ಬೆಂಗಳೂರು: ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯೊಂದನ್ನು ಇಳಿಸುವ ಇಸ್ರೋ ವಿಜ್ಞಾನಿಗಳ ಮಹತ್ವಾಕಾಂಕ್ಷಿ ಯೋಜನೆ ‘ಚಂದ್ರಯಾನ-2’ ಹಿನ್ನಡೆ ಕಂಡಿದೆ. ಇದರಿಂದಾಗಿ ಇಸ್ರೋ ವಿಜ್ಞಾನಿಗಳಿಗೆ ಮಾತ್ರವಲ್ಲ ದೇಶವಾಸಿಗಳಿಗೆಲ್ಲಾ ನಿರಾಶೆಯಾಗಿದೆ. ಈ ಮಹತ್ವದ ಕ್ಷಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಬೇಕೆಂದು ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಛೇರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ‘ಸಾಫ್ಟ್ ಲ್ಯಾಂಡಿಗ್’ ಮಾಡಲಾಗದೇ ಇದ್ದುದಕ್ಕೆ ಅಲ್ಪ ನಿರಾಸೆಗೊಂಡಿದ್ದಾರೆ.
ಆದರೆ ಇದೆಲ್ಲದರ ನಡುವೆ ಪ್ರಧಾನಿ ಮೋದಿ ಅವರು ನಮ್ಮ ವಿಜ್ಞಾನಿಗಳ ಪರಿಶ್ರಮವನ್ನು ಪ್ರಶಂಸಿಸಲು ಮರೆಯಲಿಲ್ಲ. ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಬಳಿಕ ಅದರೊಳಗಿಂದ ಪ್ರಗ್ಯಾನ್ ರೋವರ್ ಇಳಿದು ಚಂದ್ರನ ನೆಲವನ್ನು ಮುಟ್ಟುವ ಸಮಯದವರೆಗೆ ಅಂದರೆ ಶನಿವಾರ ಮುಂಜಾನೆವರೆಗೆ ಇಸ್ರೋ ಕೇಂದ್ರದಲ್ಲೇ ಇರಲು ಪ್ರಧಾನಿ ಮೋದಿ ನಿರ್ಧರಿಸಿದ್ದರು.
ಆದರೆ ವಿಕ್ರಂ ಲ್ಯಾಂಡರ್ ಚಂದ್ರನ ನೆಲವನ್ನು ಸ್ಪರ್ಶಿಸಲು 2.1 ಕಿಲೋ ಮೀಟರ್ ಎತ್ತರ ಬಾಕಿ ಇರುತ್ತಲೇ ಇದ್ದಕ್ಕಿದ್ದಂತೆಯೇ ಆರ್ಬಿಟರ್ ಮೂಲಕ ಭೂಮಿಯಲ್ಲಿರುವ ನಿಯಂತ್ರಣ ಕೇಂದ್ರಕ್ಕೆ ಸಂಕೇತವನ್ನು ಕಳುಹಿಸಿಕೊಡುವುದನ್ನು ನಿಲ್ಲಿಸುವ ಮೂಲಕ ಇಸ್ರೋ ವಿಜ್ಞಾನಿಗಳ ಸಹಿತ ಎಲ್ಲರಲ್ಲಿಯೂ ಆತಂಕವನ್ನು ಹುಟ್ಟು ಹಾಕಿತು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು ಆ ಕ್ಷಣದ ಬೆಳವಣಿಗೆಗಳ ಮಾಹಿತಿ ನೀಡಿದರು. ಬಳಿಕ ವಿಕ್ರಂ ಲ್ಯಾಂಡರ್ ನಿಂದ ಯಾವುದೇ ಸಂಕೇತಗಳು ಬರದೇ ಇದ್ದ ಕಾರಣ ಚಂದ್ರಯಾನ-2ರ ಫಲಿತಾಂಶವನ್ನು ಇಸ್ರೋ ಇನ್ನೂ ನಿರ್ಧರಿಸಿಲ್ಲ, ಬದಲಾಗಿ ಕಾದು ನೋಡುವ ತಂತ್ರದ ಮೊರೆ ಹೋಗಿದೆ.
ಈ ಸಂಧರ್ಭದಲ್ಲಿ ನಿರಾಶೆಯಲ್ಲಿದ್ದ ಇಸ್ರೋ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಅವರು ಧೈರ್ಯ ತುಂಬಿದರು. ನಿಮ್ಮ ಸಾಧನೆ ಕಡಿಮೆಯದ್ದೇನಲ್ಲ ಎಂದು ಅಲ್ಲಿದ್ದವರ ಬೆನ್ನು ತಟ್ಟಿದರು. ಮತ್ತು ನಿಮ್ಮ ಮುಂದಿನ ಯೋಜನೆಗಳಿಗೆ ನಮ್ಮ ಸರಕಾರದ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಸ್ಥಳದಲ್ಲಿಯೇ ಪ್ರಕಟಿಸುವ ಮೂಲಕ ನಿರಾಸೆಯಲ್ಲಿದ್ದ ವಿಜ್ಞಾನಿಗಳಿಗೆ ಉತ್ಸಾಹ ತುಂಬುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಒಂದನ್ನು ಮಾಡಿರುವ ಮೋದಿ, ‘ನಮ್ಮ ದೇಶದ ವಿಜ್ಞಾನಿಗಳ ಬಗ್ಗೆ ದೇಶವೇ ಹೆಮ್ಮೆಪಡುತ್ತದೆ. ಅವರೆಲ್ಲಾ ತಮ್ಮ ಸಾಮರ್ಥ್ಯಕ್ಕೆ ತಕ್ಕ ರೀತಿಯಲ್ಲೇ ಕೆಲಸ ಮಾಡಿದ್ದಾರೆ ಮತ್ತು ಆ ಮೂಲಕ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ. ಇದು ಧೈರ್ಯದಿಂದ ಇರಬೇಕಾದ ಕ್ಷಣ, ಮತ್ತು ನಾವೆಲ್ಲರೂ ಧೈರ್ಯ ತಾಳೋಣ’ ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ಭವಿಷ್ಯದಲ್ಲಿ ಇಸ್ರೋ ಕೈಗೊಳ್ಳುವ ಯೋಜನೆಗಳಿಗೆ ಇನ್ನಷ್ಟು ಬಲ ತುಂಬುವ ಮಾತುಗಳನ್ನಾಡಿದ್ದಾರೆ ಪ್ರಧಾನಿ ಮೋದಿ.
ಇಸ್ರೋ ವಿಜ್ಞಾನಿಗಳೇ ನಿಮ್ಮ ಸಾಧನೆಗೆ ಭಾರತೀಯರಾದ ನಾವು ಗರ್ವ ಪಡುತ್ತೇವೆ. ಇದು ನಿಮಗಾದ ಸೋಲಲ್ಲ, ಸಾಧನೆಯ ಹಾದಿಯಲ್ಲಿ ನಿಮಗೆದುರಾದ ಸಣ್ಣ ಹಿನ್ನಡೆಯಷ್ಟೇ.