ಬಿಲಾಸ್‌ಪುರ: ಕಾಂಗ್ರೆಸ್ ಆಡಳಿತಾವಧಿಯಲ್ಲಿ ರೈಲ್ವೆಗೆ 300 ಕೋಟಿ ರೂ. ಮೀಸಲಿಡಲಾಗಿತ್ತು, ಆದರೆ ಈ ವರ್ಷ ಬಿಜೆಪಿ ರೂ. 6000 ಕೋಟಿ ರೂ. ಮೀಸಲಿಟ್ಟಿದೆ. ಇದು ‘ಮೋದಿ ಮಾಡೆಲ್’, ಇದು ಛತ್ತೀಸ್‌ಗಢದ ಮೇಲಿನ ನನ್ನ ಪ್ರೀತಿ, ಅಭಿವೃದ್ಧಿಗೆ ನನ್ನ ಬದ್ಧತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಶನಿವಾರ ನಡೆದ ‘ಪರಿವರ್ತನ್ ಮಹಾ ಸಂಕಲ್ಪ ರ‍್ಯಾಲಿ’ ಯಲ್ಲಿ ಮಾತನಾಡಿ,ಛತ್ತೀಸ್‌ಗಢದಲ್ಲಿ ಬದಲಾವಣೆಯಾಗುವುದು ಖಚಿತಗೊಂಡಿದೆ. ಇಲ್ಲಿ ಕಾಣುವ ಸಂಭ್ರಮವೇ ಬದಲಾವಣೆಯ ಘೋಷಣೆ. ಛತ್ತೀಸ್‌ಗಢದ ಜನರು ಇನ್ನು ಮುಂದೆ ಕಾಂಗ್ರೆಸ್‌ನ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ನಿರ್ಧರಿಸಿದ್ದಾರೆ” ಎಂದು ಹೇಳಿದರು.
ನಾವು ಆದಷ್ಟು ಬೇಗ ರೈಲು ಹಳಿಗಳನ್ನು ವಿದ್ಯುದ್ದೀಕರಿಸಲು ಪ್ರಯತ್ನಿಸುತ್ತಿದ್ದೇವೆ.ಛತ್ತೀಸ್‌ಗಢಕ್ಕೆ ಆಧುನಿಕ ವಂದೇ ಭಾರತ್ ರೈಲನ್ನು ನೀಡಿದ್ದು ಬಿಜೆಪಿಯೇ. ನಿಮ್ಮ ಕನಸುಗಳೇ ನನ್ನ ಸಂಕಲ್ಪ ಎಂಬುದು ನನ್ನ ಗ್ಯಾರಂಟಿ.ಇಲ್ಲಿ ಬಿಜೆಪಿ ಸರಕಾರ ಇದ್ದಾಗ ಮಾತ್ರ ನಿಮ್ಮ ಕನಸುಗಳು ಈಡೇರುತ್ತವೆ. ನಾವು ದೆಹಲಿಯಿಂದ ಎಷ್ಟೇ ಪ್ರಯತ್ನ ಮಾಡಿದರೂ ಇಲ್ಲಿನ ಕಾಂಗ್ರೆಸ್ ಆ ಪ್ರಯತ್ನಗಳನ್ನು ವಿಫಲಗೊಳಿಸುತ್ತದೆ. ಕಳೆದ ಐದು ವರ್ಷಗಳಲ್ಲಿ ಛತ್ತೀಸ್ ಗಢಕ್ಕೆ ಸಾವಿರಾರು ಕೋಟಿ ರೂ. ರಸ್ತೆಗಳು, ರೈಲು, ವಿದ್ಯುತ್ ಮತ್ತು ಇತರ ಹಲವಾರು ಅಭಿವೃದ್ಧಿ ಯೋಜನೆಗಳು ಬಂದಿದ್ದು, ನಾವು ರಾಜ್ಯಕ್ಕೆ ಯಾವುದೇ ಹಣದ ಕೊರತೆಯನ್ನು ಮಾಡಿಲ್ಲ” ಎಂದರು.
‘ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾವುದೇ ಬಡವರು ಹಸಿವಿನಿಂದ ಮಲಗಬಾರದು ಎಂದು ಖಚಿತಪಡಿಸಿಕೊಳ್ಳಲು, ದೇಶದ ಬಡವರಿಗೆ ಉಚಿತ ಪಡಿತರವನ್ನು ನೀಡಲಾಯಿತು. ಆದರೆ ಬಡವರ ಹೊಟ್ಟೆ ಸೇರುವ ಅನ್ನವೂ ಕಾಂಗ್ರೆಸ್ ಪಾಲಿಗೆ ಕಳ್ಳತನದ ಸಾಧನವಾಯಿತು. ಇದರಲ್ಲೂ ಕಾಂಗ್ರೆಸ್ ಸರ್ಕಾರ ಹಗರಣ ಮಾಡಿದೆ’ ಎಂದು ಆರೋಪಿಸಿದರು.
ಛತ್ತೀಸ್‌ಗಢದ ಯುವಕರು ಕಾಂಗ್ರೆಸ್‌ನ ತಂತ್ರದ ಫಲವನ್ನು ಅನುಭವಿಸುತ್ತಿದ್ದಾರೆ. ಕೆಲಸ ಸಿಕ್ಕವರಿಗೆ ಅನಿಶ್ಚಿತತೆ ಮತ್ತು ಹೊರಹಾಕಲ್ಪಟ್ಟವರಿಗೆ ಅನ್ಯಾಯ.ಇದರಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಬಿಜೆಪಿ ಸರಕಾರ ರಚನೆಯಾದ ಕೂಡಲೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲ್ಲಿನ ಯುವಕರಿಗೆ ಭರವಸೆ ನೀಡುತ್ತೇನೆ ಎಂದರು.