ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಮಾಹಿತಿಯನ್ನು ಪ್ರಧಾನಮಂತ್ರಿಯವ ಕಛೇರಿ ಮೂಲಗಳು ಖಚಿತಪಡಿಸಿವೆ.
ದೇಶಾದ್ಯಂತ ಕೋವಿಡ್ ವೈರಸ್ ನಿರ್ಭಂಧ ಸಂಬಂಧಿತ ಲಾಕ್ ಡೌನ್ ಜಾರಿಗೊಂಡ ಬಳಿಕ ದೇಶವಾಸಿಗಳನ್ನುದ್ದೇಶಿಸಿ ಪ್ರಧಾನಿಯವರು ಮಾಡುತ್ತಿರುವ ಮೂರನೇ ಭಾಷಣ ಇದಾಗಿದೆ.
ಪ್ರಧಾನಿ ಮೋದಿ ಅವರು ನಿನ್ನೆಯಷ್ಟೇ
ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮ್ಯಾರಥಾನ್ ವಿಡಿಯೋ ಕಾನ್ಫೆರೆನ್ಸ್ ಸಭೆಯನ್ನು ನಡೆಸಿದ್ದರು. ಹಾಗೂ ಈ ಸಭೆಯಲ್ಲಿ ದೇಶದಲ್ಲಿ ಕೋವಿಡ್ ನಿಯಂತ್ರಣ, ಲಾಕ್ ಡೌನ್ ಸಡಿಲಿಕೆ, ರೈಲು ಸಂಚಾರ ಪುನರಾರಂಭ, ಆರ್ಥಿಕತೆಗೆ ಬಲ ತುಂಬುವುದೂ ಸೇರಿದಂತೆ ಹಲವಾರು ವಿಚಾರಗಳನ್ನು ಚರ್ಚಿಸಲಾಗಿತ್ತು.
ದೇಶಾದ್ಯಂತ ಜಾರಿಯಲ್ಲಿರುವ ಮೂರನೇ ಹಂತದ ಲಾಕ್ ಡೌನ್ ಅವಧಿ ಮೇ17ಕ್ಕೆ ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಹಲವಾರು ಆರ್ಥಿಕ ಚಟುವಟಿಕೆಗಳಿಗೆ ಅವಕಾಶವನ್ನು ನೀಡಲಾಗಿದೆ ಹಾಗೂ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಸರಕಾರಿ ವ್ಯವಸ್ಥೆಯಲ್ಲೇ ಅವಕಾಶವನ್ನು ಮಾಡಿಕೊಡಲಾಗಿದೆ.
ಮುಖ್ಯಮಂತ್ರಿಗಳೊಂದಿಗೆ ನಿನ್ನೆ ಪ್ರಧಾನಿಯವರು ನಡೆಸಿದ್ದ ಸಭೆಯಲ್ಲಿ ಲಾಕ್ ಡೌನ್ ಮುಂದುವರಿಕೆಗೆ ಸಂಬಂಧಿಸಿದಂತೆ ವಿವಿಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಮತ್ತು ಕೋವಿಡ್ ನಿಯಂತ್ರಣ ವಿಚಾರದಲ್ಲಿ ರಾಜ್ಯಗಳಿಗೆ ಇನ್ನಷ್ಟು ನಿರ್ಧಾರಾತ್ಮಕ ಸ್ವಾತಂತ್ರ್ಯವನ್ನು ನೀಡಬೇಕೆಂಬ ಅಭಿಪ್ರಾಯವೂ ಇಲ್ಲಿ ವ್ಯಕ್ತವಾಗಿತ್ತು.
ಈ ಎಲ್ಲಾ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರ ಇಂದಿನ ಭಾಷಣ ಕುತೂಹಲ ಮೂಡಿಸಿದೆ.