ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ (ಜೂ.21) ಮುಖ್ಯ ಕಾರ್ಯಕ್ರಮಕ್ಕೆ ಈ ಬಾರಿ ಕಣಿವೆ ರಾಜ್ಯ ಜಮ್ಮು-ಕಾಶ್ಮೀರ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.
ಗುರುವಾರವೇ ಕಾಶ್ಮೀರಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ಶುಕ್ರವಾರ ಬೆಳಗ್ಗೆ ಶ್ರೀನಗರದಲ್ಲಿನ ಪ್ರಸಿದ್ಧ ದಾಲ್ ಸರೋವರ ಬಳಿಯ ಶೇರ್ ಇ-ಕಾಶ್ಮೀರ್ ಇಂಟರ್‌ನ್ಯಾಷನಲ್ ಕನ್‌ವೆನ್ಷನ್ ಸೆಂಟರ್ (ಎಸ್‌ಕೆಐಸಿಸಿ) ಬಳಿಯಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ:Heatwave: ದೆಹಲಿಯಲ್ಲಿ ಬಿಸಿಲ ಝಳಕ್ಕೆ ಐವರು ಮೃತ್ಯು; 12 ಮಂದಿ ಚಿಂತಾಜನಕ
ಈ ಕಾರ್ಯಕ್ರಮದಲ್ಲಿ 3ರಿಂದ 4 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಥೀಮ್ “ಯೋಗ ನಮಗೆ ಹಾಗೂ ಸಮಾಜಕ್ಕಾಗಿ” ಎಂಬುದು ಘೋಷ ವಾಕ್ಯವಾಗಿದೆ. ಯೋಗ ಕಾರ್ಯಕ್ರಮವು ಮುಖ್ಯ ವೇದಿಕೆ ಜೊತೆಗೆ ಐತಿಹಾಸಿಕ ಕ್ಲಾಕ್ ಟವರ್, ಲಾಲ್ ಚೌಕ ಹಾಗೂ ನಗರದ ಹಲವೆಡೆ ಆಯೋಜಿಸಲಾಗಿದೆ. ವಿದ್ಯಾರ್ಥಿಗಳ ಸಮೂಹ ಹಲವು ವಿಧದ ಯೋಗ ಆಸನಗಳ ಪ್ರದರ್ಶಿಸಲಿದೆ.
ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಪ್ರತಾಪ್‌ರಾವ್ ಜಾಧವ್ ಮಾತನಾಡಿ, ಯೋಗವನ್ನು ಗ್ರಾಮೀಣ ಪ್ರದೇಶದಲ್ಲಿ ಪ್ರಚಾರ, ಉತ್ತೇಜನ, ಪಾಲ್ಗೊಳ್ಳುವಿಕೆಗಾಗಿ ಪ್ರತಿಯೊಬ್ಬ ಗ್ರಾಮ ಪ್ರಧಾನರಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ ಎಂದರು.
ಜಮ್ಮು-ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ದಾಲ್ ಸರೋವರ ಬಳಿ ಸುಮಾರು 7 ಸಾವಿರ ಮಂದಿಯೊಂದಿಗೆ ಜೂ.21ರಂದು ಯೋಗಾಸನ ಪ್ರದರ್ಶನ ನೀಡುವುದು ಜಮ್ಮು-ಕಾಶ್ಮೀರಕ್ಕೆ ಹಾಗೂ ಇಲ್ಲಿನ ಜನರಿಗೆ ಹೆಮ್ಮೆಯ ವಿಷಯ. ವಿವಿಧ ಜಿಲ್ಲೆಗಳ ಜನರ ಈ ಕಾರ್ಯಕ್ರಮಕ್ಕೆ ಜಮ್ಮು ಕಾಶ್ಮೀರ ಆಡಳಿತ ಹಾಗೂ ಆಯುಷ್ ಸಚಿವಾಲಯವು ಆಹ್ವಾನಿಸಿದೆ ಎಂದರು.