Advertisement

ಲಡಾಖ್‌ ಅಖಾಡಕ್ಕೆ ಮೋದಿ ; ಟಿಬೆಟ್‌ ಅಂಚಿನಲ್ಲಿ ಚೀನೀ ರಹಸ್ಯ ವಾಯುನೆಲೆ ಬಹಿರಂಗ

08:50 AM May 27, 2020 | Hari Prasad |

ಹೊಸದಿಲ್ಲಿ: ಲಡಾಖ್‌ನಿಂದ 200 ಕಿ.ಮೀ. ದೂರದ ಟಿಬೆಟ್‌ ನೆಲದಲ್ಲಿ ಚೀನ ಸೇನೆಯು ರಹಸ್ಯವಾಗಿ ನಿರ್ಮಿಸಿರುವ ವಾಯು ನೆಲೆಯ ಚಿತ್ರಗಳು ಬಹಿರಂಗವಾಗುತ್ತಿದ್ದಂತೆ ಪ್ರಧಾನಿ ಮೋದಿ ಅಖಾಡಕ್ಕೆ ಧುಮುಕಿದ್ದಾರೆ.

Advertisement

ಇದೇ ಕಾರಣಕ್ಕೆ ಮಂಗಳವಾರ ಹೊಸದಿಲ್ಲಿಯಲ್ಲಿ ಮಹತ್ವದ ಸಭೆಗಳನ್ನು ನಡೆಸಿದ್ದಾರೆ.

ಲಡಾಖ್‌ ಸನಿಹಕ್ಕೆ ಬರುತ್ತಿರುವ ಚೀನದ ಮಿಲಿಟರಿ ಪಡೆ ಮತ್ತು ಅಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆ ಕುರಿತ ವಿವಾದದ  ಬಗ್ಗೆ ಚರ್ಚಿಸಲು ಪ್ರಧಾನಿ ಉನ್ನತ ಮಟ್ಟದ ತುರ್ತು ಸಭೆ ಕರೆದಿದ್ದರು.

ಸೇನೆಯ ಮೂರೂ ದಳಗಳ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮತ್ತು ರಕ್ಷಣ ಪಡೆಗಳ ಮುಖ್ಯಸ್ಥ ಜ| ಬಿಪಿನ್‌ ರಾವತ್‌ ಅವರು ಗಡಿಯಲ್ಲಿ ಕಳೆದ ಎರಡು ತಿಂಗಳುಗಳಲ್ಲಾಗಿರುವ ಬೆಳವಣಿಗೆಯ ಕುರಿತು ಮೋದಿ ಅವರಿಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ವಿದೇಶಾಂಗ ಕಾರ್ಯದರ್ಶಿ ಜತೆ ಪ್ರಧಾನಿ ಚರ್ಚೆ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಬೆಳಗ್ಗೆಯೇ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರೂ ಸೇನೆಯ ಮೂರೂ ದಳಗಳ ಮುಖ್ಯಸ್ಥರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದರು. ಗಡಿಯ ಸೇನಾ ಕಮಾಂಡರ್‌ಗಳ ಜತೆಗೂ ದೂರವಾಣಿ ಮೂಲಕ ಸಂಭಾಷಿಸಿ ವಸ್ತುಸ್ಥಿತಿ ವಿವರ ಕಲೆ ಹಾಕಿದ್ದರು.

Advertisement

ವಾಯುನೆಲೆ ನಿರ್ಮಾಣ
ಕಳೆದ ಒಂದೂವರೆ ತಿಂಗಳಿನಲ್ಲಿ ಟಿಬೆಟ್‌ನ ಅಂಚಿನಲ್ಲಿ ಚೀನವು ಸದ್ದಿಲ್ಲದೆ ನಿರ್ಮಿಸಿದ್ದ ವಾಯುನೆಲೆಯ ಎರಡು ಚಿತ್ರಗಳನ್ನು ‘ಡೆಟ್ರೆಸ್ಪಾ’ ತನ್ನ ಟ್ವಿಟರ್‌ ಖಾತೆಯಲ್ಲಿ ಮಂಗಳವಾರ ಬಹಿರಂಗಪಡಿಸಿತ್ತು.

ಎ. 6 ಮತ್ತು ಮೇ 21ರ ನಡುವೆ ಕೇವಲ ಒಂದೂವರೆ ತಿಂಗಳಿನಲ್ಲಿ ಚೀನವು ತರಾತುರಿಯಲ್ಲಿ ಈ ಸುಸಜ್ಜಿತ ಯುದ್ಧವಿಮಾನ ನೆಲೆಯನ್ನು ನಿರ್ಮಿಸಿರುವುದನ್ನು ಈ ಚಿತ್ರಗಳು ಸ್ಪಷ್ಪಪಡಿಸಿವೆ.

ಸೈನಿಕರ ನಿಯೋಜನೆ
ಲಡಾಖ್‌ನ ಗಲ್ವಾನ್‌ ನದಿ ಪಾತ್ರದಲ್ಲಿ ಚೀನವು 5 ಸಾವಿರ ಸೈನಿಕರನ್ನು ನಿಯೋಜಿಸಿದೆ. ಪ್ರತಿಯಾಗಿ ಭಾರತವೂ ಅಷ್ಟೇ ಸಂಖ್ಯೆಯ ಸೈನಿಕರನ್ನು ಗಲ್ವಾನ್‌ ತೀರದಲ್ಲಿ ನಿಯೋಜಿಸಿದೆ.

ಇತ್ತ ಗುಲ್ಡಾಂಗ್‌ ವಲಯದಲ್ಲೂ ಚೀನೀ ಸೈನಿಕರು ದಿಢೀರ್‌ ಪ್ರತ್ಯಕ್ಷವಾಗಿದ್ದು, ಅಲ್ಲೂ ಭಾರತೀಯ ಸೈನಿಕರು ಹದ್ದಿನ ಕಣ್ಣು ನೆಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತ ರಸ್ತೆ ನಿರ್ಮಾಣ ನಿಲ್ಲಿಸದು
ಲಡಾಖ್‌ ಪ್ರದೇಶದ ಎಲ್‌ಎಸಿ ಬಳಿ ಭಾರತ ನಿರ್ಮಿಸುತ್ತಿರುವ ರಸ್ತೆ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಸೇನಾ ಮುಖ್ಯಸ್ಥರ ಜತೆಗೆ ಒಂದು ತಾಸಿಗೂ ಹೆಚ್ಚು ಕಾಲ ನಡೆಸಿದ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ರಾಜತಾಂತ್ರಿಕವಾಗಿ ಈ ಸಮಸ್ಯೆ ಬಗೆಹರಿದರೂ ಭಾರತ ಗಲ್ವಾನ್‌ ನದಿಪಾತ್ರದ ಪ್ರದೇಶದಲ್ಲಿ ತನ್ನ ಹಕ್ಕುಗಳನ್ನು ಮುಂದುವರಿಸಬೇಕು ಎಂದು ಅವರು ಆದೇಶಿಸಿದ್ದಾರೆ.

24 ತಾಸುಗಳಲ್ಲಿ ಏನು ನಡೆಯಿತು?
– ಗಲ್ವಾನ್‌ ನದಿತೀರದಲ್ಲಿ ಮತ್ತಷ್ಟು ಚೀನೀ ಸೈನಿಕರ ನಿಯೋಜನೆ

– ಕಮಾಂಡರ್‌ಗಳ 4ನೇ ಸುತ್ತಿನ ಮಾತುಕತೆ ವಿಫ‌ಲ

– ಚೀನ ವಾಯುನೆಲೆಯ ಸ್ಯಾಟಲೈಟ್‌ ಚಿತ್ರ ವೈರಲ್‌

– ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಸಭೆ

– ವಿದೇಶಾಂಗ ಕಾರ್ಯದರ್ಶಿ ಜತೆ ಮೋದಿ ಚರ್ಚೆ

– ಸೇನಾ ಮುಖ್ಯಸ್ಥರ ಜತೆ ಪ್ರಧಾನಿ ತುರ್ತು ಸಭೆ

Advertisement

Udayavani is now on Telegram. Click here to join our channel and stay updated with the latest news.

Next