ಅಹ್ಮದಾಬಾದ್/ಮುಂಬಯಿ: “ತೌಖ್ತೇ ಚಂಡ ಮಾರುತ ಪ್ರಭಾವದಿಂದ ತತ್ತರಿಸಿ ಹೋಗಿರುವ ಗುಜರಾತ್‌ಗೆ ತಕ್ಷಣದ ಪರಿಹಾರವಾಗಿ 1 ಸಾವಿರ ಕೋಟಿ ರೂ. ನೆರವು ಪ್ರಕಟಿಸಲಾಗಿದೆ. ಇದರ ಜತೆಗೆ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಕೇಂದ್ರಾಡಳಿತ ಪ್ರದೇಶ ದಮನ್, ದಿಯು, ನಗರ್ ಹವೇಲಿಗಳಲ್ಲಿ ಅಸುನೀಗಿದ ವ್ಯಕ್ತಿಗಳ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರವನ್ನೂ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಗಾಯಗೊಂಡವರಿಗೆ 50 ಸಾವಿರ ರೂ. ನೆರವು ನೀಡಲು ಉದ್ದೇಶಿಸಲಾಗಿದೆ. ಗುಜರಾತ್‌ನಲ್ಲಿ 46 ಮಂದಿ ಅಸುನೀಗಿದ್ದಾರೆ.
ಚಂಡಮಾರುತದಿಂದ ಹಾನಿಗೊಳಗಾದ ಗುಜರಾತ್‌ನ 12 ಜಿಲ್ಲೆಗಳಲ್ಲಿನ ಪರಿಸ್ಥಿತಿ ಬಗ್ಗೆ ಪ್ರಧಾನಿ ಬುಧವಾರ ವೈಮಾನಿಕ ಸಮೀಕ್ಷೆ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಇದಾದ ಬಳಿಕ ಅಹ್ಮದಾಬಾದ್‌ನಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯದ ಪರಿಶೀಲನಾ ಸಭೆಯನ್ನೂ ನಡೆಸಿದ್ದಾರೆ ಪ್ರಧಾನಿ. ಈ ಸಂದರ್ಭದಲ್ಲಿ ಸಿಎಂ ವಿಜಯ ರೂಪಾಣಿ ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಇದರ ಜತೆಗೆ ಅಂತರ್ ಸಚಿವಾಲಯದ ತಂಡ ಶೀಘ್ರವೇ ಹಾನಿಗೆ ಒಳಗಾದ ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಿದ ಬಳಿಕ ಹೆಚ್ಚುವರಿ ನೆರವೂ ಪ್ರಕಟವಾಗಲಿದೆ.
ಹೊಸದಿಲ್ಲಿಯಿಂದ ಭಾವನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೂಡಲೇ ಐಎಎಫ್ ಹೆಲಿಕಾಪ್ಟರ್‌ನಲ್ಲಿ ಕೇಂದ್ರಾಡಳಿತ ಪ್ರದೇಶ ದಿಯು ಮತ್ತು ಗುಜರಾತ್‌ನ ಜಿಲ್ಲೆಗಳಲ್ಲಿ ಉಂಟಾಗಿರುವ ಹಾನಿಯನ್ನು ಅವಲೋಕಿಸಿದರು. ಗುಜರಾತ್‌ನ ಜನತೆಗೆ ಎಲ್ಲ ರೀತಿಯ ನೆರವು ನೀಡುವ ವಾಗ್ಧಾನವನ್ನೂ ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಮಾಡಿದರು. ಹಾನಿಗೆ ಒಳಗಾಗಿರುವ ಜಿಲ್ಲೆಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಮತ್ತು ಕೊರೊನಾ ಸೋಂಕಿನ ನಿಯಂತ್ರಣದ ಬಗ್ಗೆಯೂ ಆದ್ಯತೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ರೂಪಾಣಿಗೆ ಸೂಚಿಸಿದ್ದಾರೆ. ತೊಂದರೆಗೆ ಈಡಾಗಿರುವ ರಾಜ್ಯ ಸರಕಾರ ಗಳ ಜತೆಗೆ ಪರಿಹಾರದ ಬಗ್ಗೆ ಚರ್ಚಿಸಲಾಗುತ್ತದೆ ಎಂದರು ಮೋದಿ.
ಬೆಳೆಗಳಿಗೆ ಹಾನಿ: ಚಂಡಮಾರುತದಿಂದಾಗಿ ಹಲವು ಜಿಲ್ಲೆಗಳಲ್ಲಿ ಹಲವು ರೀತಿಯ ಬೆಳೆಗಳಿಗೆ ಹಾನಿ ಉಂಟಾಗಿದೆ. ಜುನಾಗಢ, ಗಿರ್ ಸೋಮನಾಥ, ಅಮ್ರೇಲಿ ಮತ್ತು ಭಾವನಗರ ಜಿಲ್ಲೆಗಳ ಜಿಲ್ಲೆಯಲ್ಲಿ ತೆಂಗು, ಮಾವು, ಭರೂಚ್, ತಪಿ, ವಡೋದರಾ, ಆನಂದ್ ಮತ್ತು ಖೇಡಾ ಜಿಲ್ಲೆಯ ಕೆಲವು ಭಾಗಗಳಲ್ಲಿ ಬಾಳೆ ಬೆಳೆಗೆ ಭಾರೀ ಹಾನಿಯಾಗಿದೆ. ಸಾವಿರಾರು ಮಾವಿನ ಮರಗಳು ವಲ್ಸಾಡ್ ಜಿಲ್ಲೆಯಲ್ಲಿ ಧರೆಗೆ ಉರುಳಿವೆ. ಜುನಾಗಢ್ ಮತ್ತು ಗಿರ್ ಸೋಮನಾಥ ಜಿಲ್ಲೆಯಲ್ಲಿ ಬೆಳೆಯುವ ಕೇಸರ್ ತಳಿಯ ಮಾವಿನ ಮರಗಳು ಬುಡ ಸಹಿತ ಬಿದ್ದಿವೆ. ಶೇ.40ರಷ್ಟು ಕೇಸರ್ ತಳಿಯ ಬೆಳೆ ನಷ್ಟವಾಗಿದೆ. ಕೇಂದ್ರ ಗುಜರಾತ್‌ನ ಜಿಲ್ಲೆಗಳಲ್ಲಿ ಭತ್ತ, ಬಾಜ್ರಾ, ನೆಲಕಡಲೆ, ಎಳ್ಳು, ತರಕಾರಿ ಬೆಳೆಯೂ ಭಾರೀ ಪ್ರಮಾಣದಲ್ಲಿ ನಷ್ಟವಾಗಿದೆ.
22 ಮಂದಿ ಸಾವು: ಈ ನಡುವೆ ಬಾಂಬೆ ಹೈ ಸಮುದ್ರ ವ್ಯಾಪ್ತಿಯಲ್ಲಿ ಪಿ305 ಎಂಬ ಬಾರ್ಜ್ ನಲ್ಲಿ ಇದ್ದ 22 ಮಂದಿ ಅಸುನೀಗಿದ್ದಾರೆ. 65 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಮತ್ತು ಇದುವರೆಗೆ 186 ಮಂದಿಯನ್ನು ಪಾರು ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆ ಹೇಳಿದೆ. ಬಾರ್ಜ್‌ನಲ್ಲಿ ಒಟ್ಟು 273 ಮಂದಿ ಇದ್ದರು. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿಸಲಾಗುತ್ತಿದೆ ಎಂದು ನೌಕಾಪಡೆಯ ವಕ್ತಾರರು ಮುಂಬಯಿಯಲ್ಲಿ ತಿಳಿಸಿದ್ದಾರೆ. ಇದರ ಜತೆಗೆ “ವರಪ್ರದ’ ಎಂಬ ಟಗ್‌ಬೋಟ್‌ಗಳಲ್ಲಿ ಇದ್ದವ ರನ್ನೂ ಪಾರು ಮಾಡಲಾಗಿದೆ. ಅಸುನೀಗಿದವರ ಮೃತ ದೇಹ ಗಳನ್ನು ಮುಂಬಯಿ ಬಂದರಿಗೆ ತರಲಾಗಿದೆ. ಜತೆಗೆ 125 ಮಂದಿ ಬದುಕಿ ಉಳಿದವರೂ ನಗರಕ್ಕೆ ಆಗಮಿಸಿದ್ದಾರೆ. ನೌಕಾಪಡೆಯ ಯುದ್ಧನೌಕೆ ಐಎನ್‌ಎಚ್ ಕೊಚ್ಚಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಎಸ್‌ಎಸ್-3 ಎಂಬ ಹೆಸರಿನ ಬಾರ್ಜ್, ಮತ್ತು “ಸಾಗರ ಭೂಷಣ್’ ಎಂಬ ಹೆಸರಿನ ತೈಲ ನೌಕೆಯಲ್ಲಿದ್ದ ಒಟ್ಟು 297 ಮಂದಿ ಸುರಕ್ಷಿತವಾ ಗಿದ್ದಾರೆ. ಅವರನ್ನು ಕರೆ ತರಲು ಐಎನ್‌ಎಸ್ ತಲ್ವಾರ್ ಅನ್ನು ನಿಯೋಜಿಸಲಾಗಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ. ಮೂರು ಬಾರ್ಜ್‌ಗಳು ಮತ್ತು ಒಂದು ತೈಲ ನೌಕೆ ಸೇರಿ 707 ಮಂದಿ ಸಮುದ್ರದಲ್ಲಿ ಚಂಡಮಾರುತದಲ್ಲಿ ಸಿಲುಕಿಗೊಂಡಿದ್ದರು.
ಇದೇ ವೇಳೆ, ಮುಂಬಯಿ ನಗರ ವ್ಯಾಪ್ತಿಯಲ್ಲಿ 812ಕ್ಕೂ ಅಧಿಕ ಮರಗಳು ಧರೆಗೆ ಉರುಳಿವೆ. ಈ ಪೈಕಿ ಶೇ.70ರಷ್ಟು ಮರಗಳು ವಿದೇಶದಿಂದ ತರಿಸಲಾಗಿರುವ ತಳಿಗಳು ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ. ಖಾಸಗಿ ಜಮೀನಿನಲ್ಲಿ ಇದ್ದ 504 ಮರಗಳೂ ಸೇರಿವೆ. 1,454 ಮರಗಳ ಕೊಂಬೆಗಳು ಮುರಿದು ಬಿದ್ದಿವೆ.
ತಂಡದ ಜತೆಗೆ ಪಿಎಂ ಚರ್ಚೆ
ಒಎನ್‌ಜಿಸಿ ಬಾರ್ಜ್‌ನಲ್ಲಿ ಇದ್ದವರ ರಕ್ಷಣೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ತಂಡದ ಜತೆಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ತಂಡದ ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿ, ಕಾರ್ಯಾಚರಣೆಯ ತಾಜಾ ಮಾಹಿತಿ ಪಡೆದುಕೊಂಡರು.
1951 ಕನಿಷ್ಠಕ್ಕೆ ಕುಸಿದ ತಾಪಮಾನ
ಹೊಸದಿಲ್ಲಿ: ಚಂಡಮಾರುತದಿಂದಾಗಿ ಹೊಸದಿಲ್ಲಿಯಲ್ಲಿ ತಾಪಮಾನ 23.8 ಡಿಗ್ರಿ ಸೆಲಿÏಯ ಸ್‌ಗೆ ಕುಸಿದಿದೆ. 1951ರ ಬಳಿಕ ಇದು ಅತ್ಯಂತ ಕನಿಷ್ಠದ್ದಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದರ ಜತೆಗೆ ಸೈಕ್ಲೋನ್‌ನ ಪ್ರಭಾವ ದಿಂದಾಗಿ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ದಿಲ್ಲಿ, ಉತ್ತರ ಪ್ರದೇಶ, ರಾಜಸ್ಥಾನದ ಉತ್ತರ ಭಾಗ, ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲೂ “ತೌಖ್ತೇ’ ಪರಿಣಾಮದಿಂದಾಗಿ ಮಳೆಯಾಗಿದೆ.