Advertisement
ಮೋದಿ ಪ್ರಧಾನಿಯಾದ ಬಳಿಕ ನಗರಕ್ಕೆ ಭೇಟಿ ನೀಡುತ್ತಿರುವುದು ಐದನೇ ಬಾರಿ.ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುತ್ತಿರುವುದು ಮೂರನೇ ಬಾರಿ. ಕಳೆದ ಲೋಕಸಭಾ ಚುನಾವಣೆ ಸಂದರ್ಭ ಪ್ರಧಾನಿ ಅಭ್ಯರ್ಥಿಯಾಗಿ ಕೇಂದ್ರ ಮೈದಾನದಲ್ಲಿ ಅವರು ಸಾರ್ವಜನಿಕ ಭಾಷಣ ಮಾಡಿದ್ದರು.
2018ರಲ್ಲಿ ನಗರದಲ್ಲಿ ನಡೆದ ಮೋದಿ ರ‍್ಯಾಲಿ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 8 ಸ್ಥಾನಗಳ ಪೈಕಿ 7 ಸ್ಥಾನಗಳನ್ನು ಬಿಜೆಪಿ ಗೆಲ್ಲಲು ಸಹಾಯಕವಾಗಿತ್ತು. ಶನಿವಾರದ ರ್ಯಾಲಿಯು ಮತದಾರರ ಮೇಲೆ ಮೋಡಿ ಮಾಡಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.
Related Articles
Advertisement
ಬಿಜೆಪಿ ದ.ಕ. ಜಿಲ್ಲಾ ಸಮಿತಿಯು ಮೋದಿ ಮಂಗಳೂರು ಭೇಟಿ ಬಗ್ಗೆ ನಿರೀಕ್ಷೆಗಳನ್ನು ಹೊಂದಿದೆ. ಪಶ್ಚಿಮ ಘಟ್ಟ ಸಂರಕ್ಷಣೆ, ಕೋಸ್ಟ್‌ಗಾರ್ಡ್ ಅಕಾಡಮಿ ಸ್ಥಾಪನೆ, ಮಂಗಳೂರಿನಲ್ಲಿ ಪ್ರತ್ಯೇಕ ರೈಲ್ವೇ ವಿಭಾಗ ರಚನೆ ಮತ್ತಿತರ ಜಿಲ್ಲೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಈಗಾಗಲೇ ಅವರಿಗೆ ಮನವಿ ಸಲ್ಲಿಸಲಾಗಿದೆ. ಮೋದಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ವಿಶೇಷ ಒಲವು ಇದ್ದು, ಈ ಹಿಂದೆ ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರು ಜಿಲ್ಲೆಯ ಅಡಿಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದ್ದರು. ಜಿಲ್ಲೆಯಲ್ಲಿ ಇನ್ನಷ್ಟು ಕೈಗಾರಿಕೆಗಳನ್ನು ಸ್ಥಾಪಿಸುವ ಬಗ್ಗೆ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ತಿಳಿಸಿದ್ದಾರೆ.
ರ‍್ಯಾಲಿಯಲ್ಲಿ ಸುಮಾರು ಒಂದೂವರೆ ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೇಂದ್ರ ಮೈದಾನ ಸಿದ್ಧಪ್ರಧಾನಿ ಅವರ ಬೃಹತ್ ಬಹಿರಂಗ ಪ್ರಚಾರ ಸಮಾವೇಶಕ್ಕೆ ಕೇಂದ್ರ ಮೈದಾನ ಸಿದ್ಧಗೊಂಡಿದೆ. ಕಾರ್ಯಕ್ರಮದ ಬಗ್ಗೆ ಬಿಜೆಪಿ ಚುನಾವಣ ಉಸ್ತುವಾರಿ, ಶಾಸಕ ವಿ. ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಾ| ವೈ. ಭರತ್ ಶೆಟ್ಟಿ ಶುಕ್ರವಾರ ಮೈದಾನಕ್ಕೆ ಆಗಮಿಸಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸುನಿಲ್ ಕುಮಾರ್, 1,861 ಬೂತ್‌ಗಳಿಂದ 1 ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದರು. 3 ಗಂಟೆಗೆ ಕಾರ್ಯಕ್ರಮ ಆರಂಭ
ಅಪರಾಹ್ನ 3 ಗಂಟೆಗೆ ಸಭೆ ಆರಂಭವಾಗಲಿದೆ. 4.15ಕ್ಕೆ ಪ್ರಧಾನಿ ವೇದಿಕೆಗೆ ಆಗಮಿಸಿ ಮಾತನಾಡಲಿದ್ದಾರೆ. 2014ರ ಮೋದಿ ಸಭೆಗಿಂತಲೂ ದೊಡ್ಡ ಮಟ್ಟದ ಸಭೆ ಇದಾಗಲಿದ್ದು, ಪರಿಣಾಮವಾಗಿ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗೊಳಿಸಲಿದ್ದಾರೆ ಎಂದರು. ಸಾವಿರ ಕಾರ್ಯಕರ್ತರು ಖಾಕಿ ಸಮವಸ್ತ್ರ ಧಾರಿಗಳಾಗಿ ಭಾಗಿ!
ಬೆಳ್ತಂಗಡಿ: ಪ್ರಧಾನಿ ಕಾರ್ಯಕ್ರಮದಲ್ಲಿ ತಾಲೂಕಿನಿಂದ ಒಂದು ಸಾವಿರ ಮಂದಿ ಚೌಕಿದಾರ್(ಕಾವಲುಗಾರರು)ಗಳಂತೆ ಖಾಕಿ ಸಮವಸ್ತ್ರಧಾರಿಗಳಾಗಿ ಭಾಗವಹಿಸಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಚೌಕಿದಾರ್ ಎಂಬ ಪದ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ನಾನು ನಿಮ್ಮ ಕಾವಲುಗಾರ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಬಿಜೆಪಿಯವರು “ಮೆ ಭೀ ಚೌಕಿದಾರ್’ ಎಂಬ ಘೋಷಣೆ ಯೊಂದಿಗೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರಧಾನಿ ಕಾರ್ಯಕ್ರಮದಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳ ಬೇಕು ಎಂಬ ನಿಟ್ಟಿನಲ್ಲಿ ಕ್ಷೇತ್ರದ ಕಾರ್ಯಕರ್ತರಲ್ಲಿ ಮನವಿ ಮಾಡಿದಾಗ ಈ ರೀತಿಯಲ್ಲಿ ಖಾಕಿ ವಸ್ತ್ರಧಾರಿಗಳಾಗಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಎಲ್ಲರೂ ಸ್ವಂತ ಖರ್ಚಿನಿಂದ ಬಟ್ಟೆ ಹೊಲಿಸಿಕೊಂಡು ಸ್ವ ಇಚ್ಛೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ಅಂಗಿಯ ಹಿಂಬದಿ ಹಾಗೂ ಟೋಪಿಯ ಮೇಲೆ “ಮೆ ಭೀ ಚೌಕಿದಾರ್’ ಎಂದು ಬರೆಯಲಾಗಿದೆ ಎಂದು ಶಾಸಕ ಹರೀಶ್ ಪೂಂಜ “ಉದಯವಾಣಿ’ಗೆ ತಿಳಿಸಿದ್ದಾರೆ. ಇಂದು ಮದ್ಯ ಮಾರಾಟ ಇಲ್ಲ
ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಎ. 13ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರ ವರೆಗೆ ಮಂಗಳೂರು, ಮೂಡುಬಿದಿರೆ ಹಾಗೂ ಬಂಟ್ವಾಳ ತಾಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಅವರು ತಿಳಿಸಿದ್ದಾರೆ.