ಹೊಸದಿಲ್ಲಿ: ಮೂರು ವಾರಗಳ ಲಾಕ್‌ಡೌನ್ ಅವಧಿಯಲ್ಲಿ ಪ್ರಧಾನಿ ಮೋದಿ ಏನು ಮಾಡುತ್ತಿದ್ದಾರೆ? ಇದು ದೇಶದ ಬಹುತೇಕರಿಗೆ ಇರುವ ಕುತೂಹಲ. ಲಾಕ್‌ಡೌನ್ ಬಳಿಕ ಭಾನುವಾರ ನಡೆದ ಮೊದಲ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಕೇಳುಗರೊಬ್ಬರು ಇದೇ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರವಾಗಿ ಪ್ರಧಾನಿ ಸೋಮವಾರ ಬೆಳಗ್ಗೆ ಅನಿಮೇಟೆಡ್ ಯೋಗ ವಿಡಿಯೋಗಳನ್ನು ಟ್ವೀಟ್ ಮಾಡಿದ್ದಾರೆ.
ಈ ಲಾಕ್‌ಡೌನ್ ದಿನಗಳಲ್ಲಿ ನಿಮ್ಮನ್ನು ನೀವು ಚಟುವಟಿಕೆಯಿಂದ ಇರಿಸಿಕೊಳ್ಳಲು ಏನು ಮಾಡುತ್ತಿದ್ದೀರಿ ಎಂದು ಭಾನುವಾರದ ಮನ್ ಕಿ ಬಾತ್‌ನಲ್ಲಿ ಕೇಳುಗರೊಬ್ಬರು ಪ್ರಧಾನಿಯನ್ನು ಪ್ರಶ್ನಿಸಿದ್ದರು. ಅದರಂತೆ ಯೋಗ ವಿಡಿಯೋಗಳನ್ನು ಶೇರ್ ಮಾಡಿರುವ ಪ್ರಧಾನಿ, ಪ್ರತಿನಿತ್ಯ ವಿವಿಧ ಯೋಗಾಸನಗಳನ್ನು ಮಾಡುವುದರಿಂದ ದೈಹಿಕ ದೃಢತೆ ಸಾಧ್ಯವಾಗಿದೆ.
ನಾನು ಫಿಟ್‌ನೆಸ್ ಅಥವಾ ವೈದ್ಯಕೀಯ ತಜ್ಞನಲ್ಲ. ಆದರೆ, ಯೋಗಾಭ್ಯಾಸವು ಹಲವು ವರ್ಷಗಳಿಂದ ನನ್ನ ಜೀವನದ ಅವಿಭಾಜ್ಯ ಅಂಗವೇ ಆಗಿದ್ದು, ಇದರಿಂದ ನನಗೆ ಸಾಕಷ್ಟು ಪ್ರಯೋಜನಗಳಾಗಿವೆ. ಯೋಗ ವಿಡಿಯೋಗಳು ವಿವಿಧ ಭಾಷೆಗಳಲ್ಲಿ ಲಭ್ಯವಿದ್ದು, ನೀವೂ ಒಮ್ಮೆ ನೋಡಿ. ಹ್ಯಾಪಿ ಯೋಗ ಪ್ರಾಕ್ಟೀಸ್… ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.