ನವದೆಹಲಿ: ಜಗತ್ತಿನ ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರ ಜನಪ್ರಿಯತೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಇನ್ನೂ ಅಗ್ರ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಈ ಬಗ್ಗೆ ಬಿಜೆಪಿ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
ವಾಷಿಂಗ್ಟನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆನ್‌ಲೈನ್ ಸಮೀಕ್ಷೆ ನಡೆಸುವ “ಮಾರ್ನಿಂಗ್ ಕನ್ಸಲ್ಟ್ ಪೊಲಿಟಿಕಲ್ ಇಂಟೆಲಿಜೆನ್ಸ್’ ನಡೆಸಿದ ಸಮೀಕ್ಷೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ಪ್ರಧಾನಿ ಮೋದಿಯವರಿಗೆ ಶೇ.77 ರೇಟಿಂಗ್ ದೊರೆತಿದ್ದು, ಅವರು ಜಗತ್ತಿನ ಅತ್ಯುತ್ತಮ ನಾಯಕ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಆಸ್ಟ್ರೇಲಿಯಾ ಪ್ರಧಾನಮಂತ್ರಿ ಆ್ಯಂಟನಿ ಅಲ್ಬನೀಸ್ ಶೇ.56, ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಶೇ.41, ಕೆನಡಾ ಪ್ರಧಾನಿ ಜಸ್ಟಿನ್ ತ್ರುದೌ ಶೇ.38, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಶೇ.36, ಜಪಾನ್ ಪ್ರಧಾನಿ ಫ್ಯೂಮಿಯೋ ಕಿಷಿದಾ ಶೇ.23ರಷ್ಟು ಜನಮನ್ನಣೆ ಗಳಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ಆಸ್ಟ್ರೇಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಜರ್ಮನಿ, ಭಾರತ, ಮೆಕ್ಸಿಕೋ, ನೆದರ್ಲೆಂಡ್, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್ ಮತ್ತು ಅಮೆರಿಕ ಸರ್ಕಾರಗಳ ಮುಖ್ಯಸ್ಥರ ಬಗ್ಗೆ ಸಂಸ್ಥೆ ಅಧ್ಯಯನ ನಡೆಸಿತ್ತು. ಈ ವರ್ಷದ ಆಗಸ್ಟ್‌ನಲ್ಲಿ ನಡೆದಿದ್ದ ಸಮೀಕ್ಷೆಯಲ್ಲಿ ಕೂಡ ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಶೇ.75 ಮಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ವ್ಯಕ್ತಪಡಿಸಿದ್ದರು. ಆಗಲೂ ಅವರೇ ಮೊದಲಿಗರಾಗಿ ಹೊರ ಹೊಮ್ಮಿದ್ದರು.
ಜನಮನ್ನಣೆ ಗಳಿಸಿದ ನಾಯಕರು
ನರೇಂದ್ರ ಮೋದಿ (ಭಾರತ)- ಶೇ.77
ಆ್ಯಂಟನಿ ಅಲ್ಬನೀಸ್(ಆಸ್ಟ್ರೇಲಿಯಾ)- ಶೇ.56
ಜೋ ಬೈಡೆನ್(ಅಮೆರಿಕ)- ಶೇ.41
ಜಸ್ಟಿನ್ ತ್ರುದೌ(ಕೆನಡಾ)- ಶೇ.38
ರಿಷಿ ಸುನಕ್ (ಯುಕೆ)- ಶೇ.36