ಹೊಸದಿಲ್ಲಿ: ಕೇಂದ್ರದ ವಿವಿಧ ಇಲಾಖೆಗಳಲ್ಲಿ ಹೆಚ್ಚಾಗಿ ಯುವಕರನ್ನು ನೇಮಿಸಿಕೊಳ್ಳುವುದು, ಇಲಾಖೆಗಳ ನಿವೃತ್ತ ಅಧಿಕಾರಿಗಳಿಂದ ಸಲಹೆ-ಸೂಚನೆ ಪಡೆಯುವುದು ಹಾಗೂ ತಂತ್ರಜ್ಞಾನದ ಲಾಭವನ್ನು ಗರಿಷ್ಠ ಮಟ್ಟಕ್ಕೆ ಬಳಸಿಕೊಳ್ಳುವುದು – ಈ ಮೂರನ್ನೂ ಬಳಸಿಕೊಂಡು ಈಗ ನೀಡಲಾಗುತ್ತಿರುವ ಆಡಳಿತಕ್ಕಿಂತ ಮತ್ತಷ್ಟು ಅತ್ಯುತ್ತಮ ಆಡಳಿತವನ್ನು ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂದಡಿಯಿಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ, ಎಲ್ಲ ಸಚಿವಾಲಯಗಳಿಗೆ ಸೂಚನೆ ರವಾನಿಸಿರುವ ಅವರು, ಅವರವರ ಇಲಾಖೆಗಳಲ್ಲಿ ಉತ್ತಮ ಆಡಳಿತ ನೀಡುವ ಉದ್ದೇಶಕ್ಕಾಗಿ ಮೇಲಿನ ಮೂರು ಸಂಪನ್ಮೂಲಗಳನ್ನು ಬಳಕೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಸೂಚಿಸಿದ್ದಾರೆ.
ಇದಕ್ಕಾಗಿಯೇ ಪ್ರಧಾನಿ ನೇತೃತ್ವದಲ್ಲಿ ಇತ್ತೀಚೆಗೆ ಚಿಂತನ ಶಿಬಿರಗಳನ್ನು ನಡೆಸಲಾಯಿತು. ಇವುಗಳಲ್ಲಿ, ಎಲ್ಲ ಇಲಾಖೆಗಳ ಸಚಿವರು, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಸುಮಾರು ಐದು ಗಂಟೆಗಳ ಕಾಲ ನಡೆದ ಮೊದಲ ಶಿಬಿರದ ಅನಂತರ 77 ಸಚಿವರನ್ನು ಎಂಟು ತಂಡಗಳನ್ನಾಗಿ ವಿಭಜಿಸಲಾಯಿತು. ಈ ತಂಡಗಳು, ತಂತ್ರಜ್ಞಾನ ಆಧಾರಿತ ಸಂಪನ್ಮೂಲಗಳ ಅಭಿವೃದ್ಧಿಗಾಗಿ ಹಾಗೂ ಯುವ ವೃತ್ತಿಪರರನ್ನು ತಂಡದಲ್ಲಿ ನೇಮಿಸಿಕೊಳ್ಳುವ ಕೆಲಸ ಮಾಡಲಿವೆ. ಈ ಮೂಲಕ, ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ, ಚುರುಕುತನ ಹಾಗೂ ಸರಕಾರದ ಫಲಪ್ರದತೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಲ್ಲದೆ 5 ಚಿಂತನ ಶಿಬಿರಗಳನ್ನು ಪ್ರತ್ಯೇಕವಾಗಿ ನಡೆಸಲಾಯಿತು.
“ಪ್ರಾದೇಶಿಕ ಅಗತ್ಯಕ್ಕೆ ಅನುಗುಣವಾಗಿ ನೀತಿ’
ಹೊಸದಿಲ್ಲಿ: ಸದ್ಯ ದೇಶದ ಆಯಾ ಭಾಗಕ್ಕೆ ಅನುಕೂಲವಾಗುವಂತೆ, ಅಗತ್ಯತೆಗೆ ಅನುಗುಣವಾಗಿ ನೀತಿ ನಿಯಮಗಳನ್ನು ಜಾರಿ ಮಾಡಲಾಗುತ್ತಿದೆ. ಹಿಂದಿನ ಸಂದರ್ಭಗಳಲ್ಲಿ ದೇಶಕ್ಕೇ ಅನ್ವಯವಾಗುವಂಥ ನಿಯಮಗಳನ್ನು ದಿಲ್ಲಿಯಲ್ಲಿಯೇ ರೂಪಿಸಲಾಗುತ್ತಿದ್ದುದರಿಂದ ಅವುಗಳು ವಿಫಲ ಹೊಂದುತ್ತಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ತ್ರಿಪುರಾದಲ್ಲಿನ 1.47 ಲಕ್ಷ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ- ಗ್ರಾಮೀಣ (ಪಿಎಂಎವೈ-ಜಿ)ದ ಮೊದಲ ಕಂತಿನ ಮನೆಗಳನ್ನು ವಿತರಿಸಿ ಅವರು ಮಾತನಾಡಿದ್ದಾರೆ.