ಬೆಂಗಳೂರು: ಕೊಡಗಿನಲ್ಲಿ ಮಳೆಯಿಂದ ಆಗಿರುವ ಹಾನಿ ಹಾಗೂ ಪರಿಹಾರ ಮತ್ತು ರಕ್ಷಣಾ ಕಾರ್ಯಗಳ ಕುರಿತು ರಾಷ್ಟ್ರಪತಿ
ರಾಮನಾಥ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದ
ಮಾಹಿತಿ ಪಡೆದಿದ್ದಾರೆ.
ಭಾನುವಾರ ಮುಖ್ಯಮಂತ್ರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ರಾಷ್ಟ್ರಪತಿ ಮತ್ತು ಪ್ರಧಾನಿ, ಪರಿಸ್ಥಿತಿ ಬಗ್ಗೆ
ವಿವರ ಕೇಳಿದರು. ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲು ಸಿದಟಛಿವಿದೆ ಎಂದು ಭರವಸೆ ನೀಡಿದರು.
ನಿರಂತರ ಮಳೆ ಹಾಗೂ ಭೂಕುಸಿತದಿಂದ ಕೊಡಗಿನಲ್ಲಿ ಅಪಾರ ಹಾನಿಯಾಗಿದೆ. 6 ಮಂದಿ ಜೀವ ಕಳೆದುಕೊಂಡಿದ್ದು, 3,500 ಮಂದಿಯನ್ನು ಅಪಾಯದಿಂದ ರಕ್ಷಿಸಲಾಗಿದೆ. ಶನಿವಾರದಿಂದೀಚೆಗೆ ಎರಡು ತಿಂಗಳ ಮಗು ಸೇರಿದಂತೆ 317 ಜನರನ್ನು ಮಳೆ ಹಾನಿ ಪ್ರದೇಶದಿಂದ ರಕ್ಷಿಸಿ, ನಿರಾಶ್ರಿತರ ಕೇಂದ್ರಕ್ಕೆ ಸುರಕ್ಷಿತವಾಗಿ ತಲುಪಿಸಲಾಗಿದೆ. ಆಹಾರ ಮತ್ತು ಅಗತ್ಯ ವಸ್ತುಗಳ ವ್ಯವಸ್ಥೆ ಮಾಡಲಾಗಿದೆ. ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ನಾಗರಿಕ ರಕ್ಷಣಾ ತಂಡ, ಅಗ್ನಿಶಾಮಕ ದಳ ಹಾಗೂ ತುರ್ತು ಸೇವಾ ಘಟಕದ ಸಾವಿರಕ್ಕೂ ಅಧಿಕ ಮಂದಿ ಆ.15 ರಿಂದಲೇ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಸ್ಥಳೀಯ ಯುವಕರು ಮತ್ತು ವಿವಿಧ ಸಂಘಟನೆಗಳ ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಪರಿಹಾರ ಕಾರ್ಯದಲ್ಲಿ ನಿರತವಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಯವರು ರಾಷ್ಟ್ರಪತಿ ಹಾಗೂ ಪ್ರಧಾನಿಗೆ ವಿವರ ನೀಡಿದರು. ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕೊಡಗು ಜಿಲ್ಲೆಯ ಪರಿಸ್ಥಿತಿ ಕುರಿತಂತೆ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದೇನೆ. ಪರಿಸ್ಥಿತಿಯ ನಿಯಂತ್ರಣಕ್ಕೆ ಕೇಂದ್ರದಿಂದ ಅಗತ್ಯ ಸಹಾಯ, ಸಹಕಾರ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.