Advertisement
ನಗರದ ಎಂಜಿಎಂ ಕಾಲೇಜು ಮೈದಾನದಲ್ಲಿ ಅಪರಾಹ್ನ 1 ಗಂಟೆಗೆ ಸಭೆ ಆರಂಭವಾಗಲಿದ್ದು, ಸುಮಾರು 1 ಲಕ್ಷ ಮಂದಿ ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಸೇರುವ ನಿರೀಕ್ಷೆ ಇದೆ. ಅಪರಾಹ್ನ 3ಕ್ಕೆ ಮೋದಿಯವರು ಭಾಷಣ ಮಾಡಲಿರುವರು. ಹಾಗಾಗಿ ಸಾರ್ವಜನಿಕರು, ಕಾರ್ಯಕರ್ತರು 1 ಗಂಟೆಯ ಮೊದಲು ಮೈದಾನದೊಳಗೆ ಪ್ರವೇಶಿಸಬೇಕಿದೆ. ಉಡುಪಿಯಲ್ಲದೆ, ದಕ್ಷಿಣ ಕನ್ನಡ ಹಾಗೂ ನೆರೆಯ ಜಿಲ್ಲೆಗಳ ಜನರೂ ಪಾಲ್ಗೊಳ್ಳುವ ಸಾಧ್ಯತೆ ಇದೆ. ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಮುಖಂಡರು, ಬಿಜೆಪಿ ಅಭ್ಯರ್ಥಿಗಳು ಪಾಲ್ಗೊಳ್ಳುವರು ಎಂದು ಜಿಲ್ಲಾ ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಭೇಟಿಯ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರಮುಖ ಮುಖಂಡರು ಸಿದ್ಧತಾ ಸಭೆ ನಡೆಸಿದರು.
Related Articles
ಒಂದು ವಾರದಿಂದಲೇ ನಗರದಲ್ಲಿ ಠಿಕಾಣಿ ಹೂಡಿರುವ ಎಸ್.ಪಿ.ಜಿ. ತಂಡಗಳು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಂಡಿವೆ. ಎ. 30ರಂದು ಹೆಲಿಪ್ಯಾಡ್ ನಿಂದ ಎಂಜಿಎಂ ಕಾಲೇಜು ಮೈದಾನದವರೆಗೆ ಪ್ರಧಾನಿಯವರನ್ನು ಬೆಂಗಾವಲಿನೊಂದಿಗೆ ಕರೆತರುವ ರಿಹರ್ಸಲ್ ಸಹ ನಡೆಸಲಾಗಿದೆ.
Advertisement
ಪ್ರಧಾನಿ ಮೋದಿ ಭಾಷಣ ಮಾಡಲಿರುವ ಎಂ.ಜಿ.ಎಂ. ಮೈದಾನದಲ್ಲಿ ಬೃಹತ್ ಪೆಂಡಾಲ್ ಸಿದ್ಧವಾಗಿದೆ. ಬಿಗಿ ಬಂದೋಬಸ್ತ್
ಐಜಿಪಿ, ಜಿಲ್ಲಾ ಎಸ್‌ಪಿ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು ಈಗಾಗಲೇ ಬಿಗಿ ಬಂದೋಬಸ್ತ್ ಗೂ ಕ್ರಮ ಕೈಗೊಂಡಿದ್ದಾರೆ. ಅಗತ್ಯದಷ್ಟು ಪೊಲೀಸ್ ಸಿಬಂದಿಯನ್ನು ನಿಯೋಜಿಸಲಾಗಿದೆ. ಪ್ರಧಾನಿ ಆಗಮನದ ಹಾದಿಯಲ್ಲಿ ಯಾವುದೇ ಭದ್ರತಾ ಲೋಪವಾಗಬಾರದೆಂದು ವಾಹನ ಸಂಚಾರವನ್ನು ಕೆಲವೆಡೆ ನಿಷೇಧಿಸಿ, ಇನ್ನು ಕೆಲವೆಡೆ ಪರ್ಯಾಯ ಮಾರ್ಗಗಳಿಗೆ ಬದಲಿಸಲಾಗಿದೆ. ನಗರ ಸ್ವಚ್ಛ
ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ಸೋಮವಾರ ನಗರಸಭೆಯ ಸಿಬಂದಿ ನಗರದ ಪ್ರಮುಖ ರಸ್ತೆಗಳ ಬದಿಯ ಕಳೆಗಿಡಗಳನ್ನು ಸವರಿ ಸ್ವಚ್ಛಗೊಳಿಸಿದರು. ಜತೆಗೆ ಕೆಲವೆಡೆ ರಸ್ತೆಯಲ್ಲಿದ್ದ ಗುಂಡಿಗಳಿಗೆ ಡಾಮರು ಹಾಕಿ ದುರಸ್ತಿಗೊಳಿಸಲಾಯಿತು. ಇಂದು ಡಿಡಿಪಿಯು ಕಚೇರಿ ನಗರಕ್ಕೆ ಶಿಫ್ಟ್
ಉಡುಪಿ: ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆ ಬದಲಾಯಿಸಲಾಗುತ್ತದೆ. ಇದರ ಪರಿಣಾಮ ದ್ವಿತೀಯ ಪಿಯುಸಿ ಫಲಿತಾಂಶ ನೋಡುವುದಕ್ಕಾಗಿ ನಗರದ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಅಡಚಣೆಯಾಗುವ ಸಾಧ್ಯತೆ ಇದೆ. ಪ.ಪೂ. ಶಿಕ್ಷಣ ಇಲಾಖೆಯ ಅಧಿಕಾರಿ ಕಚೇರಿಯನ್ನು ಮೇ 1ರಂದು ತಾತ್ಕಾಲಿಕವಾಗಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಿಂದ ಉಡುಪಿ ಸರ್ವೀಸ್ ಬಸ್ ನಿಲ್ದಾಣ ಬಳಿ ಇರುವ ಬೋರ್ಡ್ ಹೈಸ್ಕೂಲ್‌ಗೆ ಸ್ಥಳಾಂತರಿಸಲಾಗಿದೆ. ಅಲ್ಲಿಯೇ ಎಲ್ಲ ಕಾಲೇಜುಗಳ ಫಲಿತಾಂಶ ಪಟ್ಟಿಯನ್ನು ಕಾಲೇಜು ಪ್ರಾಂಶುಪಾಲರು/ಉಪನ್ಯಾಸಕರಿಗೆ ನೀಡಲಾಗುವುದು. ಮೇ 5ರಂದು ಮಂಗಳೂರಿಗೆ ಮೋದಿ
ಮಂಗಳೂರು: ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮೇ 5ರಂದು ದ. ಕನ್ನಡ ಜಿಲ್ಲೆಗೆ ಆಗಮಿಸಿ ಪ್ರಚಾರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮೇ 8ರಂದು ಸಭೆಯನ್ನು ಉದ್ದೇಶಿಸಿ ಮಾತನಾಡುವ ಬಗ್ಗೆ ಈ ಮೊದಲು ತೀರ್ಮಾನವಾಗಿತ್ತು. ಆದರೆ ಸದ್ಯ ಬದಲಾವಣೆ ಆಗಿದ್ದು, ಮೇ 8ರ ಬದಲು ಮೇ 5ರಂದೇ ಸಂಜೆ 6ಕ್ಕೆ ನಗರದಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡುವ ಬಗ್ಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಬಹುತೇಕ ನೆಹರೂ ಮೈದಾನದಲ್ಲೇ ಸಭೆ ಆಯೋಜಿಸಲು ಯೋಚಿಸಲಾಗಿದೆ. ಆದರೆ ಸಭೆಯ ಸ್ಥಳದ ಬಗ್ಗೆ ಇನ್ನೂ ಅಂತಿಮವಾಗಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಉದಯವಾಣಿಗೆ ತಿಳಿಸಿದ್ದಾರೆ.