Advertisement

ಬಿಜೆಪಿಯಿಂದ ನೆಟ್‌ ಸಮರ : ಪೌರತ್ವ ಕಾಯ್ದೆ ಬೆಂಬಲಿಸಿ ಆನ್‌ಲೈನ್‌ ಪ್ರಚಾರ

10:03 AM Jan 01, 2020 | Team Udayavani |

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ಸೂಚಿಸುವ ಅಭಿಯಾನವನ್ನು ಸೋಮವಾರ ಶುರು ಮಾಡಿದೆ. ಟ್ವಿಟರ್‌ನಲ್ಲಿ ‘ಇಂಡಿಯಾ ಸಪೋರ್ಟ್ಸ್ ಸಿಎಎ’ ಎಂಬ ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ಅದನ್ನು ಆರಂಭಿಸಲಾಗಿದೆ. ಅದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಯ್ದೆಗೆ ಬೆಂಬಲ ಸೂಚಿಸಿ ಧಾರ್ಮಿಕ ಮುಂದಾಳು ಸದ್ಗುರು ಜಗ್ಗಿ ವಾಸುದೇವ ರಾವ್‌ ಮಾತನಾಡಿರುವ ವೀಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

Advertisement

‘ಸದ್ಗುರು ವೀಡಿಯೋದಲ್ಲಿ ಏನು ಹೇಳಿದ್ದಾರೆ ಎಂದು ಕೇಳಿಸಿಕೊಳ್ಳಿ. ಯಾವ ಕಾರಣಕ್ಕಾಗಿ ಕಾಯ್ದೆ ಜಾರಿಗೊಳಿಸಲಾಯಿತು ಎಂಬ ಬಗ್ಗೆ ಐತಿಹಾಸಿಕ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಕೆಲವು ಸಂಘಟನೆಗಳು ನೀಡುತ್ತಿರುವ ತಪ್ಪು ಮಾಹಿತಿ ನಿವಾರಿಸಬೇಕಾಗಿದೆ’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ವೆಬ್‌ಸೈಟ್‌ನಲ್ಲಿ ಕೂಡ ‘ಕಾಯ್ದೆ ಪೌರತ್ವ ನೀಡಲು ಹೊರತು ಕಿತ್ತುಕೊಳ್ಳಲು ಅಲ್ಲ’ ಎಂಬ ಶಿರೋನಾಮೆಯಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಲಾಗಿದೆ.

ಜನರು ಈ ಮಾಹಿತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಅದರಲ್ಲಿ ಕಾಯ್ದೆಗೆ ಸಂಬಂಧಿಸಿದಂತೆ ವೀಡಿಯೋ, ಗ್ರಾಫಿಕ್ಸ್‌ಗಳನ್ನು ನೀಡಲಾಗಿದೆ. ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇ ಕರ್‌ ಟ್ವೀಟ್‌ ಮಾಡಿ ‘ಕಾಯ್ದೆ ಯಾರ ವಿರುದ್ಧವೂ ತಾರತಮ್ಯ ಮಾಡುತ್ತಿಲ್ಲ. ಈ ಬಗ್ಗೆ ಸತ್ಯವನ್ನೇ ಪ್ರಚಾರ ಮಾಡಿ; ಸುಳ್ಳನ್ನು ಅಲ್ಲ. ಹಿಂದಿನ ಆರು ವರ್ಷಗಳ ಅವಧಿಯಲ್ಲಿ 2,830 ಪಾಕಿಸ್ತಾನಿಗಳು, 912 ಅಫ್ಘಾನಿಸ್ತಾನಿಗಳು, 172 ಬಾಂಗ್ಲಾದೇಶದ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ’ ಎಂದು ಬರೆದುಕೊಂಡಿದ್ದಾರೆ.

80 ಕೋಟಿ ನಷ್ಟ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ರೈಲ್ವೆಗೆ 80 ಕೋಟಿ ರೂ. ನಷ್ಟವಾಗಿದೆ. ಅದನ್ನು ಕೃತ್ಯ ಎಸಗಿದವರ ಕೈಯಿಂದಲೇ ವಸೂಲು ಮಾಡುವುದಾಗಿ ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್‌ ಕುಮಾರ್‌ ಯಾದವ್‌ ಸೋಮವಾರ ಹೇಳಿದ್ದಾರೆ.

ಪ್ರತಿಭಟನೆ ವೇಳೆ ಪೂರ್ವ ರೈಲ್ವೆ ವಲಯಕ್ಕೆ ಅತ್ಯಂತ ಹೆಚ್ಚು ಅಂದರೆ 70 ಕೋಟಿ ರೂ., ನಾರ್ತ್‌ ಈಸ್ಟ್‌ ಫ್ರಾಂಟಿಯರ್‌ ರೈಲ್ವೆಗೆ 10 ಕೋಟಿ ರೂ. ನಷ್ಟವಾಗಿದೆ ಎಂದಿದ್ದಾರೆ. ಇಂಥ ಕೃತ್ಯಗಳನ್ನು ನಡೆಸಿದವರನ್ನು ಪತ್ತೆ ಹಚ್ಚಿ, ಅವರಿಂದಲೇ ನಷ್ಟದ ಮೊತ್ತ ಭರಿಸುತ್ತೇವೆ. ಸದ್ಯ ಪ್ರಕಟ ಮಾಡಿರುವುದು ಕೇವಲ ಪ್ರಾಥಮಿಕ ನಷ್ಟದ ಅಂದಾಜು ಎಂದು ಹೇಳಿದ್ದಾರೆ.

Advertisement

ಜಾರಿ ಮಾಡುವುದಿಲ್ಲ: ಪಂಜಾಬ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಕ್ಯಾ| ಅಮರಿಂದರ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ಈ ಕಾಯ್ದೆ ದೇಶಕ್ಕೆ ಮಾರಕವಾಗಿದೆ ಎಂದು ಬಣ್ಣಿಸಿರುವ ಅವರು, ಜನರು ಅದರ ವಿರುದ್ಧ ಏಕಕಂಠದಿಂದ ವಿರೋಧಿಸಬೇಕು ಎಂದು ಒತ್ತಾಯಿಸಿದರು. ಪಕ್ಷದ ನಾಯಕಿ ಪ್ರಿಯಾಂಕಾ ವಾದ್ರಾರನ್ನು ಉತ್ತರಪ್ರದೇಶ ಪೊಲೀಸರು ಎಳೆದಾಡಿದ್ದಾರೆ. ಇದು ಖಂಡನೀಯ ಎಂದರು.

ನೆರವಾಗಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಹೋರಾಟದ ವೇಳೆ ಅಸುನೀಗಿದವರು ಮತ್ತು ಗಾಯಗೊಂಡವರಿಗೆ ನೆರವಾಗಬೇಕು. ಈ ಬಗ್ಗೆ ಕಾಂಗ್ರೆಸ್‌ ಕಾರ್ಯಕರ್ತರು ಕೂಡಲೇ ಕಾರ್ಯೋನ್ಮುಖರಾಗಬೇಕು ಎಂದು ಒತ್ತಾಯಿಸಿದ್ದಾರೆ. ಅಸ್ಸಾಂನಲ್ಲಿ ಶನಿವಾರ ಅಸುನೀಗಿದ ಇಬ್ಬರು ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ. ಇದರ ಜತೆಗೆ ಕಾಯ್ದೆ ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆಗಳ 2 ವೀಡಿಯೋಗಳನ್ನು ಟ್ವೀಟ್‌ ಮಾಡಿದ್ದಾರೆ.

ನಾಯಕರ ಮನೆಗಳ ಎದುರು ರಂಗೋಲಿ
ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಜಾರಿ ಮಾಡುವುದೇ ಬೇಡ ಎಂದು ಒತ್ತಾಯಿಸುತ್ತಿರುವ ಸಂಘಟನೆಗಳು ಚೆನ್ನೈನಲ್ಲಿ ಪ್ರತಿಭಟನೆಗೆ ಹೊಸ ದಾರಿ ಕಂಡುಕೊಂಡಿವೆ. ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌, ದಿ.ಎಂ.ಕರುಣಾನಿಧಿ ಸೇರಿದಂತೆ ಪ್ರಮುಖ ನಾಯಕರು, ಮುಖಂಡರ ನಿವಾಸದ ಎದುರು ರಂಗೋಲಿ ಬಿಡಿಸಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ‘ವೇಂಡಂ ಸಿಎಎ, ಎನ್‌ಆರ್‌ಸಿ’ (ಸಿಎಎ, ಎನ್‌ಆರ್‌ಸಿ ಬೇಡ) ಎಂದು ತಮಿಳಿನಲ್ಲಿ ಬರೆಯಲಾಗಿದೆ. ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌ ಟ್ವೀಟ್‌ ಮಾಡಿ ಕಾಯ್ದೆ ಬೆಂಬಲ ಸೂಚಿಸಿದ್ದಕ್ಕೆ ಎಐಎಡಿಎಂಕೆ ಸರಕಾರವನ್ನು ಟೀಕಿಸಿದ್ದಾರೆ.

ಪ್ರಿಯಾಂಕಾ ವಾದ್ರಾ vs ಉತ್ತರ ಪ್ರದೇಶ ಸರಕಾರ
ದೇಶದಲ್ಲಿ ಹಿಂಸೆ ಅಥವಾ ಪ್ರತೀಕಾರಕ್ಕೆ ಅವಕಾಶ ಇಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ. ಲಕ್ನೋದಲ್ಲಿ ಮಾತನಾಡಿದ ಅವರು, ಪ್ರತಿಭಟನಕಾರರಿಂದಲೇ ನಷ್ಟ ಭರಿಸುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸಿಎಂ ಯೋಗಿ ಆದಿತ್ಯನಾಥ್‌ ಹೇಳಿಕೆಗೆ ತಿರುಗೇಟು ನೀಡಿದ ಅವರು ಹಿಂದೂ ಧರ್ಮ ದಲ್ಲಿನ ಕೇಸರಿ ಬಣ್ಣ ಹಿಂಸೆ ಅಥವಾ ಪ್ರತೀಕಾರವನ್ನು ಸೂಚಿಸುವುದಿಲ್ಲ ಎಂದರು.

ಭದ್ರತಾ ಲೋಪದ ಬಗ್ಗೆ ಪ್ರಸ್ತಾಪಿಸಿದ ಅವರು, ತಮ್ಮ ಭದ್ರತೆ ಪ್ರಮುಖ ವಿಚಾರವೇ ಅಲ್ಲ. ಉತ್ತರ ಪ್ರದೇಶದಲ್ಲಿ ಸಾಮಾನ್ಯ ವ್ಯಕ್ತಿಗಳಿಗೆ ಅದು ಸಿಗುತ್ತಿಲ್ಲ ಎಂಬ ಅಂಶವೇ ಪ್ರಧಾನ ಎಂದಿದ್ದಾರೆ. ಉತ್ತರ ಪ್ರದೇಶ ಸರಕಾರದ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರುವುದಾಗಿಯೂ ತಿಳಿಸಿದರು.ಅದಕ್ಕೆ ತಿರುಗೇಟು ನಿಡಿದ ಉ.ಪ್ರ.ಡಿಸಿಎಂ ದಿನೇಶ್‌ ಶರ್ಮಾ ಹಿಂಸಾಚಾರ ನಡೆಸಿದವರಿಗೆ ಬೆಂಬಲ ಸೂಚಿಸುವಂತೆ ಪ್ರಿಯಾಂಕಾ ಮಾತುಗಳಿವೆ ಎಂದಿದ್ದಾರೆ. ಕೇಸರಿ ಬಟ್ಟೆಯನ್ನು ಯಾಕೆ ಧರಿಸುತ್ತಾರೆ ಎಂಬುದರ ಬಗ್ಗೆ ಅವರಿಗೆ ಗೊತ್ತೇ ಇಲ್ಲ ಎಂದರು.

ಪ್ರಿಯಾಂಕಾರಿಂದಲೇ ನಿಯಮ ಉಲ್ಲಂಘನೆ: ಕಾಂಗ್ರೆಸ್‌ ನಾಯಕಿಯೇ ಭದ್ರತೆಯ ನಿಯಮಗಳನ್ನು ಉಲ್ಲಂ ಸಿದ್ದಾರೆ. ಸಿಆರ್‌ಪಿಎಫ್ ವತಿಯಿಂದ ಯಾವುದೇ ನಿಯಮಕ್ಕೆ ಚ್ಯುತಿ ಉಂಟಾಗಿಲ್ಲ ಎಂದು ಗುಪ್ತಚರ ಮತ್ತು ವಿಐಪಿ ಭದ್ರತೆ ವಿಭಾಗ ಇನ್ ಸ್ಪೆಕ್ಟರ್‌ ಜನರಲ್‌ ಪಿ.ಕೆ ಸಿಂಗ್‌ ಹೇಳಿದ್ದಾರೆ. ಅವರು ಪ್ರವಾಸದ ವೇಳೆ ಕೆಲ ಸ್ಥಳಗಳಿಗೆ ಮಾಹಿತಿ ನೀಡದೆ ತೆರಳಿದ್ದರು ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next