Advertisement

‘ನಮಸ್ಕಾರ್ ನಾರಾಯಣ್ ಜೀ, ಕೈಸೇ ಹೈ..’: ನಮೋ ಕರೆ ಮಾಡಿದ ಆ 106 ವರ್ಷದ ವ್ಯಕ್ತಿ ಯಾರು?

12:06 PM Apr 23, 2020 | Hari Prasad |

ನವದೆಹಲಿ: ಉತ್ತರಪ್ರದೇಶದ ಖುಷಿ ನಗರ ಜಿಲ್ಲೆಯಲ್ಲಿರುವ ಪಗಾರ್ ಗ್ರಾಮದ ರಾಮ್ ಕೋಲಾ ಬ್ಲಾಕ್ ನಲ್ಲಿ ವಾಸವಾಗಿರುವ ಆ ಶತಾಯುಷಿ ಅಜ್ಜನಿಗೆ ಇಂದು ಬೆಳ್ಳಂಬೆಳಿಗ್ಗೆ ಫೋನ್ ಕರೆಯೊಂದು ಬರುತ್ತದೆ.

Advertisement

ಕರೆ ಸ್ವೀಕರಿಸಿದ ಅವರ ಮರಿ ಮೊಮ್ಮಗ ಕನ್ಹಯ್ಯಾನಿಗೆ ಒಂದು ಕ್ಷಣ ಆಶ್ಚರ್ಯವಾಗುತ್ತದೆ. ಯಾಕೆಂದರೆ ಆ ದೂರವಾಣಿ ಕರೆ ಬಂದಿದ್ದು ನವದೆಹಲಿಯಲ್ಲಿರುವ ಪ್ರಧಾನ ಮಂತ್ರಿಯವರ ಕಛೇರಿಯಿಂದ.

ಕರೆ ಮಾಡಿದ ಪ್ರದಾನ ಮಂತ್ರಿಯವರ ಕಛೇರಿ ಅಧಿಕಾರಿಗಳು, ಪ್ರಧಾನಿಯವರು ಶ್ರೀನಾರಾಯಣ ಅವರಲ್ಲಿ ಮಾತನಾಡಬೇಕೆಂದು ತಿಳಿಸಿದಾಗ ತಬ್ಬಿಬ್ಬಾದ ಆ ಯುವಕ ಫೋನನ್ನು ಈ ಶತಾಯುಷಿ ಅಜ್ಜನ ಕೈಗೆ ಕೊಡುತ್ತಾನೆ.

ಬೆಳಗಿನ ಬಿಸಿ ಚಹಾ ಕುಡಿಯುತ್ತಿದ್ದ ಅಜ್ಜ ಆಶ್ಚರ್ಯದಿಂದ ಫೋನನ್ನು ಕೈಗೆತ್ತಿಕೊಂಡಾಗ ಕಾದಿತ್ತು ಆಶ್ಚರ್ಯ, ಆ ಕಡೆಯಿಂದ ಸ್ವತಃ ದೇಶದ ಪ್ರಧಾನಿಯೇ ಮಾತನಾಡುತ್ತಿದ್ದಾರೆ!

ಮೊದಲ ಸಂಭಾಷಣೆಯಲ್ಲೇ ಮೋದಿ ಅವರು ‘ನಮಸ್ಕಾರ್ ನಾರಾಯಣ್ ಜೀ.. ಕೈಸೇ ಹೈ? (ನಮಸ್ಕಾರ ನಾರಾಯಣ ಜೀ, ಹೇಗಿದ್ದೀರಿ) ಎಂದು ಕೇಳುತ್ತಾರೆ. ಉಭಯ ಕುಶಲೋಪರಿಯೆಲ್ಲಾ ಮುಗಿದ ಬಳಿಕ ಪ್ರಧಾನಿಯವರು ಲಘು ಹಾಸ್ಯದ ಧಾಟಿಯಲ್ಲಿ ನಿಮಗೀಗ ನೂರು ವರ್ಷ ದಾಟಿರಬೇಕಲ್ಲವೇ ಎಂದು ಕೇಳುತ್ತಾರೆ. ಅದಕ್ಕೆ ಉತ್ತರವಾಗಿ ಆ ಅಜ್ಜ ನಗುತ್ತಾ ‘106 ಹೋ ಗಯಾ ಹೈ’ (ನನಗೀಗ 106 ವರ್ಷ) ಎಂದು ಪ್ರತಿಕ್ರಿಯಿಸುತ್ತಾರೆ.

Advertisement

ಹಾಗಾದರೆ ನೀವು ಸುಮಾರು ಐದು ತಲೆಮಾರುಗಳನ್ನು ಕಂಡಿರಬೇಕಲ್ಲವೇ ಎಂದು ಪ್ರಧಾನಿಯವರು ಕೇಳಿದಾಗ ನಾರಾಯಣ ಅವರು ಹೌದೆಂದು ಉತ್ತರಿಸುತ್ತಾರೆ. ‘ನಿಮ್ಮನ್ನು ಕಂಡು ಬಹಳಷ್ಟು ವರ್ಷಗಳೇ ಕಳೆದು ಹೋಯಿತು. ಇಂದೇಕೋ ನಿಮ್ಮನ್ನು ಬಹಳ ನೆನಪು ಮಾಡಿಕೊಂಡೆ, ದೇಶವೇ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನಿಮ್ಮ ಜೊತೆ ಮಾತನಾಡಿ ನಿಮ್ಮ ಆಶೀರ್ವಾದ ಪಡೆಯಬೆಕೆನ್ನಿಸಿತು’ ಎಂದು ಮೋದಿ ಹೇಳಿದಾಗ ಆ ಅಜ್ಜನ ಬಾಯಿಯಿಂದ ಮಾತೇ ಹೊರಡಲಿಲ್ಲ.

ಯಾರು ಈ ಶತಾಯುಷಿ ಅಜ್ಜ? ಮೋದಿಗೂ ಇವರಿಗೂ ಏನು ಸಂಬಂಧ?
ಅಂದ ಹಾಗೆ ಈ ಶತಾಯುಷಿ ಶ್ರೀ ನಾರಾಯಣ ಅವರು ಯಾರು ಮತ್ತು ಅವರಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಏನು ಸಂಬಂಧ ಎಂದು ಕೇಳಿದರೆ ಅದೊಂದು ಹಳೆಯ ನೆನಪುಗಳ ಕಥೆ.

ಜನಸಂಘದ ದಿನಗಳಿಂದಲೂ ಆ ಕಾಲದ ಹಿರಿಯ ನಾಯಕರುಗಳಾಗಿದ್ದ ಶ್ಯಾಮ ಪ್ರಸಾದ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ ಮೊದಲಾದವರ ಒಡನಾಡಿಯಾಗಿದ್ದ ಶ್ರೀ ನಾರಾಯಣ ಅವರು ಎರಡು ಬಾರಿ ಶಾಸಕರಾಗಿದ್ದವರು. ನಾರಾಯಣ ಭಾಯ್ ಅಥವಾ ಭುಲಾಯ್ ಭಾಯ್ ಎಂದೇ ರಾಜಕೀಯ ವಲಯದಲ್ಲಿ ಪರಿಚಿತರಾಗಿದ್ದ ಇವರಿಗೂ ನರೇಂದ್ರ ಮೋದಿ ಅವರಿಗೂ ಸಂಘದ ದಿನಗಳಲ್ಲಿ ನಂಟು ಬೆಳೆದುಬಿಟ್ಟಿತ್ತು.

ಶ್ರೀ ನಾರಾಯಣ್ ಅವರು ಅಂದಿನ ನೌರಂಗಿಯಾ ವಿಧಾನ ಸಭಾ ಕ್ಷೇತ್ರದಿಂದ 1974 ಹಾಗೂ 1977ರಲ್ಲಿ ಎರಡು ಬಾರಿ ಶಾಸಕರಾಗಿ ಉತ್ತರಪ್ರದೇಶ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇದೀಗ ಈ ಕ್ಷೇತ್ರ ಖಡ್ಡಾ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿದೆ.

ಶ್ರೀ ನಾರಾಯಣ್ ಅವರು ಸುಮಾರು 50 ವರ್ಷಗಳ ಹಿಂದೆ, ಮೋದಿ ಅವರು ಆರೆಸ್ಸೆಸ್ ಕಾರ್ಯಕರ್ತರಾಗಿದ್ದ ಸಂದರ್ಭದಲ್ಲಿ ಅವರನ್ನು ಮೊದಲ ಸಲ ಭೇಟಿ ಮಾಡಿದ್ದರೆಂಬುದನ್ನು ಇದೇ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.

ಜನಸಂಘ ಹಾಗೂ ಭಾರತೀಯ ಜನತಾ ಪಕ್ಷದ ಕಟ್ಟಾ ಕಾರ್ಯಕರ್ತ ಹಾಗೂ ನಾಯಕನನ್ನು ನೆನಪಿನಲ್ಲಿಟ್ಟುಕೊಂಡು ಈ ಸಂಕಷ್ಟದ ಸಂದರ್ಭದಲ್ಲಿ ಅವರ ಯೋಗಕ್ಷೇಮವನ್ನು ವಿಚಾರಿಸಿ ಆ ಶತಾಯುಷಿ ಜೀವದ ಆಶೀರ್ವಾದವನ್ನು ಪಡೆಯುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಆ ಒಂದು ಕರೆ ಶತಾಯುಷಿ ಅಜ್ಜನ ಮುಖದಲ್ಲಿ ಸಾರ್ಥಕತೆ ಭಾವನೆಯೊಂದು ಮೂಡಲು ಕಾರಣವಾಗಿದ್ದು ಮಾತ್ರ ಸುಳ್ಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next