಮೋದಿ ಅವರ ಈ ಮೆಗಾ ರೋಡ್‌ ಶೋ ಕೊನೆಗೊಳ್ಳಲಿದೆ.

Advertisement

ಇದಾದ ಬಳಿಕ ಪ್ರಧಾನಿ ಮೋದಿ ಅವರು ಸಮಾಜದ ವಿವಿದ ಸ್ತರಗಳ ಸುಮಾರು 3000 ಜನರೊಂದಿಗೆ ನಗರದಲ್ಲಿರುವ ಡಿ ಪ್ಯಾರಿಸ್‌ ಹೊಟೇಲಿನಲ್ಲಿ ಸಂವಾದ ನಡೆಸಲಿದ್ದಾರೆ. ಇದು ಅವರ ‘ಮಿಶನ್‌ ಆಲ್‌’ ಕಾರ್ಯಕ್ರಮದ ಒಂದು ಭಾಗವಾಗಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next