ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ ಸರ್ವಾಂಗೀಣ ಅಭಿವೃದ್ಧಿಯ ಹರಿಕಾರ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದರು.
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರು ಪ್ರಸ್‌ಕ್ಲಬ್, ಛಾಯಾಚಿತ್ರ ಪತ್ರಕರ್ತರ ಸಂಘ, ಬಿಜೆಪಿ ಮಾಧ್ಯಮ ಪ್ರಕೋಷ್ಠ ಹಾಗೂ ನಗರದ ವೈದ್ಯಕೀಯ ಪ್ರಕೋಷ್ಠದ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಪ್ರಸ್‌ಕ್ಲಬ್ ಆವರಣದಲ್ಲಿ ಪತ್ರಕರ್ತರಿಗೆ ಹಾಗೂ ಕುಟುಂಬಸ್ಥರಿಗಾಗಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಮೋದಿ ನೂರು ವರ್ಷಗಳ ಕಾಲ ಬದುಕಿ, ದೇಶದ ಸೇವೆ ಮಾಡಬೇಕು. ಇಂದಿನಿಂದ ಅ.2 ಗಾಂಧಿ ಜಯಂತಿಯವರೆಗೆ ವಿವಿಧ ಜನೋಪಕಾರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ನಗರದ ನಾನಾ ಭಾಗಗಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಅವರು, ಪತ್ರಕರ್ತರು ನಿತ್ಯ ಒತ್ತಡದ ಬದುಕಿನಲ್ಲಿ ಕಾರ್ಯನಿರ್ವಹಿಸುತ್ತಾರೆ. ಆದ್ದರಿಂದ ಆಗಿಂದಾಗ್ಗೆ ಈ ರೀತಿಯ ಆರೋಗ್ಯ ತಪಾಸಣಾ ಶಿಬಿರಗಳು ನಡೆಯಬೇಕು. ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು. ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು ಎಂದು ತಿಳಿಸಿದರು.
ಈ ಶಿಬಿರದಲ್ಲಿ ನಗರದ ನೂರಾರು ಪತ್ರಕರ್ತರು ಹಾಗೂ ಅವರ ಕುಟುಂಬಸ್ಥರು ಭಾಗವಹಿಸಿ, ಮಧುಮೇಹ, ರಕ್ತದೊತ್ತಡ, ದಂತ, ನೇತ್ರಾ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳನ್ನು ತಪಾತಣೆ ಮಾಡಿಸಿಕೊಂಡು, ವೈದ್ಯರ ಸಲಹೆ ಪಡೆದರು.
ವಿಧಾನ ಪರಿಷತ್ತು ಸದಸ್ಯರಾದ ಎನ್.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಪ್ರಸ್‌ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಭಾಗವಹಿಸಿದ್ದರು.