ಹೊಸದಿಲ್ಲಿ: “ಹುತಾತ್ಮರ ಪ್ರತಿ ಹನಿ ರಕ್ತಕ್ಕೂ ಪ್ರತೀಕಾರ ತೀರಿಸಿಯೇ ಸಿದ್ಧ ಎಂದು ನಾನು ಶಪಥ ಮಾಡಿದ್ದೇನೆ. ದೇಶ ದಿಂದ ಭಯೋತ್ಪಾದನೆ ಮತ್ತು ನಕ್ಸಲ್‌ವಾದವನ್ನು ನಿರ್ಮೂಲನೆ ಮಾಡುತ್ತೇನೆ’.
ಮಧ್ಯಪ್ರದೇಶದ ಸಾಗರದಲ್ಲಿ ರವಿವಾರ ಚುನಾವಣ ಪ್ರಚಾರ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಮಾತು ಗಳನ್ನಾಡಿದ್ದಾರೆ. ಈ ಚೌಕಿದಾರನು ಪ್ರತಿಯೊಬ್ಬ ಯೋಧನ ನೆತ್ತರಿಗೂ ಪ್ರತೀಕಾರ ತೀರಿಸಲು ಪಣ ತೊಟ್ಟಿದ್ದಾನೆ. ಅದಕ್ಕೆ ನಿಮ್ಮ ಆಶೀರ್ವಾದ ಬೇಕಿದೆ. ಪಾಕಿಸ್ಥಾನದ ಸೂಪರ್ ಫೇವರಿಟ್ ಭಯೋತ್ಪಾದಕ ಮಸೂದ್ ಅಜರ್‌ಗೆ ವಿಶ್ವಸಂಸ್ಥೆ ಹೇರಿದ ನಿಷೇಧ ಹಾಗೂ ಭಾರತದ ನಿಲುವಿಗೆ ಇತರೆಲ್ಲ ದೇಶಗಳೂ ಸಮ್ಮತಿಸಿದ ರೀತಿಯು ಪಾಕಿಸ್ಥಾನಕ್ಕೆ ಕಪಾಳ ಮೋಕ್ಷವಾದಂತಾಗಿದೆ. ಆದರೆ, ಇದು ಕೇವಲ ಆರಂಭವಷ್ಟೆ. ನಾವು ಇನ್ನೂ ಸಾಧಿಸಬೇಕಾದ್ದು ಬಹಳಷ್ಟಿದೆ. ಈಗ ಪಾಕಿಸ್ಥಾನವೇ ತಾವು ಯಾವ ಹಾದಿಯಲ್ಲಿ ಸಾಗಬೇಕು ಎಂಬುದನ್ನು ನಿರ್ಧರಿಸಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಹುಲ್ ವಿರುದ್ಧ ವಾಗ್ಧಾಳಿ: ಯುಕೆ ಮೂಲದ ಬ್ಯಾಕಾಪ್ಸ್ ಕಂಪೆನಿ ಜತೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿಗಿದೆ ಎನ್ನ ಲಾದ ನಂಟಿನ ಬಗ್ಗೆಯೂ ಭಾಷಣದಲ್ಲಿ ಪ್ರಸ್ತಾವಿಸಿದ ಮೋದಿ, “ಬ್ಯಾಕಾಪ್ಸ್ ಎಂಬ ಹೆಸರೇ ಕಾಂಗ್ರೆಸ್ ಅಧ್ಯಕ್ಷರ ಹಿಂಬಾಗಿಲ ಕಾರ್ಯಾಚರಣೆಯನ್ನು ಸೂಚಿಸುತ್ತದೆ. 21ನೇ ಶತಮಾನದ ಒಂದಿಡೀ ದಶಕವನ್ನೇ ಭಾರತವು ಕಳೆದುಕೊಂಡಿತು. 2004ರಲ್ಲಿ ಕಾಂಗ್ರೆಸ್ “ಕುಟುಂಬಕ್ಕೆ ವಿಧೇಯ’ರಾದ ಮನಮೋಹನ್ ಸಿಂಗ್‌ರನ್ನು ಪ್ರಧಾನಿ ಹುದ್ದೆಗೇರಿಸಿತು.
ಏಕೆಂದರೆ, ಆಗ ರಾಜಕುಮಾರ ಇನ್ನೂ ಆ ಹುದ್ದೆಗೇರಲು ಸಜ್ಜಾಗಿರಲಿಲ್ಲ. ಆತನಿಗೆ ತರಬೇತಿ ನೀಡುವ ಯತ್ನವೆಲ್ಲವೂ ವಿಫಲವಾಯಿತು’ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, ಕಾಂಗ್ರೆಸ್ ಅಧ್ಯಕ್ಷರ ಹಗರಣಗಳು ಈಗ ನೆಲ, ಜಲ ಹಾಗೂ ಆಕಾಶದಿಂದಲೂ ಒಂದೊಂದಾಗಿ ಹೊರಬರುತ್ತಿದೆ ಎಂದೂ ಹೇಳಿದ್ದಾರೆ.
ತಲಾಖ್ ಪ್ರಸ್ತಾವ: ಉತ್ತರಪ್ರದೇಶದ ಭದೋಹಿಯಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಒಂದೇ ಬಾರಿಗೆ ತ್ರಿವಳಿ ತಲಾಖ್ ನೀಡುವ ಪದ್ಧತಿಗೆ ನಿಷೇಧ ಹೇರುವಂಥ ಮಸೂದೆಗೆ ಅಡ್ಡಿಪಡಿಸಲು ವಿಪಕ್ಷಗಳು ಹರಸಾಹಸ ಪಡುತ್ತಿವೆ. ಆದರೆ, ಅವರ ಯತ್ನವು ಸಫಲವಾಗಲು ನಾನು ಬಿಡುವುದಿಲ್ಲ ಎಂದಿದ್ದಾರೆ. ಜತೆಗೆ, ಮಹಾಮಿಲಾವಟ್‌ನ ಪಕ್ಷಗಳು ಅಧಿಕಾರವನ್ನು ತಮ್ಮ ಸಂಪತ್ತು ವೃದ್ಧಿಸಿಕೊಳ್ಳಲು ಬಳಸಿದವು ಎಂದೂ ಮೋದಿ ಆರೋಪಿಸಿದ್ದಾರೆ.