Advertisement

“ಸಿಟಿಗ್ಯಾಸ್‌’ಗೆ ಪ್ರಧಾನಿ ಮೋದಿಯಿಂದ ಶಿಲಾನ್ಯಾಸ

06:00 AM Nov 23, 2018 | |

ನವದೆಹಲಿ/ಬೆಂಗಳೂರು: ಕರ್ನಾಟಕದ ಎಂಟು ಜಿಲ್ಲೆಗಳು ಸೇರಿದಂತೆ ದೇಶದ 129 ಜಿಲ್ಲೆಗಳಲ್ಲಿ ಮನೆಗಳಿಗೆ ಅಡುಗೆ ಅನಿಲ ಪೂರೈಸುವ ಸಿಟಿ ಗ್ಯಾಸ್‌ ಯೋಜನೆ (ಸಿಜಿಡಿ)ಗೆ ಪ್ರಧಾನಿ ನರೇಂದ್ರ ಮೋದಿಯವರು ನವದೆಹಲಿಯಲ್ಲಿ ಗುರುವಾರ ಶಿಲಾನ್ಯಾಸ ನೆರವೇರಿಸಿದರು. ದಿಲ್ಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌, ಡಾ| ಹರ್ಷವರ್ಧನ್‌ರ ಉಪಸ್ಥಿತಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.

Advertisement

ಈ ವೇಳೆ ಮಾತನಾಡಿದ ಮೋದಿ, ಯೋಜನೆಯಡಿ 2 ಕೋಟಿ ಮನೆಗಳಿಗೆ ನೈಸರ್ಗಿಕ ಅನಿಲ ಸಂಪರ್ಕ ಒದಗಿಸುವುದು ಹಾಗೂ 10 ಸಾವಿರ ಸಿಎನ್‌ಜಿ ಪಂಪ್‌ಗ್ಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ದೇಶವನ್ನು ನೈಸರ್ಗಿಕ ಅನಿಲ ಆರ್ಥಿಕತೆಯನ್ನಾಗಿ ರೂಪಿಸುವ ಉದ್ದೇಶ ನಮ್ಮದು. ಅಷ್ಟೇ ಅಲ್ಲ, 400 ಜಿಲ್ಲೆಗಳಿಗೆ ನಗರ ನೈಸರ್ಗಿಕ ಅನಿಲ ನೆಟ್‌ವರ್ಕ್‌ಗಳನ್ನು ವಿಸ್ತರಿಸಲಾಗುತ್ತದೆ ಎಂದರು.

ರಾಜ್ಯದ 8 ಜಿಲ್ಲೆಗಳಲ್ಲಿ ಜಾರಿ: ಯೋಜನೆಯಡಿ ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ಗದಗ, ಬೀದರ್‌, ಚಿತ್ರದುರ್ಗ, ದಾವಣಗೆರೆ ಹಾಗೂ ರಾಮನಗರದ ಆಯ್ದ ತಾಲೂಕುಗಳಿಗೆ ಅಡುಗೆ ಅನಿಲವನ್ನು ಪೈಪ್‌ ಮೂಲಕ ಪೂರೈಸಲಾಗುತ್ತದೆ.

ದಕ್ಷಿಣ ಕನ್ನಡದಲ್ಲಿ ಗೇಲ್‌ ಗ್ಯಾಸ್‌ ಲಿಮಿಟೆಡ್‌, ಉಡುಪಿಯಲ್ಲಿ ಅದಾನಿ ಗ್ಯಾಸ್‌ ಲಿಮಿಟೆಡ್‌, ಬಳ್ಳಾರಿ, ಗದಗ ಮತ್ತು ಬೀದರ್‌ನಲ್ಲಿ ಭಾರತ್‌ ಗ್ಯಾಸ್‌ ರಿಸೋರ್ಸಸ್‌ ಲಿಮಿಟೆಡ್‌, ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಯುನಿಸನ್‌ ಎನ್ವಿರೋ ಪ್ರೈ.ಲಿ ಹಾಗೂ ರಾಮನಗರ ಜಿಲ್ಲೆಯಲ್ಲಿ ಮಹಾರಾಷ್ಟ್ರ ನ್ಯಾಚುರಲ್‌ ಗ್ಯಾಸ್‌ ಲಿಮಿಟೆಡ್‌ಗಳು ನೈಸರ್ಗಿಕ ಅನಿಲ ವಿತರಣೆ ಮಾಡಲು ಗುತ್ತಿಗೆ ಪಡೆದುಕೊಂಡಿದೆ. ಕೆಲವೇ ತಿಂಗಳುಗಳ ಹಿಂದೆ ಈ ಕಂಪನಿಗಳು ಅಡುಗೆ ಅನಿಲ ಹಾಗೂ ನೈಸರ್ಗಿಕ ಅನಿಲವನ್ನು ಪೈಪ್‌ ಮೂಲಕ ಒದಗಿಸಲು ಗುತ್ತಿಗೆ ಪಡೆದುಕೊಂಡಿದ್ದವು.

ಯೋಜನೆಯಡಿ ನಗರದಲ್ಲಿ ಮನೆಗಳು ಹಾಗೂ ಉದ್ಯಮಗಳಿಗೆ ನೈಸರ್ಗಿಕ ಅನಿಲವನ್ನು ಪೈಪ್‌ಲೈನ್‌ ಮೂಲಕ ಒದಗಿಸಲಾಗುವುದು. ಅಲ್ಲದೆ ವಾಹನಗಳಿಗೆ ಸಿಎನ್‌ಜಿ ಒದಗಿಸಲು ನಿಗದಿತ ಪ್ರದೇಶಗಳಲ್ಲಿ ಸ್ಟೇಷನ್‌ಗಳನ್ನೂ ಈ ಕಂಪನಿಗಳು ತೆರೆಯಲಿವೆ. ದಕ್ಷಿಣ ಕನ್ನಡದಲ್ಲಿ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಪುತ್ತೂರು ಮತ್ತು ಸುಳ್ಯದಲ್ಲಿ ಮನೆಗಳಿಗೆ ಅಡುಗೆ ಅನಿಲವನ್ನು ಪೈಪ್‌ ಮೂಲಕ ಒದಗಿಸಲಾಗುತ್ತದೆ. ಒಟ್ಟು 4861 ಚದರ ಕಿ.ಮೀ ಯೋಜನೆ ಇದಾಗಿದೆ. ಮುಂದಿನ ಹಂತದಲ್ಲಿ ಮೈಸೂರು ಹಾಗೂ ಕಲಬುರಗಿಗಳಲ್ಲಿಯೂ ನಗರ ನೈಸರ್ಗಿಕ ಅನಿಲ ವಿತರಣೆ ನೆಟ್‌ವರ್ಕ್‌ ಸ್ಥಾಪಿಸಲಾಗುತ್ತದೆ.

Advertisement

18 ರಾಜ್ಯಗಳ 129 ಜಿಲ್ಲೆಗಳಲ್ಲಿ ನೆಟ್‌ವರ್ಕ್‌ ಸ್ಥಾಪನೆಗೆ ಗುತ್ತಿಗೆ ನೀಡಲಾಗಿದ್ದು, ಇದೇ ಮೊದಲ ಬಾರಿಗೆ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ಶಂಕುಸ್ಥಾಪನೆ- ಭಾಷಣದ ನೇರಪ್ರಸಾರಕ್ಕೆ ಎಲ್ಲೆಡೆ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next