ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಾಣಗೊಂಡ ಭವ್ಯ ದೇವಾಲಯದಲ್ಲಿ ಶ್ರೀಬಾಲ ರಾಮನ ಪ್ರಾಣ ಪ್ರತಿಷ್ಠೆ ಸೋಮವಾರ ಅದ್ದೂರಿಯಾಗಿ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ತಮ್ಮ ಕೈಯಾರೆ ಶ್ರೀರಾಮನ ಪ್ರಾಣಪ್ರತಿಷ್ಠೆ ನೆರವೇರಿಸಿದ ಆ ಐತಿಹಾಸಿಕ ಕ್ಷಣವನ್ನು ಇಡೀ ವಿಶ್ವದ ಜನರು ಕಂಡು ಭಕ್ತಿ ಪರವಶರಾದರು. ತನ್ನದೇ ಜನ್ಮಭೂಮಿಯಲ್ಲಿ ತಲೆಎತ್ತಿ ನಿಂತ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾ ವಿರಾಜಮಾನನಾದುದನ್ನು ಕಂಡು ಅಯೋಧ್ಯೆ ಮಾತ್ರವಲ್ಲದೆ ದೇಶವಿದೇಶಗಳಲ್ಲಿನ ಕೋಟ್ಯಂತರ ಭಕ್ತರ ಕಣ್ಣುಗಳಿಂದ ಅವರಿಗರಿವಿಲ್ಲದಂತೆಯೇ ನೀರು ಜಿನುಗಿತು. ತನ್ಮೂಲಕ ಭಕ್ತಗಡಣ ಶ್ರೀರಾಮನ ಚರಣಕ್ಕೆರಗಿತು.
ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆ ನೆರವೇರಿಸಿದ ಬಳಿಕ ಅಲ್ಲಿ ಸೇರಿದ್ದ ಅತಿಥಿ ಅಭ್ಯಾಗತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಮುಂದಿನ ಸಾವಿರ ವರ್ಷಗಳ ಭವಿಷ್ಯದ ಭಾರತದ ಅಭಿವೃದ್ಧಿಯ ತಮ್ಮ ಕಲ್ಪನೆಯ ಬೀಜವನ್ನು ದೇಶದ ಜನತೆಯ ಮನದಲ್ಲಿ ಬಿತ್ತಿದರು. ಹತ್ತು ಹಲವು ಎಡರುತೊಡರುಗಳನ್ನು ಎದುರಿಸಿ, ಶತಮಾನಗಳ ಹೋರಾಟ, ತ್ಯಾಗ, ಬಲಿದಾನದ ಫಲವಾಗಿ ಕೊನೆಗೂ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆ ನೆರವೇರಿದೆ.
ಇದು ಭಾರತೀಯ ಸಂಸ್ಕೃತಿ ಮತ್ತು ಭಾರತೀಯ ಮೌಲ್ಯಗಳ ಪ್ರಾಣ ಪ್ರತಿಷ್ಠಾಪನೆ. ಈಗ ಶ್ರೀರಾಮ ಭಾರತೀಯರೆಲ್ಲರ ಅಂತರಂಗದಲ್ಲಿ ನೆಲೆಸಿದ್ದಾನೆ ಎಂದು ಬಣ್ಣಿಸುವ ಮೂಲಕ ಪ್ರಧಾನಿ ಮೋದಿ, ದೇಶದ ಪ್ರತಿಯೋರ್ವ ನಾಗರಿಕನಲ್ಲಿ ರಾಷ್ಟ್ರೀಯತೆಯ ಭಾವವನ್ನು ಬಡಿದೆಬ್ಬಿಸಿದರು.
ಶ್ರೀರಾಮ ಮಂದಿರ, ಭಾರತೀಯ ಸಮಾಜದ ಪರಿಪಕ್ವತೆಯ ಸಂಕೇತ. ಶತ ಮಾನಗಳ ಹೋರಾಟಕ್ಕೆ ಲಭಿಸಿದ ಐತಿಹಾಸಿಕ ವಿಜಯದ ಜತೆಯಲ್ಲಿ ವಿನಯ ಶೀಲತೆಗೂ ಇದು ಪ್ರತೀಕವಾಗಿದೆ. ಭಾರತೀಯರ ಧೈರ್ಯ, ಶಾಂತಿ, ಸೌಹಾರ್ದತೆ, ಸಹ ಬಾಳ್ವೆಯ ಸಂಕೇತವಾಗಿ ಶ್ರೀರಾಮಲಲ್ಲಾ ವಿರಾಜಮಾನನಾಗಿದ್ದಾನೆ. ಶ್ರೀರಾಮ ಮಂದಿ ರವು ಭಾರತದ ಏಕತೆಯ ಶಕ್ತಿಯನ್ನು ಇಡೀ ಜಗತ್ತಿಗೇ ಎತ್ತಿ ತೋರಿಸಿದೆ. ಇದು ಭಾರತದ ಹೊಸ ಶಕ್ತಿಗೆ ಜನ್ಮ ನೀಡಿದೆ. ಭಾರತದ ಭವಿಷ್ಯವು, ಭೂತ, ವರ್ತ ಮಾನಕ್ಕಿಂತಲೂ ಉತ್ತಮವಾಗಿರಲಿದೆ. ಮುಂದಿನ ಸಾವಿರ ವರ್ಷದಲ್ಲಿ ಭಾರತ ಅಭಿವೃದ್ಧಿಯ ಯುಗಕ್ಕೆ ಸಾಕ್ಷಿಯಾಗಬೇಕು. ಇದು ಸಾಕಾರಗೊಳ್ಳಬೇಕಾದರೆ ನಾವೆ ಲ್ಲರೂ ರಾಷ್ಟ್ರಹಿತವನ್ನು ತಮ್ಮದಾಗಿಸಿಕೊಳ್ಳಬೇಕು ಎಂಬ ಪ್ರಧಾನಿ ಅವರ ಮಾತುಗಳು ಶ್ರೀರಾಮ ಮಂದಿರದ ಕುರಿತಂತೆ ವಿರೋಧ, ಅಪಸ್ವರ, ಕುಹಕದ ಮಾತು ಗಳನ್ನಾಡಿದವರಿಗೆ ಪರೋಕ್ಷವಾಗಿ ತಿವಿದಂತಿತ್ತು.
ದೇಶದ ಭಕ್ತಕೋಟಿಯ ಶತಮಾನಗಳ ಕನಸೇನೋ ನನಸಾಗಿದೆ. ಈಗ ಶ್ರೀ ರಾಮ ತನ್ನ ಭವ್ಯ ಮಂದಿರದಲ್ಲಿ ಕುಳಿತು ತಮ್ಮತ್ತ ದೃಷ್ಟಿ ಬೀರುತ್ತಿದ್ದಾನೆ. ರಾಮನ ಆಶೀರ್ವಾದ, ಕೃಪಾಕಟಾಕ್ಷ ನಮ್ಮ ಮೇಲಿದೆ. ಹೀಗಾಗಿ ಈಗ ನಾವೆಲ್ಲರೂ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಕೈಜೋಡಿಸಬೇಕು. ಇನ್ನೇನಿದ್ದರೂ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ತಲುಪಲು ದೇಶದ ಪ್ರತಿಯೋರ್ವನೂ ಸಮರ್ಪಣ ಭಾವದಿಂದ ಕಾರ್ಯನಿರ್ವಹಿಸಬೇಕು. ಸ್ವಾತಂತ್ರ್ಯದ ಅಮೃತ ವರ್ಷವನ್ನು ಪೂರ್ಣಗೊಳಿಸಿರುವ ಭಾರತ ಅಗಾಧವಾದ ಯುವ ಸಮೂಹವನ್ನು ಹೊಂದಿದ್ದು, ಈ ಸಂಪತ್ತು ಸದ್ವಿನಿಯೋಗವಾದದ್ದೇ ಆದಲ್ಲಿ ಸದೃಢ, ಸ್ವಾವಲಂಬಿ ಭಾರತ ನಿರ್ಮಾಣದ ಕನಸು ಸಾಕಾರಗೊಳ್ಳುವುದರಲ್ಲಿ ಸಂದೇಹವಿಲ್ಲ ಎನ್ನುವ ಮೂಲಕ ಯುವಜನತೆಯ ಹೊಣೆಗಾರಿಕೆಯನ್ನೂ ಪ್ರಧಾನಿಯವರು ನೆನಪಿಸಿಕೊಟ್ಟರು.
ಶ್ರೀರಾಮ ಮಂದಿರ, ಭಾರತದ ಸಾಮಾಜಿಕ ಪ್ರಜ್ಞೆಯ ಪರಿಶುದ್ಧತೆಯಾಗಿದೆ. ಪ್ರತಿಯೊಬ್ಬ ನಾಗರಿಕನ ಪ್ರಜ್ಞೆಯು ದೇವರಿಂದ ದೇಶ; ರಾಮನಿಂದ ರಾಷ್ಟ್ರದವರೆಗೆ ವಿಸ್ತರಿಸಬೇಕು ಎಂಬ ಪ್ರಧಾನಿ ಮೋದಿ ಅವರ ನುಡಿಗಳಂತೂ ದೇಶದ ಅಭಿವೃದ್ಧಿಯಲ್ಲಿ ಪ್ರತಿಯೋರ್ವ ನಾಗರಿಕನ ಕೊಡುಗೆಯೂ ಅತ್ಯಂತ ಮಹತ್ವದ್ದು ಎಂಬುದನ್ನು ಎತ್ತಿ ತೋರಿಸಿದವು.