ಹುಬ್ಬಳ್ಳಿ: ಕಾರ್ಮಿಕರ ಹಕ್ಕುಗಳ ಸಂರಕ್ಷಣೆಗಾಗಿ, ಸಮಗ್ರ-ಸಮೃದ್ಧ-ಸೌಹಾರ್ದ ಕರ್ನಾಟಕಕ್ಕಾಗಿ ರಾಜ್ಯಾದ್ಯಂತ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ಸಿಐಟಿಯು ರಾಜ್ಯ ಸಮಿತಿ ನಡೆಸುತ್ತಿರುವ ಜಾಗೃತಿ ಜಾಥಾವನ್ನು ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರ ಸ್ವಾಗತಿಸಲಾಯಿತು.
ನಂತರ ಮೆರವಣಿಗೆ ಮುಖಾಂತರ ಜೆ.ಸಿ. ನಗರದ ಅಕ್ಕನ ಬಳಗಕ್ಕೆ ತೆರಳಿ ಸಭೆ ನಡೆಲಾಯಿತು. ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮಿನಾಕ್ಷೀ ಸುಂದರಂ ಮಾತನಾಡಿ, ವಿದೇಶಿ ಬಂಡವಾಳಗಾರರಿಗೆ ವ್ಯಾಪಾರ ಕುದುರಿಸಲು ವಿದೇಶಗಳಿಗೆ ಹೋಗಲು ದೇಶದ ಪ್ರಧಾನಿಯವರಿಗೆ ಸಾಕಷ್ಟು ಸಮಯವಿದೆ.
ಆದರೆ ಮಹದಾಯಿ ಸಮಸ್ಯೆ ಪರಿಹರಿಸಲು, ರೈತ ಕಾರ್ಮಿಕರ ಗಂಭೀರ ಸಮಸ್ಯೆಗಳಿಗೆ ಗಮನಕೊಡಲು ವೇಳೆ ಇಲ್ಲದಂತಾಗಿದೆ. ಇದು ಅವರ ಹುಸಿ ದೇಶಪ್ರೇಮ, ಅಚ್ಛೆ ದಿನ್ ಆಗಿದೆ ಎಂದರು. ಕಾರ್ಮಿಕರನ್ನು ಕಾನೂನು ವ್ಯಾಪ್ತಿಯಿಂದ ಮತ್ತು ಸಾಮಾಜಿಕ ಭದ್ರತೆಯಿಂದ ಹೊರಗಿಡುವ ಮುಖಾಂತರ ಆಧುನಿಕ ಗುಲಾಮಗಿರಿಗೆ ತಳ್ಳುವ ಲೇಬರ್ ಕೋಡ್ ಗಳನ್ನು ತರಲು ಹೊರಟಿರುವ ಕೇಂದ್ರ ಸರಕಾರದ ನೀತಿಗಳು ಅತ್ಯಂತ ಅಪಾಯಕಾರಿ.
ಅದರ ವಿರುದ್ಧ ಸಿಐಟಿಯು ಹೋರಾಟ ರೂಪಿಸಿದೆ. ಸರಕಾರದ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಕಾರ್ಮಿಕರು ಸನ್ನದ್ಧರಾಗಬೇಕೆಂದು ಕರೆ ನೀಡಿದರು. ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ ಮಾತನಾಡಿ, ರಾಜ್ಯದ ಕಾರ್ಮಿಕ ವರ್ಗದ ಬದುಕಿನ ಪ್ರಶ್ನೆಗಳಿಗಾಗಿ ಸೆ. 14ರಂದು ಒಂದು ಲಕ್ಷ ಜನರ ಮಹಾ ಪ್ರದರ್ಶನ ನಡೆಸಲಾಗುತ್ತಿದೆ.
ಸಮಾನ ಕನಿಷ್ಠ ವೇತನ 18 ಸಾವಿರ, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಸರಕಾರ ಮುಂದಾಗಬೇಕು. ಸಿಐಟಿಯು ಈ ಹಿಂದೆ ಹಗಲು-ರಾತ್ರಿ ಅನಿರ್ದಿಷ್ಟ ಹೋರಾಟ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬೇಡಿಕೆಗಳ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಅವರು ಮಾತಿಗೆ ತಕ್ಕಂತೆ ನಡೆಯಲಿಲ್ಲ ಎಂದರು. ಇದೇ ಸಂದರ್ಭದಲ್ಲಿ ಸಮುದಾಯ ಕಲಾ ತಂಡ “ನಿದ್ದೆಯೇ ನಮಗಿಲ್ಲ’ ನಾಟಕ ಪ್ರಸ್ತುತಪಡಿಸಲಾಯಿತು. ಜಿಲ್ಲಾಧ್ಯಕ್ಷ ಬಿ.ಐ. ಈಳಿಗೇರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪದಾಧಿಕಾರಿಗಳಾದ ಹರಿಶ ನಾಯ್ಕ, ಕೆ.ಎನ್. ಉಮೇಶ, ಬಿ.ವಿ. ರಾಘವೇಂದ್ರ, ರೈತ ಮುಖಂಡರಾದ ಬಿ.ಎಸ್. ಸೊಪ್ಪಿನ, ಶಿವಣ್ಣ ಹುಬ್ಬಳ್ಳಿ, ಅಮೃತ ಇಜಾರಿ, ವಿವಿಧ ಸಂಘಟನೆಗಳ ಮುಖಂಡರಾದ ದೊಡ್ಡಪ್ಪ ಬೋಳಗಟ್ಟಿ,
-ವಿನಾಯಕ ಕುರಬರ, ಮನೋಜ ತೋರಣಗಟ್ಟಿ, ವಿರೇಶ ಗುಡ್ಡದಮಠ, ಬಸವಣ್ಣೆಪ್ಪ ನೀರಲಗಿ, ಲಕ್ಷಣ ಅವರಾ , ಕೆ.ಎಚ್. ಪಾಟೀಲ, ಮಂಜುನಾಥ ಹುಜರಾತಿ, ಹುಸೇನಸಾಬ ನದಾಫ್, ಹನಮಂತ ಅಂಬಿಗೇರ, ಖತಾಲಸಾಬ ಮುಲ್ಲಾ, ನಾಗಮ್ಮ ಹಿರೇಮನಿ, ರಾಜು ಕೊಟಗಿ. ಮಾರುತಿ ಅಂಬಿಗೇರ ಮೊದಲಾದವರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಪ್ರಾಸ್ತಾವಿಕ ಮಾತನಾಡಿದರು.