Advertisement

ಇಂದು ರಾಜ್ಯದ 3 ಕಡೆಗಳಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮ

06:00 AM Oct 29, 2017 | Team Udayavani |

ಬೆಳ್ತಂಗಡಿ/ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಭಾನುವಾರ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು  ಒಂದೇ ದಿನ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Advertisement

ಧರ್ಮಸ್ಥಳ, ಬೆಂಗಳೂರು ಹಾಗೂ ಬೀದರ್‌ನಲ್ಲಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ನರೇಂದ್ರಮೋದಿ ರ್ಯಾಲಿ ಹಾಗೂ ಸಾರ್ವಜನಿಕ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಧರ್ಮಸ್ಥಳ ಮಂಜುನಾಥೇಶ್ವರ ದರ್ಶನ ಪಡೆಯಲಿರುವ ಮೋದಿ ನಂತರ ಉಜಿರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೌಂದರ್ಯಲಹರಿ ಪಾರಾಯಣ ಮಹಾಸಮರ್ಪಣೆ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ತದನಂತರ ಸಂಜೆ 6 ಗಂಟೆಗೆ ಬೀದರ್‌ ರೈಲು ನಿಲ್ದಾಣದಲ್ಲಿ  ಬೀದರ್‌-ಕಲಬುರಗಿ ಹೊಸ ರೈಲ್ವೆ ಮಾರ್ಗಕ್ಕೆ  ಹಸಿರು ನಿಶಾನೆ ತೋರಲಿದ್ದಾರೆ. ಸಂಜೆ 7.30 ಕ್ಕೆ ಬೀದರ್‌ನ ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.

ದಕ್ಷಿಣ ಕನ್ನಡ ಭೇಟಿ
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಧರ್ಮಸ್ಥಳದಲ್ಲಿ ಮಂಜುನಾಥೇಶ್ವರ ದರ್ಶನದ ನಂತರ ಉಜಿರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಹೊಸದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಬೆಳಗ್ಗೆ 10.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಧರ್ಮಸ್ಥಳಕ್ಕೆ ತೆರಳುವರು. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ರಸ್ತೆ ಮೂಲಕ 11.40ಕ್ಕೆ ಉಜಿರೆಗೆ ಬಂದು ಸಮಾವೇಶದಲ್ಲಿ ಭಾಗಿಯಾಗುವರು. ಮಧ್ಯಾಹ್ನ 12.50ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು 1.10ಕ್ಕೆ ಬೆಂಗಳೂರಿಗೆ ತೆರಳಲಿದ್ದಾರೆ.

Advertisement

ಈ ಮೊದಲು ಮೋದಿ 2016ರಲ್ಲಿ ಜಿಲ್ಲೆಗೆ ಆಗಮಿಸಿದ್ದರು. ಕೇರಳದ ಕೊಚ್ಚಿಗೆ ತೆರಳುವ ಹಾದಿಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಕಾರ್ಯಕರ್ತರನ್ನು ಭೇಟಿಯಾಗಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮುಂದುವರಿಸಿದ್ದರು. ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಮೋದಿ 3 ಬಾರಿ ಜಿಲ್ಲೆಗೆ ಚುನಾವಣೆ ಸಂದರ್ಭ ಭೇಟಿ ನೀಡಿದ್ದರು. 2008ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭ ಪುತ್ತೂರಿಗೆ ಆಗಮಿಸಿ ಬಳಿಕ ಕಾರ್ಕಳಕ್ಕೆ, 2013ರ ವಿಧಾನಸಭಾ ಚುನಾವಣೆ ವೇಳೆ, 2014ರ ಲೋಕಸಭಾ ಚುನಾವಣೆ ವೇಳೆ ಮಂಗಳೂರಿನ ನೆಹರೂ ಮೈದಾನದಲ್ಲಿ ಭಾಷಣವನ್ನೂ ಮಾಡಿದ್ದರು.

ಬೆಂಗಳೂರು ಕಾರ್ಯಕ್ರಮ
ಮಧ್ಯಾಹ್ನ 2 ಗಂಟೆಗೆ ಎಚ್‌ಎಎಲ್‌ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ಬರಲಿರುವ ಮೋದಿಯವರ ಸ್ವಾಗತಕ್ಕಾಗಿ ನಗರ ಬಿಜೆಪಿ ವತಿಯಿಂದ ಎಚ್‌ಎಎಲ್‌ ವಿಮಾನ ನಿಲ್ದಾಣದ ಸಮೀಪದಲ್ಲಿ ಸಾರ್ವಜನಿಕ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸ್ವಾಗತ ಕಾರ್ಯಕ್ರಮದ ನಂತರ ಪ್ರಧಾನಿ ಮೋದಿಯವರು ನೇರವಾಗಿ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸೌಂದರ್ಯ ಲಹರಿ ಪರಾಯಣಯಣೋತ್ಸವ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸುಮಾರು 45 ನಿಮಿಷ ಅಲ್ಲಿಯೇ ಕಳೆಯಲಿದ್ದಾರೆ. ಸಾರ್ವಜನಿಕ ಸಮಾರಂಭವನ್ನು ಆಯೋಜಿಸಲಾಗಿದೆ.

ಬೀದರ್‌ ಕಾರ್ಯಕ್ರಮ
ಹೈ.ಕ. ಭಾಗದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಬೀದರ-ಕಲಬುರಗಿ ರೈಲು ಮಾರ್ಗ  ನರೇಂದ್ರಮೋದಿಯವರು ಲೋಕಾರ್ಪಣೆ ಮಾಡುತ್ತಿದ್ದು,ಬೀದರ- ಕಲಬುರಗಿ ರೈಲು ಮಾರ್ಗ ಉತ್ತರ ಮತ್ತು ದಕ್ಷಿಣ ಭಾರತವನ್ನು ಬೆಸೆಯಲಿರುವ ಹಿನ್ನೆಯಲ್ಲಿ ಹೆಚ್ಚು ಮಹತ್ವ ಪಡೆದಿದೆ. ಈ ರೈಲು ಮಾರ್ಗದಿಂದ ದಕ್ಷಿಣ ಮತ್ತು ಉತ್ತರ ಭಾರತದ ನಡುವಿನ 350ಕ್ಕೂ ಹೆಚ್ಚು ಕಿ.ಮೀ. ಅಂತರ (4 ಗಂಟೆ ಸಮಯ ಕಡಿಮೆ) ತಗ್ಗಬಹುದೆಂದು ಅಂದಾಜಿಸಲಾಗಿದೆ. ದಕ್ಷಿಣ ಭಾರತದ ರಾಜ್ಯಗಳ ರಾಜಧಾನಿಗಳಾದ ಬೆಂಗಳೂರು, ಚೆನ್ನೈ ಮತ್ತು ರಾಷ್ಟ್ರದ ರಾಜಧಾನಿ ನವದೆಹಲಿಯ ನಡುವಿನ ಅಂತರವನ್ನು ಕಡಿಮೆ ಮಾಡಿದಂತಾಗಿದೆ.

ಅಷ್ಟೇ ಅಲ್ಲ ಈ ಹೊಸ ಮಾರ್ಗದಿಂದ ಬೀದರನಿಂದ ಮಹಾರಾಷ್ಟ್ರದ ಮುಂಬೈಗೆ ಸಹ 115 ಕಿ.ಮೀ. ನಷ್ಟು ಪ್ರಯಾಣ ಹಾಗೂ ಬೀದರ-ಬೆಂಗಳೂರು ಪ್ರಯಾಣ ಸಹ 52 ಕಿ.ಮೀ. ತಗ್ಗುವ ಮೂಲಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಅವ ಧಿಯಲ್ಲಿ ಶಿಲಾನ್ಯಾಸಗೊಂಡಿದ್ದ ಈ ರೈಲು ಮಾರ್ಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸುಮಾರು 1,542 ಕೋಟಿ ರೂ.ಗಳ ಯೋಜನಾ ವೆಚ್ಚದಲ್ಲಿ ಪೂರ್ಣಗೊಂಡಿದೆ. 110 ಕಿ.ಮೀ. ಅಂತರವುಳ್ಳ ಈ ಮಾರ್ಗದ ಮಧ್ಯದ ಮರಗುತ್ತಿ ಬಳಿ 1.67 ಕಿ.ಮೀ. ಉದ್ದದ ಸುರಂಗ (ಟನಲ್‌) ನಿರ್ಮಿಸಲಾಗಿದ್ದು, ರಾಜ್ಯದ ಅತಿ ದೊಡ್ಡ ಸುರಂಗ ಎನ್ನಲಾಗಿರುವ ಇದಕ್ಕೆ 70 ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರಧಾನಿಯವರು ಬೀದರ್‌ನ ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಭದ್ರತೆಗಾಗಿ ಗಡಿ ಜಿಲ್ಲೆಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

ಬೀದರ್‌ ಕಾರ್ಯಕ್ರಮಕ್ಕೆ ಸಿಎಂ ಗೈರು
ಬೀದರ್‌-ಕಲಬುರಗಿ ಹೊಸ ರೈಲ್ವೆ ಮಾರ್ಗಕ್ಕೆ ಹಸಿರು ನಿಶಾನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗಿಯಾಗುತ್ತಿಲ್ಲ.

ತಮಗೆ ತಡವಾಗಿ ಆಮಂತ್ರಣ ತಲುಪಿದೆ. ಪೂರ್ವನಿಯೋಜಿತ ಕಾರ್ಯಕ್ರಮ ಇರುವುದರಿಂದ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ.ಸರ್ಕಾರದ ಪರವಾಗಿ ಕೈಗಾರಿಕೆ ಸಚಿವ ಆರ್‌.ವಿ.ದೇಶಪಾಂಡೆಯವರು ಭಾಗಿಯಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ರೈಲ್ವೆ ಯೋಜನೆಗಳ ವೆಚ್ಚದಲ್ಲಿ ರಾಜ್ಯ ಸರ್ಕಾರದ ಅರ್ಧ ಭರಿಸುತ್ತದೆ. ಜತೆಗೆ ಜಾಗ ಸಹ ಉಚಿತವಾಗಿ ನೀಡುತ್ತದೆ. ಹೀಗಿರುವಾಗ ಕಾರ್ಯಕ್ರಮದ ರೂಪು-ರೇಷೆಕುರಿತು ಪೂರ್ವಬಾವಿಯಾಗಿ ಚರ್ಚೆ ಮಾಡದೇ ಕೊನೇ ಗಳಿಗೆಯಲ್ಲಿ ಆಹ್ವಾನ ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಾಗತ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ 2.35 ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಯವರನ್ನು ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next