ಬಳ್ಳಾರಿ/ಬೆಂಗಳೂರು : ಬಜರಂಗದಳ ಸಂಘಟನೆ ನಿಷೇಧದ ಕುರಿತು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾವಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಒಟ್ಟಾಗಿ ಮುಗಿಬಿದ್ದಿದ್ದಾರೆ.
ಪ್ರಣಾಳಿಕೆ ಹೊರಬಿದ್ದ ಕೆಲವೇ ನಿಮಿಷಗಳ ಬಳಿಕ ಹೊಸಪೇಟೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಶ್ರೀರಾಮ-ಹನುಮನ ಮೇಲೆ ಕಾಂಗ್ರೆಸ್‌ಗೆàಕೆ ಇಷ್ಟೊಂದು ದ್ವೇಷ?’ ಎಂದು ಪ್ರಶ್ನಿಸಿದರು.
ಈ ಹಿಂದೆ ಇದೇ ರೀತಿ ಶ್ರೀರಾಮನನ್ನು ಬಂಧಿಸಿಟ್ಟ ಕಾಂಗ್ರೆಸ್, ಈಗ ಜೈ ಬಜರಂಗ ಎಂದು ಹೇಳುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.
ಇಂದು ನಾನು ಆಂಜನೇಯ ಹುಟ್ಟಿದ ತಾಣದಲ್ಲಿರುವುದು ಅದೃಷ್ಟ. ಹಾಗೆಯೇ ಇವತ್ತೇ ಕಾಂಗ್ರೆಸ್‌ನವರು ಆಂಜನೇಯ ಭಕ್ತರ ಬಜರಂಗದಳ ಸಂಘಟನೆಯನ್ನು ನಿಷೇಧಿಸುವ ಬಗ್ಗೆ ಪ್ರಸ್ತಾವಿಸಿರುವುದು ದುರಾದೃಷ್ಟ ಎಂದು ಪ್ರಧಾನಿ ಹರಿಹಾಯ್ದರು.
ರಾಮ ಮತ್ತು ಹನುಮಂತ ನಮಗೆ ಪೂಜ್ಯರು. ಆದರೆ ಬಜರಂಗ ಬಲಿಯನ್ನು “ಜೈ ಬಜರಂಗ ಬಲಿ’ ಎಂದು ಆರಾಧಿಸುವವರನ್ನು ಕಾಂಗ್ರೆಸ್ ನವರು ಬಂಧಿಸುವ ಸಂಕಲ್ಪ ಮಾಡಿದ್ದಾರೆ ಎಂದು ಛೇಡಿಸಿದರು.
ಕಾಂಗ್ರೆಸ್‌ನ “ಬಜರಂಗದಳ ನಿಷೇಧ’ದ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಾತ್ರವಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. “ತಾಕತ್ತಿದ್ದರೆ ಬಜರಂಗದಳವನ್ನು ನಿಷೇಧಿಸಿ ನೋಡಿ’ ಎಂದು ಇವರೆಲ್ಲರೂ ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ.