ಹೊಸದಿಲ್ಲಿ: ಟ್ವಿಟರ್‌ನಲ್ಲಿ 5.79 ಕೋಟಿ ಫಾಲೋವರ್‌ಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (8.11 ಕೋಟಿ) ಅವರ ಅನಂತರ ಟ್ವಿಟರ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ 2ನೇ ರಾಜಕೀಯ ನಾಯಕರೆನಿಸಿದ್ದಾರೆ.
ಜಗತ್ತಿನ 163 ದೇಶಗಳ ನಾಯಕರ ಟ್ವಿಟರ್ ಖಾತೆಗಳನ್ನು ಅಧ್ಯಯನ ಮಾಡಿ ಈ ವರದಿ ಸಿದ್ಧಪಡಿಸಲಾಗಿದ್ದು, ವಿಶ್ವದಲ್ಲಿ ಮೋದಿಯವರ ಜನಪ್ರಿಯತೆ ದಿನೇ ದಿನೇ ಹೆಚ್ಚಾಗುತ್ತಾ ಸಾಗಿದೆ.
ಹಿಂಬಾಲಕರ ಲೆಕ್ಕಾಚಾರದಲ್ಲಿ ಇತ್ತೀಚೆಗೆ ಅವರು, ಕ್ರೈಸ್ತರ ಪರಮ ಧರ್ಮಾಧಿಕಾರಿ ಪೋಪ್ ಫ್ರಾನ್ಸಿಸ್ (5.1 ಕೋಟಿ ಫಾಲೋವರ್‌ಗಳು) ಅವರನ್ನೂ ಹಿಂದಿಕ್ಕಿದ್ದಾರೆ.
ಮತ್ತೊಂದೆಡೆ, ಕ್ಲೆಯರ್ ಡಾಟ್ ಕಾಂ ಎಂಬ ಸಂಸ್ಥೆ ನಡೆಸಿರುವ ಅಧ್ಯಯನದ ಪ್ರಕಾರ, ಟ್ವಿಟರ್‌ನಲ್ಲಿ ಮೋದಿಯವರೇ ಹೆಚ್ಚು ಜನರನ್ನು ತಲುಪುತ್ತಿದ್ದಾರೆ. ಮೋದಿಯವರು ಹಾಕುವ ಪ್ರತಿಯೊಂದು ಟ್ವೀಟ್ ನೇರವಾಗಿ ಅಥವಾ ಪರೋಕ್ಷವಾಗಿ ಸುಮಾರು 4 ಕೋಟಿ ಜನರಿಗೆ ತಲುಪುತ್ತದೆ.
ಅಂದರೆ, ಟ್ವಿಟರ್‌ನಲ್ಲಿ ಇರುವ ಅವರ ಬೆಂಬಲಿಗರಲ್ಲಿ ಶೇ. 70ರಷ್ಟು ಜನರಿಗೆ ಅವರ ಸಂದೇಶಗಳು ತಲುಪುತ್ತವೆ ಎಂದು ಹೇಳಲಾಗಿದೆ.