Advertisement

ಆಯ್ಕೆ ನಿಮಗೆ ಬಿಟ್ಟಿದ್ದು ಎಂದ ಮೋದಿ

02:51 PM Mar 31, 2019 | Team Udayavani |

ಹೊಸದಿಲ್ಲಿ: “ನುಸುಳುಕೋರರ ಸಮಸ್ಯೆ, ಭಯೋ ತ್ಪಾದನೆ, ಭ್ರಷ್ಟಾಚಾರದ ವಿರುದ್ಧ ಹೋರಾಡುವಲ್ಲಿ ನಾನು ಬದ್ಧನಾಗಿದ್ದೇನೆ. ಬಿಜೆಪಿ ನೇತೃತ್ವದ ಸರಕಾರ ಗೆದ್ದರಷ್ಟೇ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲು ಸಾಧ್ಯ. ನಿಮಗೆ ಧಮ್‌ ಇರುವ ಚೌಕಿದಾರ ಬೇಕೋ, ಕಲಬೆರಕೆಯ ಪರಿವಾರ ಬೇಕೋ ಎಂಬುದನ್ನು ನೀವೇ ನಿರ್ಧರಿಸಿ.’

Advertisement

ಹೀಗೆಂದು ಮತದಾರರಿಗೆ ಕರೆ ನೀಡಿರುವುದು ಪ್ರಧಾನಿ ನರೇಂದ್ರ ಮೋದಿ. ಶನಿವಾರ ಅರುಣಾಚಲ ಪ್ರದೇಶ, ಅಸ್ಸಾಂ ನಲ್ಲಿ ಸರಣಿ ರ್ಯಾಲಿಗಳನ್ನು ನಡೆಸಿದ ಮೋದಿ, ಈಶಾನ್ಯ ರಾಜ್ಯ ಗಳಲ್ಲಿ ನುಸುಳುಕೋರರ ಸಮಸ್ಯೆ ಹೆಚ್ಚಾಗಲು ಕಾಂಗ್ರೆಸ್‌ನ ನೀತಿಗಳೇ ಕಾರಣ ಎಂದು ಆರೋಪಿಸಿದ್ದಾರೆ. ಅಸ್ಸಾಂನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಯಾವತ್ತೂ ಅಸ್ಸಾಮಿಗಳಿಗೆ ವಂಚಿಸಿದೆ. ಸರ್ದಾರ್‌ ಪಟೇಲ್‌ ಮತ್ತು ಗೋಪಿನಾಥ್‌ ಬರ್ದೋಲಾಯ್‌ ದೇಶ ವಿಭಜನೆ ವೇಳೆ ದಿಟ್ಟ ನಿರ್ಧಾರ ಕೈಗೊಳ್ಳದೇ ಇರುತ್ತಿದ್ದರೆ, ಅಸ್ಸಾಂನ ಅಸ್ಮಿತೆಯು ಬೇರೆಯದೇ ಆಗಿರುತ್ತಿತ್ತು ಎಂದಿದ್ದಾರೆ.

ಕಾಂಗ್ರೆಸ್ಸನ್ನು ಬೆಂಬಲಿಸಿದ್ದೆವು: 1971ರಲ್ಲಿ ಪಾಕಿಸ್ಥಾನವನ್ನು ಭಾರತ ಸೋಲಿಸಿ, ಬಾಂಗ್ಲಾದ ವಿಮೋಚನೆಗೆ ನೆರವಾದಾಗ ನಾವು ಕಾಂಗ್ರೆಸ್ಸನ್ನು ಹಾಗೂ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರನ್ನು ಬೆಂಬಲಿಸಿದ್ದೆವು. ಆದರೆ, ಪಾಕ್‌ನ ಬಾಲಕೋಟ್‌ನಲ್ಲಿ ದಾಳಿ ನಡೆಸಿದಾಗ ಕಾಂಗ್ರೆಸ್‌ ನಮ್ಮ ಯೋಧರ ಶೌರ್ಯವನ್ನೇ ಪ್ರಶ್ನೆ ಮಾಡಿತು. ಬಿಜೆಪಿ ಬಗ್ಗೆ ಇಡೀ ದೇಶ ಖುಷಿ ಪಡುತ್ತಿದೆ. ಆದರೆ, ಕೇವಲ ಕಾಂಗ್ರೆಸ್‌ ಮತ್ತು ಭಯೋತ್ಪಾದಕರು ಮಾತ್ರ ಖುಷಿಪಡುತ್ತಿಲ್ಲ ಎಂದೂ ಮೋದಿ ಹೇಳಿದ್ದಾರೆ.

ಪ್ರಗತಿಯಿಂದ ನೊಂದಿದ್ದಾರೆ: ಅರುಣಾಚಲದಲ್ಲಿ ಮಾತ ನಾಡಿದ ಮೋದಿ, ದೇಶ ಅಭಿವೃದ್ಧಿಯಾಗುತ್ತಿದ್ದರೆ ಎಲ್ಲರೂ ಸಂತೋಷ ಪಡುತ್ತಾರೆ. ಆದರೆ, ವಿಪಕ್ಷಗಳಿಗೆ ಭಾರತದ ಅಭಿವೃದ್ಧಿ ಹಾಗೂ ಯಶಸ್ಸನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ವಿಪಕ್ಷಗಳು ಉಗ್ರರ ಭಾಷೆಯಲ್ಲಿ ಮಾತನಾಡುತ್ತವೆ. ಅಂಥವರಿಗೆ ನೀವೇ ತಕ್ಕ ಪಾಠ ಕಲಿಸಬೇಕು ಎಂದೂ ಹೇಳಿದ್ದಾರೆ.

ನೋಟಿಸ್‌ ಜಾರಿ: “ಮೇ ಭಿ ಚೌಕಿದಾರ್‌’ ಎಂದು ಬರೆದಿರುವ ಕಪ್‌ಗ್ಳಲ್ಲಿ ಚಹಾ ವಿತರಣೆ ಮಾಡಿರುವ ರೈಲ್ವೇ ಇಲಾಖೆಗೆ ಚುನಾವಣಾ ಆಯೋಗ ಶನಿವಾರ ಷೋಕಾಸ್‌ ನೋಟಿಸ್‌ ಜಾರಿ ಮಾಡಿದೆ. ಮೇಲ್ನೋಟಕ್ಕೆ ಈ ಕ್ರಮ ನೀತಿ ಸಂಹಿತೆ ಉಲ್ಲಂಘನೆಯೆಂದು ಕಂಡುಬಂದಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

Advertisement

ಗೋರಖ್‌ಪುರ ಅಭ್ಯರ್ಥಿ ಘೋಷಣೆ: ಎಸ್ಪಿ-ಬಿಎಸ್ಪಿ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಎರಡೇ ದಿನದಲ್ಲಿ ಯೂಟರ್ನ್ ಹೊಡೆದು ಮೈತ್ರಿಯಿಂದ ಹೊರಬರುವ ಮೂಲಕ ಅಖೀಲೇಶ್‌-ಮಾಯಾಗೆ ನಿಶಾದ್‌ ಪಕ್ಷ ಶಾಕ್‌ ನೀಡಿದೆ. ಇದಾದ ಬೆನ್ನಲ್ಲೇ ಶನಿವಾರ ಎಸ್‌ಪಿ ನಾಯಕ ಅಖೀಲೇಶ್‌ ಅವರು ನಿಶಾದ್‌ ಸಮುದಾಯದ ಅಭ್ಯರ್ಥಿಯನ್ನೇ ಗೋರಖ್‌ಪುರದಲ್ಲಿ ಕಣಕ್ಕಿಳಿಸಿ ಜಾಣ್ಮೆ ಮೆರೆದಿದ್ದಾರೆ. ಕೌದಿರಾಂ ಅಸೆಂಬ್ಲಿ ಕ್ಷೇತ್ರದಲ್ಲಿ 2 ಬಾರಿ ಶಾಸಕರಾಗಿದ್ದ ರಾಮ್‌ ಭುವಲ್‌ ನಿಶಾದ್‌ ಅವರು ಇಲ್ಲಿ ಕಣಕ್ಕಿಳಿಯಲಿದ್ದಾರೆ.

ಕಳೆದ ವರ್ಷ ಗೋರಖ್‌ಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದ ಬೆಂಬಲದಿಂದ ನಿಶಾದ್‌ ಪಕ್ಷದ ಪ್ರವೀಣ್‌ ನಿಶಾದ್‌ ಸಂಸದರಾಗಿ ಆಯ್ಕೆಯಾಗಿದ್ದರು. 4 ದಿನಗಳ ಹಿಂದೆ ಮೈತ್ರಿಪಕ್ಷಗಳ ಜತೆ ಕೈಜೋಡಿಸಿದ್ದ ಅವರು ಶುಕ್ರವಾರ ಸಿಎಂ ಯೋಗಿ ಆದಿತ್ಯನಾಥ್‌ರನ್ನು ಭೇಟಿ ಮಾಡಿದ ನಂತರ ಎಸ್ಪಿ-ಬಿಎಸ್ಪಿಗೆ ಕೈ ಕೊಟ್ಟಿದ್ದರು.

ಎಸ್‌ಪಿಗೆ ಬಿಜೆಪಿ ಆಘಾತ: ಚುನಾವಣೆ ಸಮೀಪಿಸುತ್ತಿರುವಂತೆ ಎಸ್‌ಪಿಗೆ ಭಾರೀ ಆಘಾತ ಎಂಬಂತೆ, ಸಮಾಜವಾದಿ ಪಕ್ಷದಲ್ಲಿ 6 ಬಾರಿ ಕಣಕ್ಕಿಳಿದು ಶಾಸಕರಾಗಿ ಆಯ್ಕೆಯಾಗಿರುವ, ಮಾಜಿ ಸಚಿವ ಚೌಧರಿ ವೀರೇಂದ್ರ ಸಿಂಗ್‌ ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಶಾ ದಂಪತಿ 38ಕೋಟಿ ರೂ. ಆಸ್ತಿ ಒಡೆಯರು
ಲೋಕಸಭಾ ಚುನಾವಣೆಗಾಗಿ ಗಾಂಧಿನಗರದಲ್ಲಿ ತಮ್ಮ ನಾಮಪತ್ರ ಸಲ್ಲಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ತಮ್ಮ ಹಾಗೂ ತಮ್ಮ ಪತ್ನಿಯ ಹೆಸರಿನಲ್ಲಿ ಒಟ್ಟು 38.11 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಇದರಲ್ಲಿ, ಪಿತ್ರಾರ್ಜಿತವಾಗಿ ಬಂದಿರುವ 23.75 ಕೋಟಿ ರೂ.ಗಳಷ್ಟು ಸ್ಥಿರಾಸ್ತಿ ಹಾಗೂ ಚರಾಸ್ತಿಗಳ ಮೌಲ್ಯವೂ ಸೇರಿದೆ ಎಂದು ತಮ್ಮ ಅಫಿದವಿಟ್‌ನಲ್ಲಿ ಶಾ ಘೋಷಿಸಿದ್ದಾರೆ. ನಾಮಪತ್ರ ಸಲ್ಲಿಸುವಾಗ ತಮ್ಮಲ್ಲಿ 20,633 ಕೋಟಿ ರೂ. ನಗದು ಹೊಂದಿದ್ದು, ಅವರ ಪತ್ನಿಯ ಬಳಿ 72,578 ರೂ. ಇತ್ತೆಂದು ಅಫಿದವಿಟ್‌ನಲ್ಲಿ ಉಲ್ಲೇಖೀಸಲಾಗಿದೆ.

ಪ್ರಧಾನಿ ಮೋದಿ ವಿರುದ್ಧ ಮಾಜಿ ಯೋಧ ಸ್ಪರ್ಧೆ
ಬಿಎಸ್‌ಎಫ್ ಯೋಧರಿಗೆ ನೀಡಲಾಗುತ್ತಿರುವ ಆಹಾರವು ಕಳಪೆ ಗುಣಮಟ್ಟದ್ದಾಗಿದೆ ಎಂಬ ವೀಡಿಯೋವೊಂದನ್ನು ಪೋಸ್ಟ್‌ ಮಾಡಿ 2017ರಲ್ಲಿ ವಜಾಗೊಂಡ ಬಿಎಸ್‌ಎಫ್ ಮಾಜಿ ಯೋಧ ಈಗ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ಸ್ವತಂತ್ರ ಅಭ್ಯರ್ಥಿಯಾಗಿ ಮೋದಿ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ತೇಜ್‌ ಬಹಾದೂರ್‌ ಯಾದವ್‌ ತಿಳಿಸಿದ್ದಾರೆ.

“ಸೇನಾಪಡೆಯಲ್ಲಿನ ಭ್ರಷ್ಟಾಚಾರವನ್ನು ಬಹಿರಂಗ ಪಡಿಸಿದ್ದಕ್ಕೆ ನನ್ನನ್ನು ವಜಾ ಮಾಡಲಾಯಿತು. ಸೇನೆಯಲ್ಲಿನ ಭ್ರಷ್ಟಾಚಾ ರವನ್ನು ಕಿತ್ತೂಗೆದು, ಪಡೆಯನ್ನು ಬಲಿಷ್ಠಗೊಳಿಸುವುದೇ ನನ್ನ ಪ್ರಮುಖ ಧ್ಯೇಯ’ ಎಂದಿದ್ದಾರೆ ಯಾದವ್‌.

ಮತ ಪತ್ರದಲ್ಲಿ ಬ್ರೈಲ್‌ ಲಿಪಿ
ಮೇಘಾಲಯದಲ್ಲಿ ಎಲ್ಲ ಮತಗಟ್ಟೆ ಗಳಲ್ಲೂ ಬ್ರೈಲ್‌ ಲಿಪಿ ಇರುವಂಥ ಮತ ಪತ್ರಗಳನ್ನು ಕಲ್ಪಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಇದೇ ಮೊದಲ ಬಾರಿಗೆ ಇಂಥ ಕ್ರಮ ಕೈಗೊಳ್ಳಲಾಗಿದ್ದು, ದೃಷ್ಟಿ ನ್ಯೂನತೆಯುಳ್ಳ 800ಕ್ಕೂ ಹೆಚ್ಚು ಮತದಾರರು ಈ ಸೌಲಭ್ಯವನ್ನು ಬಳಸಿ ಕೊಂಡು ಹಕ್ಕು ಚಲಾಯಿಸಲಿದ್ದಾರೆ.

ಇವಿಎಂಗಳ ಮೇಲೆ ಮತಪತ್ರವನ್ನು ಅಂಟಿ ಸಲಾಗಿದ್ದು, ಅದರಲ್ಲಿ ಬ್ರೈಲ್‌ ಆಲ್ಫಾಬೆಟ್‌ ಬಳಸಿಕೊಂಡು ಅಭ್ಯರ್ಥಿ ಗಳ ಹೆಸರು ಮತ್ತು ಚಿಹ್ನೆ ಯನ್ನು ನಮೂದಿಸಲಾಗಿದೆ.
ಆಯೋಗದ ಈ ಕ್ರಮವನ್ನು ದೃಷ್ಟಿ ನ್ಯೂನತೆಯುಳ್ಳ ಮತದಾರರು ಸ್ವಾಗತಿಸಿದ್ದಾರೆ.

ಭಿಕ್ಷೆ ಕೊಟ್ಟಿದ್ದಕ್ಕೆ ಬಿಜೆಪಿ ದೂರು
ಭೋಪಾಲ್‌ ಲೋಕಸಭೆ ಕ್ಷೇತ್ರದಲ್ಲಿ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌ ಅವರು ದೇವಸ್ಥಾನದ ಹೊರಗಿದ್ದ ಭಿಕ್ಷುಕರಿಗೆ ಭಿಕ್ಷೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸಿದ್ಧ ಚಿಂತಾಮಣ್‌ ಗಣೇಶ ದೇವಾಲಯಕ್ಕೆ ಭೇಟಿ ನೀಡಿದ್ದ ದಿಗ್ವಿಜಯ್‌ ದೇವಸ್ಥಾನದ ಹೊರಗೆ ಕುಳಿತಿದ್ದ ಭಿಕ್ಷುಕರಿಗೆ ತಲಾ 20 ರೂ. ಭಿಕ್ಷೆ ಹಾಕುತ್ತಿದ್ದ ವಿಡಿಯೋ ಬಹಿರಂಗವಾಗಿದೆ. ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಆರೋಪಿಸಿರುವ ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next