ನವದೆಹಲಿ: ಸ್ವಿಝರ್ ಲ್ಯಾಂಡ್ ನ ಬಾಸೆಲ್ ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಕೂಟದಲ್ಲಿ ಭಾರತಕ್ಕೆ ಪ್ರಪ್ರಥಮ ಚಿನ್ನ ಗೆಲ್ಲುವ ಮೂಲಕ ಮಹಿಳಾ ಬ್ಯಾಡ್ಮಿಂಟನ್ ಲೋಕದ ಚಾಂಪಿಯನ್ ಪಟ್ಟ ಅಲಂಕರಿಸಿದ ಸಾಧನೆ ಮಾಡಿದ ಪಿ.ವಿ. ಸಿಂಧು ಅವರು ಇಂದು ಭಾರತಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಬಳಿಕ ಸಿಂಧು ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಸಿಂಧು ಅವರು ಕೇವಲ ದೇಶದ ಹೆಮ್ಮೆ ಮಾತ್ರವಲ್ಲ ಅವರು ವಿಶ್ವ ಬ್ಯಾಡ್ಮಿಂಟನ್ ಲೋಕದ ಹೆಮ್ಮೆ ಎಂದು ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ಸಿಂಧು ಸಾಧನೆಯನ್ನು ಶ್ಲಾಘಿಸಿದರು.
ಸಿಂಧು ಅವರ ಜೊತೆ ಅವರ ದೀರ್ಘಕಾಲೀನ ತರಬೇತುದಾರ ಹಾಗೂ ಪ್ರಸ್ತುತ ರಾಷ್ಟ್ರೀಯ ಬ್ಯಾಡ್ಮಿಂಟನ್ ತರಬೇತುದಾರರಾಗಿರುವ ಪುಲ್ಲೇಲ ಗೋಪಿಚಂದ್, ಸಿಂಧು ಅವರ ಈಗಿನ ತರಬೇತುದಾರ ಕಿಮ್ ಜಿ ಹ್ಯೂನ್ ಮತ್ತು ಸಿಂಧು ಅವರ ತಂದೆ ಪಿ.ವಿ. ರಮಣ ಅವರೂ ಸಹ ಇದ್ದರು.
ಪ್ರಧಾನಿಯವರನ್ನು ಭೇಟಿಯಾಗುವುದಕ್ಕೂ ಮುನ್ನ ಇಂದು ಬೆಳಿಗ್ಗೆ ಈ ನಾಲ್ವರಿಗೆ ಕೇಂದ್ರ ಕ್ರೀಡಾ ಸಚಿವ ಕಿರೆಣ್ ರಿಜಿಜು ಅವರು ಉಪಹಾರ ಕೂಟವನ್ನು ಏರ್ಪಡಿಸಿದ್ದರು. ಸಿಂಧು ಅವರ ಈ ಐತಿಹಾಸಿಕ ಸಾಧನೆಗಾಗಿ ಸಚಿವ ರಿಜೆಜು ಅವರು ಸಿಂಧು ಅವರಿಗೆ ಹತ್ತು ಲಕ್ಷ ರೂಪಾಯಿಗಳ ಚೆಕ್ ಅನ್ನು ಇದೇ ಸಂದರ್ಭದಲ್ಲಿ ನೀಡಿ ಗೌರವಿಸಿದರು.