Advertisement

Narendra Modi: ಪ್ರಧಾನಿ ಮೋದಿ ಆತ್ಮವಿಶ್ವಾಸಕ್ಕೆ ಈ ಅಂಶಗಳೇ ಕಾರಣ! 

08:35 PM Aug 16, 2023 | Team Udayavani |

ನವದೆಹಲಿ: “ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಆ.15ರಂದು ಮತ್ತೆ ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರ ಧ್ವಜಾರೋಹಣ ಮಾಡುವೆ’ ಎಂದು ಪ್ರಧಾನಿ ಮಂಗಳವಾರ ಹೇಳಿದ್ದರು. ಆ ಮಾತಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರತಿಪಕ್ಷಗಳ ಎಲ್ಲರೂ ಪ್ರಬಲ ಆಕ್ಷೇಪಣೆಯನ್ನೂ ಮಾಡಿದ್ದರು.

Advertisement

ಲೋಕಸಭೆಯ ಚುನಾವಣೆಗೆ ಇನ್ನೂ ಸರಿ ಸುಮಾರು ಹತ್ತು ತಿಂಗಳು ಇದೆ. ಹೀಗಿದ್ದರೂ, ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಉಳಿಸಿಕೊಳ್ಳಲಿದೆ ಎಂಬ ಆತ್ಮವಿಶ್ವಾಸದ ಮಾತುಗಳನ್ನು ಅವರು ಹೇಗೆ ಆಡಿದ್ದಾರೆ ಎಂಬುದು ಈಗ ನವದೆಹಲಿಯ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹಾಲಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳನ್ನು ಒಂಬತ್ತು ವರ್ಷಗಳ ಅವಧಿಯಲ್ಲಿ ಜಾರಿ ಮಾಡಿದ್ದು ಪ್ರಧಾನ ಅಂಶ. ಅದಕ್ಕಾಗಿ ದೇಶದ ಮತದಾರರು ಮೂರನೇ ಅವಧಿಗೆ ಮತ್ತೆ ಎನ್‌ಡಿಎಗೆ ಅವಕಾಶ ನೀಡಲಿದ್ದಾರೆ. “ಲಂಚ ಪಡೆಯುವುದಿಲ್ಲ; ಪಡೆಯುವುದಕ್ಕೂ ಅವಕಾಶ ನೀಡುವುದಿಲ್ಲ’ (ನ ಖಾವೂಂಗಾ; ನ ಖಾನೇ ದೂಂಗಾ) ಎಂಬ ಹೇಳಿಕೆಯಂತೆ ನಡೆದುಕೊಂಡಿದ್ದರಿಂದ ಮತ್ತೆ ಆಯ್ಕೆಯಾಗಬಹುದು ಎನ್ನುವುದು ಮೊದಲ ಕಾರಣ.

ಹಾಲಿ ಸರ್ಕಾರ 2014ರಲ್ಲಿ ಪದಗ್ರಹಣ ಮಾಡಿದ ಬಳಿಕ ಕೈಗೊಂಡ ನಿರ್ಧಾರಗಳೆಲ್ಲವೂ ರಾಷ್ಟ್ರೀಯ ಹಿತಾಸಕ್ತಿಯಿಂದ ಕೈಗೊಳ್ಳಲಾಗಿದೆ. ಇದರಿಂದಾಗಿ ದೇಶದ ವರ್ಚಸ್ಸು ಮತ್ತು ಬಲವೃದ್ಧಿಯಾಗಿದೆ. ಆ ಹಿನ್ನೆಲೆಯಲ್ಲಿ ಜನರು ಮತ್ತೆ ಒಲವು ತೋರಲಿದ್ದಾರೆ ಎನ್ನುವುದು 2ನೇ ಪ್ರಧಾನ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಸುಭದ್ರ ಸರ್ಕಾರಕ್ಕೆ ಮಣೆ: 2014ರಿಂದ ಈಚೆಗೆ ದೇಶದಲ್ಲಿ ಸುಭದ್ರ ಸರ್ಕಾರ ಇದೆ ಮತ್ತು ಘೋಷಣೆ ಮಾಡಿರುವ ಒಂದಷ್ಟು ನಿರ್ಧಾರಗಳ ಪೈಕಿ ಕೆಲವು ಜಾರಿಯಾಗಿವೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಒಕ್ಕೂಟ ಐ.ಎನ್‌.ಡಿ.ಐ.ಎ. ನೀಡಲಿರುವ ಸರ್ಕಾರ ಸುಭದ್ರವಾಗಿರಲು ಸಾಧ್ಯವಿಲ್ಲ. ಅದೊಂದು ಖೀಚಡಿ ಸರ್ಕಾರವಾಗಿದ್ದು, ದೃಢ ನಿಲುವುಗಳು ಸಾಧ್ಯವಾಗಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

“ನ್ಯೂಸ್‌18 ಆಂಗ್ಲ ಸುದ್ದಿವಾಹಿನಿ ಕೇಂದ್ರದ ಹಿರಿಯ ಸಚಿವರೊಬ್ಬರನ್ನು ಉಲ್ಲೇಖೀಸಿ ವರದಿ ಮಾಡಿರುವ ಪ್ರಕಾರ “ಅಸ್ಥಿರ ಸರ್ಕಾರಗಳನ್ನು ಮತ್ತೆ ಆಯ್ಕೆ ಮಾಡುವ ಸ್ಥಿತಿಯನ್ನು ದೇಶದ ಜನರು ಈಗ ದಾಟಿದ್ದಾರೆ. ಕೌಟುಂಬಿಕ ರಾಜಕೀಯ ವ್ಯವಸ್ಥೆ ಹೊಂದಿರುವ ವ್ಯವಸ್ಥೆಗಳನ್ನು ಧಿಕ್ಕರಿಸಿ ಮತ್ತೂಮ್ಮೆ ಭದ್ರ ಸರ್ಕಾರಕ್ಕೇ ಮನ್ನಣೆ ನೀಡಲಿದ್ದಾರೆ. 2004ರಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಯುಪಿಎ ಜಯ ಸಾಧಿಸಿದಂತೆ ಈಗ ರಾಹುಲ್‌ ನೇತೃತ್ವದಲ್ಲಿ ಅಂಥ ಜಯ ಮರುಕಳಿಸಲು ಸಾಧ್ಯವಿಲ್ಲ ಎಂಬ ನಂಬಿಕೆಯನ್ನು ಪ್ರಧಾನಿ ಹೊಂದಿದ್ದಾರೆ.

ಇನ್ನು ಉತ್ತರಪ್ರದೇಶದಲ್ಲಿ 2019ರ ರೀತಿಯೇ, ಎಸ್‌ಪಿ ಮತ್ತು ಬಿಎಸ್‌ಪಿ ನಡುವೆ ಮೈತ್ರಿ ಸಾಧ್ಯತೆ ಕಾಣುತ್ತಿಲ್ಲ. ಜ್ಞಾನವಾಪಿ ವಿಚಾರ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. ಯೋಗಿ ಆದಿತ್ಯನಾಥ್‌ ನೇತೃತ್ವದ ಆಡಳಿತವು ಬಿಜೆಪಿಗೆ ಉತ್ತರಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳನ್ನು ನೀಡಲಿದೆ ಎಂಬುದೊಂದು ವಿಶ್ವಾಸ. ಬಿಹಾರದಲ್ಲಿ ಜೆಡಿಯು ನಾಯಕ ನಿತೀಶ್‌ ಅವರ ವರ್ಚಸ್ಸು ಕಳೆಗುಂದಿದೆ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ- ಶಿವಸೇನೆ ಉದ್ಧವ್‌ ಠಾಕ್ರೆ ಬಣದ ಮೈತ್ರಿ ಬಿಜೆಪಿಗೆ ಧನಾತ್ಮಕ ಫ‌ಲಿತಾಂಶ ತಂದುಕೊಡಲಿದೆ ಎಂಬ ವಿಶ್ವಾಸ ಪ್ರಧಾನಿ ಮೋದಿಯವರದ್ದಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next