ಗುರುಮಠಕಲ್: ಪ್ರತಿ ವರ್ಷ ಎರಡು ಕೋಟಿ ಯುವಕರಿಗೆ ಉದ್ಯೋಗ ಒದಗಿಸಲಾಗುತ್ತದೆ. ಅಲ್ಲದೆ ಪ್ರತಿ ಕುಟುಂಬದ ಖಾತೆಗೆ 15 ಲಕ್ಷ ರೂ ಜಮಾ ಮಾಡಲಾಗುವುದು ಎಂದು ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಯಾವುದನ್ನೂ ಅನುಷ್ಠಾನ ಮಾಡಿಲ್ಲ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.
ಪಟ್ಟಣದ ಎಪಿಎಂಸಿ ಮೈದಾನದಲ್ಲಿ ನಡೆದ ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಏನೂ ಮಾಡಿಲ್ಲ ಎಂದು ಆರೋಪಿಸುವ ಮೊದಲು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಮಾಡದಿದ್ದಲ್ಲಿ ದೇಶದಲ್ಲಿ ನೀರಾವರಿ ಕ್ರಾಂತಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ್ದು ಯಾರು ಎಂದು ಪ್ರಶ್ನಿಸಿದರು.
ನಾನು ಮೋದಿ ಮತ್ತು ಇನ್ನಾರನ್ನು ತೆಗಳಿ ಅಧಿಕಾರಕ್ಕೆ ಬರುವ ಉದ್ದೇಶ ನನ್ನದಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ಮತ್ತು ಪ್ರೀತಿಯಿದ ಅಧಿಕಾರಕ್ಕೆ ಬರಲು ಮನಸ್ಸು ಮಾಡುತ್ತೇನೆ. ಕಳೆದ 48 ವರ್ಷಗಳಿಂದ ನನ್ನ ಮೇಲೆ ತಾವು ಇಟ್ಟ ವಿಶ್ವಾಸದಿಂದ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ. ಎಲ್ಲಿಯವರಿಗೆ ನಿಮ್ಮ ಆಶೀರ್ವಾದ ಇರುತ್ತದೆಯೋ ಅಲ್ಲಿಯವರಿಗೆ ತಮ್ಮ ನಿರೀಕ್ಷೆ ಹುಸಿ ಮಾಡದಂತೆ ಅಧಿಕಾರ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ನಾನು ಈ ಮುಂಚೆಯೇ ಗುರುಮಠಕಲ್ ಮತ್ತು ಸೇಡಂ ಕ್ಷೇತ್ರಕ್ಕೆ ಭೇಟಿ ನೀಡಬೇಕಿತ್ತು. ಆದರೆ ಪ್ರಧಾನಿ ನೇತೃತ್ವದಲ್ಲಿ ಪ್ರಮುಖ ಸಭೆಗಳು ಇರುವುದರಿಂದ ಬರಲಾಗಿಲ್ಲ. ನಿಮಗೆ ತೊಂದರೆ ಕೊಡುವ ಉದ್ದೇಶ ನನಗಿಲ್ಲ. ನಾನು ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಆ ಪಕ್ಷಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಭದ್ರಗೊಳಿಸಲು ಕೇಂದ್ರ ಬಿಜೆಪಿ ನಾಯಕರು ಕುಮ್ಮಕ್ಕು ಕೊಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಆಪರೇಷನ್ ಕಮಲ ನಡೆಯುವುದಿಲ್ಲ. ಸಮ್ಮಿಶ್ರ ಸರಕಾರ ಪೂರ್ಣ ಅವಧಿಯವರಿಗೆ ಅಧಿಕಾರ ನಡೆಸಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರೆಡ್ಡಿ ತುನ್ನೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ ಹತ್ತಿಕುಣಿ, ಜಿಪಂ ಮಾಜಿ ಅಧ್ಯಕ್ಷ ಬಸರೆಡ್ಡಿ ಮಾಲಿಪಾಟೀಲ ಅನಪುರ, ಸವಿತ ಸಜ್ಜನ, ಮಹಾಂತಪ್ಪ, ಮರಿಗೌಡ, ವಿಶ್ವನಾಥ ನೀಲಹಳ್ಳಿ, ಶರಣಿಕುಮಾರ, ಮಲ್ಲಣ್ಣಗೌಡ, ಚಿದನಂದಪ್ಪ, ಬಸಣ್ಣ ದೇವರಹಳ್ಳಿ, ಬಸಪ್ಪ ಬದ್ದೆಪಲ್ಲಿ, ತಿಪ್ಪಣ್ಣ ಗುಟ್ಟಲ, ರವೀಂದರರೆಡ್ಡಿ ಶೇರಿ, ಅನಂತಪ್ಪ ಯದ್ಲಾಪು ಭಾಗವಹಿಸಿದ್ದರು.