ಹೊಸದಿಲ್ಲಿ: 18 ನೇ ಲೋಕಸಭೆ ಅಧಿವೇಶನದ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಪರಿಸ್ಥಿತಿಯ ವಿಚಾರ ಪ್ರಸ್ತಾವಿಸಿದ ಕುರಿತು ಕಾಂಗ್ರೆಸ್ ಸೇರಿ ವಿಪಕ್ಷಗಳು ತೀವ್ರ ಆಕ್ರೋಶ ಹೊರ ಹಾಕಿವೆ. ಮೋದಿ ಅವರ ಸರಕಾರದ ಕಾರ್ಯವೈಖರಿಯನ್ನು ಪ್ರಶ್ನಿಸಿ ಪ್ರಸ್ತುತ ಸಮಸ್ಯೆಗಳತ್ತ ಗಮನ ಹರಿಸಬೇಕಾಗಿದೆ ಎಂದು ಕಾಂಗ್ರೆಸ್ ಸೇರಿ ವಿಪಕ್ಷಗಳ ಪ್ರಮುಖರು ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಹೇಳಿದ್ದೇನು?
ಅಧಿವೇಶನ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ ” ತುರ್ತು ಪರಿಸ್ಥಿತಿಯ ವಾರ್ಷಿಕೋತ್ಸವವು ಜೂನ್ 25 ರಂದು ಬರುತ್ತದೆ. ಸಂವಿಧಾನವನ್ನು ತಿರಸ್ಕರಿಸಿದಾಗ ಮತ್ತು ದೇಶವನ್ನು ಜೈಲಿನಂತೆ ಪರಿವರ್ತಿಸಿದಾಗ ಅದು ಭಾರತದ ಸಂಸದೀಯ ಇತಿಹಾಸದಲ್ಲಿ ಕಪ್ಪು ಚುಕ್ಕೆ” ಎಂದು ಹೇಳಿದ್ದರು.
ಸಂವಿಧಾನಕ್ಕೆ ವಿರುದ್ಧ
ಟಿಎಂಸಿಯ ಮಹುವಾ ಮೊಯಿತ್ರಾ ಪ್ರತಿಕ್ರಿಯಿಸಿ ‘ಈ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆ ಉಂಟಾಗಿದೆ ಏಕೆಂದರೆ ಅದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ದೇಶದ ಜನರು ಅರಿತುಕೊಂಡಿದ್ದಾರೆ.303 ರಿಂದ ಬಿಜೆಪಿ 240ಕ್ಕೆ ಇಳಿದಿದೆ. ಒಂದೇ ಒಂದು ಕಾರಣವೆಂದರೆ, ಒಂದು ಕಡೆ ಬಿಜೆಪಿ ಮತ್ತು ಇನ್ನೊಂದು ಕಡೆ ಸಂವಿಧಾನವಿದೆ ಎಂಬುದನ್ನು ದೇಶದ ಜನರು ಅರ್ಥಮಾಡಿಕೊಂಡಿದ್ದಾರೆ. ಜನರು ಸಂವಿಧಾನವನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿ ಕಳೆದ 10 ವರ್ಷಗಳಿಂದ ಅಘೋಷಿತ ತುರ್ತು ಪರಿಸ್ಥಿತಿಯನ್ನು ನಡೆಸುತ್ತಿದೆ ಮತ್ತು ದೇಶದ ಜನರು ಅದನ್ನು ಒಪ್ಪುವುದಿಲ್ಲ’ ಎಂದರು.
ಶಿವಸೇನಾ (ಯುಬಿಟಿ) ನಾಯಕ ಅನಿಲ್ ದೇಸಾಯಿ ಮಾತನಾಡಿ, ”ತುರ್ತು ಪರಿಸ್ಥಿತಿ ಬಂದು ಬಹಳ ಕಾಲವಾಗಿದೆ ಮತ್ತು ಸರ್ಕಾರವು ವರ್ತಮಾನದತ್ತ ಗಮನಹರಿಸಬೇಕು.ತುರ್ತು ಪರಿಸ್ಥಿತಿ ಕಳೆದಿದೆ, ಆದರೆ ಇಂದಿನ ಪರಿಸ್ಥಿತಿ ಏನು? ಯಾರೂ ತುರ್ತು ಪರಿಸ್ಥಿತಿಯನ್ನು ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಕರಾಳ ದಿನಗಳು ಹಿಂತಿರುಗುವುದಿಲ್ಲ ಎಂದು ನಾನು ಭಾವಿಸುತ್ತೇನೆ, ”ಎಂದಿದ್ದಾರೆ.
ಆರ್‌ಎಸ್‌ಪಿ ನಾಯಕ ಎನ್‌ಕೆ ಪ್ರೇಮಚಂದ್ರನ್, ಆಜಾದ್ ಸಮಾಜ ಪಾರ್ಟಿ (ಕಾನ್ಶಿ ರಾಮ್) ಸಂಸದ ಚಂದ್ರಶೇಖರ್ ಕೂಡ ಪ್ರಧಾನಿ ಹೇಳಿಕೆಯನ್ನು ಖಂಡಿಸಿದ್ದಾರೆ.