Advertisement

ನಾಡಿದ್ದು ಬಳ್ಳಾರಿಗೆ ಪ್ರಧಾನಿ ಮೋದಿ

04:27 PM May 01, 2018 | Team Udayavani |

ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆ ನಿಮಿತ್ತ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮೇ 3 ರಂದು ಜಿಲ್ಲೆಗೆ ಆಗಮಿಸುತ್ತಿದ್ದು, ನಗರದ ಜಿಲ್ಲಾ ಕ್ರೀಡಾಂಗನದಲ್ಲಿ ಅಂದು ನಡೆಯಲಿರುವ ಬಹಿರಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ, ಮೃತ್ಯುಂಜಯ ಜಿನಗಾ ಹೇಳಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಮೇ 3 ರಂದು ಕಲಬುರಗಿಯಿಂದ ಮಧ್ಯಾಹ್ನ 12 ಗಂಟೆಗೆ ಬಳ್ಳಾರಿಗೆ ಆಗಮಿಸಲಿದ್ದು, ನಗರದ ಹೆಲಿಪ್ಯಾಡ್‌ನಿಂದ ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಿ, ಬಹಿರಂಗ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.

 ಜಿಲ್ಲೆಯ 9 ಕ್ಷೇತ್ರಗಳಿಂದ ಪಕ್ಷದ ಕಾರ್ಯಕರ್ತರು ಸೇರಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಸಚಿವರಾದ ಪ್ರಕಾಶ್‌ ಜಾವಡೇಕರ್‌ ಮತ್ತು ಪಿಯೂಷ್‌ ಗೋಯಲ್‌, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ್‌, ರವಿಕುಮಾರ್‌ ಆಗಮಿಸಲಿದ್ದಾರೆ ಎಂದು ಹೇಳಿದರು. 

ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಈಗಾಗಲೇ ವೇದಿಕೆ ಸಿದ್ಧವಾಗುತ್ತಿದೆ. ಇದಕ್ಕಾಗಿ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಎಸ್‌ಪಿಜಿ ಅಧಿಕಾರಿಗಳು ಸಹ ಸ್ಥಳ ಪರಿಶೀಲನೆ ನಡೆಸಿದ್ದು, ಒಟ್ಟಿನಲ್ಲಿ ವೇದಿಕೆ ಕಾರ್ಯಕ್ರಮಗಳು ಭರದಿಂದ ಸಾಗಿದೆ. ಪಕ್ಷದಲ್ಲೂ ಒಂದು ಸಭೆ ನಡೆಸಿದ್ದು, ನಗರದ ಅಲಂಕಾರ ಮತ್ತು ಸ್ವತ್ಛತೆಗಾಗಿ ಕೆಲ ಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಜವಾಬ್ದಾರಿಗಳನ್ನು ವಹಿಸಿಕೊಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಯಶಸ್ವಿಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. 9 ಕ್ಷೇತ್ರಗಳ ಕಾರ್ಯಕರ್ತರನ್ನು ಕರೆತರುವ ಜವಾಬ್ದಾರಿಯನ್ನು ಆಯಾ ಅಭ್ಯರ್ಥಿಗಳಿಗೆ ವಹಿಸಲಾಗಿದೆ. ಎಲ್ಲ ಅಭ್ಯರ್ಥಿಗಳು ವೇದಿಕೆ ಮೇಲೆ ಆಸೀನರಾಗಲಿದ್ದಾರೆ. ಪಕ್ಷದಲ್ಲಿ ಬಂಡಾಯ ಎದ್ದಿರುವ ಅಭ್ಯರ್ಥಿಗಳ ಮನವೊಲಿಸುವ ಕೆಲಸದಲ್ಲಿ ಜಿಲ್ಲಾಧ್ಯಕ್ಷರು ನಿರತರಾಗಿದ್ದಾರೆ ಎಂದರು. 

Advertisement

ಮಾಜಿ ಶಾಸಕ, ನಗರಕ್ಷೇತ್ರದ ಅಭ್ಯರ್ಥಿ ಜಿ. ಸೋಮಶೇಖರರೆಡ್ಡಿ ಮಾತನಾಡಿ, ನಗರದಲ್ಲಿ ಪ್ರಚಾರದ ವೇಳೆ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಸುವಂತೆ ಜನರು ಒತ್ತಾಯಿಸಿದ್ದರು. ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ಮೋದಿ ದೇವರಾಗಿದ್ದು, ಜನರಿಗೆ ಸೇವಕರಾಗಿದ್ದಾರೆ. 

ಜನರು ಬಿಜೆಪಿಯತ್ತ ಹೆಚ್ಚಿನ ಒಲವು ತೋರುತ್ತಿರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿ ಅನಿಲ್‌ ಲಾಡ್‌ ಹೊಟ್ಟೆ ಕಿಚ್ಚಿನಿಂದ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದಕ್ಕೆಲ್ಲ ಕಿವಿ ಕೊಡುವುದಿಲ್ಲ. ನಮ್ಮ ವಿರುದ್ಧ ಮಾತನಾಡುತ್ತಿರುವ ಸಮಾಜ ಪರಿವರ್ತನಾ ಸಮುದಾಯದ ಎಸ್‌.ಆರ್‌. ಹಿರೇಮಠ ಅವರ ಮಾತುಗಳು ಸಹ ಆಶೀರ್ವಾದದ ಸಮಾನ ಎಂದು ತಿಳಿದುಕೊಂಡಿದ್ದೇವೆ ಎಂದರು.

ತೆಲಂಗಾಣದ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವೇಂದ್ರ ರೆಡ್ಡಿ ಮಾತನಾಡಿ, ತೆಲುಗು, ಕನ್ನಡ ಎಂದು ಭಾಷೆಗಳ ಮೇಲೆ ರಾಜಕೀಯ ಮಾಡುತ್ತಿಲ್ಲ. ನಮ್ಮ ಮುಂದೆ ಬರೀ ಬಿಜೆಪಿ, ಕಾಂಗ್ರೆಸ್‌ ಮಾತ್ರ. ರಾಜ್ಯದಲ್ಲಿ ಭಾಷೆಗಳ ಭೇದಭಾವವಿಲ್ಲ. ಜಿಲ್ಲೆಯಲ್ಲಿ ದಿನೇದಿನೆ ಬಿಜೆಪಿ ಬಲಿಷ್ಠವಾಗುತ್ತಿದ್ದು, 9 ಕ್ಷೇತ್ರಗಳಲ್ಲೂ ನಿಚ್ಚಳ ಬಹುಮತದೊರೆಯುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ಸಮರ್ಥಿಸಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next