ನವದೆಹಲಿ: ಆ. 30 ರಂದು ಭ್ರಾತೃತ್ವದ ಸಂಕೇತದ ರಕ್ಷಾಬಂಧನ. ರಕ್ಷಾಬಂಧನದ ದಿನದಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟುವುದಕ್ಕಾಗಿ ಅವರ ʻಪಾಕಿಸ್ತಾನಿ ತಂಗಿʼ ಎಂದೇ ಕರೆಸಿಕೊಳ್ಳುತ್ತಿರುವ ಕ್ವಾಮರ್ ಮೋಸಿನ್ ಶೇಖ್ ಅವರು ಈ ಬಾರಿ ದೆಹಲಿಗೆ ತೆರಳಲಿದ್ದಾರೆ. ತಮ್ಮ ವಿವಾಹದ ಬಳಿಕ ಅಹಮದಾಬಾದ್‌ನಲ್ಲಿ ನೆಲೆಯಾಗಿರುವ ಪಾಕಿಸ್ತಾನಿ ಮೂಲದ ಮೋಸಿನ್ ಶೇಖ್ ಕಳೆದ 30 ವರ್ಷಗಳಿಂದ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟುತ್ತಿದ್ದಾರಂತೆ.
ಕೋವಿಡ್ ಸಮಯದಲ್ಲಿ ಅವರಿಗೆ ಮೋದಿಯವರನ್ನು ಸಾಧ್ಯವಾಗಿರಲಿಲ್ಲ. ಆದರೂ ಅವರು ತಾವೇ ತಯಾರಿಸಿದ ರಾಖಿಯನ್ನು ಪೋಸ್ಟ್ ಮುಖಾಂತರ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದರು. ಕಳೆದ ವರ್ಷವೂ ಪೋಸ್ಟ್ ಮೂಲಕ ಅವರು ಪ್ರಧಾನಿ ಅವರಿಗೆ ರಾಖಿ ಕಳುಹಿಸಿ 2024ರ ಚುನಾವಣೆಗೆ ಶುಭಹಾರೈಸಿದ್ದರು. ಈ ಬಾರಿ ಮುಖತಃ ಮೋದಿ ಅವರನ್ನು ಭೇಟಿಯಾಗಿ ರಾಖಿ ಕಟ್ಟಲಿದ್ದಾರೆ.
ರಾಖಿ ಕಟ್ಟುವುದರ ಜೊತೆಗೆ ಮೋದಿಯವರಿಗೆ ಉಡುಗೊರೆಯನ್ನು ನೀಡುವ ಅವರು ಈ ಬಾರಿ ಕೃಷಿಯ ಬಗೆಗಿನ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಲಿದ್ಧಾರಂತೆ. ಮೋದಿಯವರು ಇಂತಹ ಪುಸ್ತಕಗಳನ್ನು ಓದಲು ಇಷ್ಟಪಡುತ್ತಾರೆ ಎಂದು ಅವರು ಹೇಳಿದ್ದಾರೆ.
ʻಮೋದಿಯವರಿಗೆ ಈ ಬಾರಿ ನಾನೇ ರಾಖಿಯನ್ನು ತಯಾರಿಸಿದ್ದೇನೆ. ಜೊತೆಗೆ ಕೃಷಿಯ ಬಗೆಗಿನ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಲಿದ್ದೇನೆ. ಕಳೆದ 3 ವರ್ಷಗಳಿಂದ ಭೇಟಿಯಾಗಿರಲಿಲ್ಲ. ಹಾಗಾಗಿ ಈ ಬಾರಿಯ ಭೇಟಿ ವಿಶೇಷವೆನಿಸುತ್ತಿದೆʼ ಎಂದು ಕ್ವಾಮರ್ ಮೋಸಿನ್ ಶೇಖ್ ಹೇಳಿಕೊಂಡಿದ್ಧಾರೆ.
ʻನಾನು ಅವರು ಗುಜರಾತ್‌ನ ಮುಖ್ಯಮಂತ್ರಿ ಆಗಬೇಕು ಎಂದು ಹಾರೈಸಿದ್ದೆ. ಅದು ಸತ್ಯವಾಗಿದೆ. ಈಗ ಪ್ರಧಾನಿಯಾಗಿ ದೇಶದ ಸೇವೆ ಮಾಡುತ್ತಿದ್ದಾರೆ. ಅವರಿಗೆ ಉತ್ತಮ ಆರೋಗ್ಯ ಮತ್ತು ಧೀರ್ಘ ಆಯಸ್ಸು ಸಿಗಲಿ ಎಂದು ಪ್ರಾರ್ಥಿಸುತ್ತೇನೆʼ ಎಂದು ಹೇಳಿದ್ಧಾರೆ.