ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆ ಘೋಷಣೆಯಾಗಿ 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಎ. 9ರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ಮೋದಿ 7 ಗಂಟೆ ಸುಮಾರಿಗೆ ಬಂಡೀಪುರ ಅಭಯಾರಣ್ಯದ ಮೇಲು ಕಾಮನಹಳ್ಳಿಯ ಸಫಾರಿ ಕೇಂದ್ರದ ಬಳಿ ನಿರ್ಮಿಸಿರುವ ಹೆಲಿಪ್ಯಾಡ್‌ನಲ್ಲಿ ಬಂದು ಇಳಿಯ ಲಿದ್ದಾರೆ. ಅನಂತರ ಸುಮಾರು ಎರಡು ತಾಸು ಸಫಾರಿ ನಡೆಸಲಿದ್ದಾರೆ.
ಅನಂತರ 9.35ಕ್ಕೆ ರಸ್ತೆ ಮಾರ್ಗದ ಮೂಲಕ ನೆರೆಯ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡುವರು. ಈ ವೇಳೆ “ದಿ ಎಲಿಫೆಂಟ್ ವಿಸ್ಪರರ್ಸ್’ನ ಪ್ರಮುಖ ಪಾತ್ರಧಾರಿಗಳಾದ ಕಾವಾಡಿ ದಂಪತಿ ಬೊಮ್ಮ ಮತ್ತು ಬೆಳ್ಳಿ ಅವರನ್ನು ಭೇಟಿ ಮಾಡಲಿ ದ್ದಾರೆ. ಬಳಿಕ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ದೇಶಕ ರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ 9.45ಕ್ಕೆ ತೆಪ್ಪಕಾಡು ಆನೆ ಶಿಬಿರದ ಬಳಿ ನಿರ್ಮಿಸಿರುವ ಹೆಲಿಪ್ಯಾಡ್ ಮೂಲಕ ಮೈಸೂರಿಗೆ ತೆರಳಲಿದ್ದಾರೆ.
ಈಗಾಗಲೇ ಬಂಡೀಪುರವನ್ನು ವಿಶೇಷ ಭದ್ರತ ದಳದ ಸಿಬಂದಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಹೈ ಅಲರ್ಟ್ ಘೋಷಣೆ ಮಾಡಿ ಹೆಚ್ಚಿನ ನಿಗಾ ಇರಿಸಿದ್ದಾರೆ.
ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಶನಿವಾರ ಸಂಜೆ 4ರಿಂದ ರವಿವಾರ ಮಧ್ಯಾಹ್ನ 12ರ ವರೆಗೆ ರಾಷ್ಟ್ರೀಯ ಹೆದ್ದಾರಿ-181 ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದ ತಮಿಳುನಾಡಿಗೆ ತೆರಳುವ ಪ್ರಯಾಣಿಕರು ಅನಿವಾರ್ಯವಾಗಿ ಬದಲಿ ಮಾರ್ಗವಾಗಿ ತೆರಳಬೇಕಾಗಿದೆ.