ಚನ್ನರಾಯಪಟ್ಟಣ: ತಾಲೂಕು ಹಾಗೂ ಹೋಬಳಿ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅರ್ಜಿಗಳು ಜೆರಾಕ್ಸ್ ಅಂಗಡಿಯಲ್ಲಿ ಮಾರಾಟ ಆಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
10 ರೂ. ವಸೂಲಿ: ತಾಲೂಕು ಹಾಗೂ ಹೋಬಳಿ ಕೇಂದ್ರಕ್ಕೆ ಆಗಮಿಸುವ ರೈತರು ನೇರವಾಗಿ ಕಚೇರಿಗೆ ತೆರಳದೆ ಜೆರಾಕ್ಸ್ ಅಂಗಡಿಗೆ ತೆರಳಿ ಅರ್ಜಿ ಪಡೆಯಲು ಮುಂದಾಗುತ್ತಿದ್ದಾರೆ. ಇವರಿಗೆ ಸರಿಯಾದ ಮಾಹಿತಿ ನೀಡಿ ಕಚೇರಿಯಲ್ಲಿ ಉಚಿತವಾಗಿ ನೀಡು ತ್ತಾರೆ ಎಂದು ಜೆರಾಕ್ಸ್ ಮಾಲೀಕರು ಹೇಳದೆ ಪಿಎಂಕೆ ಅರ್ಜಿಯನ್ನು 10 ರೂ.ಗೆ ಮಾರಾಟ ಮಾಡುವ ಮೂಲಕ ಅನ್ನದಾತರಿಂದ ಹಣ ವಸೂಲಿಗೆ ಮುಂದಾಗಿದ್ದಾರೆ.
ಭರ್ಜರಿ ಕಲೆಕ್ಷನ್: ತಾಲೂಕಿನ ಹಲವು ಜೆರಾಕ್ಸ್ ಅಂಗಡಿಯಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅರ್ಜಿ ಲಭ್ಯವಿದ್ದು ಕಳೆದ ಒಂದು ವಾರದಿಂದ ಸಾವಿರಾರೂ ಅರ್ಜಿಗಳು ಮಾರಾಟವಾಗಿದ್ದು ಭರ್ಜರಿ ಕಲೆಕ್ಷನ್ ಮಾಡಿಕೊಂಡಿದ್ದಾರೆ. ತಾಲೂಕು ಕೇಂದ್ರದಲ್ಲಿ ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಮುಂಭಾಗದಲ್ಲಿ ಹತ್ತಾರು ಜೆರಾಕ್ಸ್ ಅಂಗಡಿಗಳಿವೆ. ಇದಲ್ಲದೆ ತಾಲೂಕಿನ ಆರು ಹೋಬಳಿ ಕೇಂದ್ರಗಳ ರೈತ ಸಂಪರ್ಕ ಕೇಂದ್ರದ ಸಮೀಪದಲ್ಲಿಯೇ ಜೆರಾಕ್ಸ್ ಅಂಗಡಿಗಳಿದ್ದು ಅವುಗಳಲ್ಲಿ ಪಿಎಂಕೆ ಅರ್ಜಿಗಳು ಮಾರಾಟ ಆಗುತ್ತಿವೆ.
ಪಿಎಂಕೆ ಅರ್ಜಿ ಉಚಿತ: ಚನ್ನರಾಯಪಟ್ಟಣ ತಾಲೂಕು ಕೇಂದ್ರದಲ್ಲಿನ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಇದಲ್ಲದೆ ಹೋಬಳಿ ಕೇಂದ್ರಗಳಾದ ಹಿರೀಸಾವೆ, ಶ್ರವಣಬೆಳ ಗೊಳ, ನುಗ್ಗೇಹಳ್ಳಿ, ಕಸಬಾ, ಬಾಗೂರು ಹಾಗೂ ಉದಯಪುರ ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ ಹಾಗೂ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಉಚಿತ ವಾಗಿ ಲಭ್ಯವಿರುವ ಕಿಸಾನ್ ಸಮ್ಮಾನ್ ಯೋಜನೆಯ ಅರ್ಜಿಗಳ, ಜೆರಾಕ್ಸ್ ಅಂಗಡಿಯಲ್ಲಿ ಹಣಕ್ಕೆ ಬಿಕರಿಯಾಗುತ್ತಿರುವುದು ಹಲವು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ.
ರೈತರು ಆಸಕ್ತಿ: ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿ ದೇಶದ ಕೃಷಿಕರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದರು, ಚುನಾವಣೆ ಸಮಯದಲ್ಲಿ ಈ ಬಗ್ಗೆ ರೈತರು ಅಷ್ಟಾಗಿ ಆಸಕ್ತಿ ತೋರಲಿಲ್ಲ, ಚುನಾವಣೆ ಮುಕ್ತಾಯವಾದ ಮೇಲೆ ಜಿಲ್ಲಾಡಳಿತ ಸಭೆ ಮಾಡಿ ಗ್ರಾಮ ಲೆಕ್ಕಾಧಿಕಾರಿ ಮೂಲಕ ರೈತರ ಪ್ರತಿ ಮನೆಗೆ ತೆರಳಿ ಯೋಜನೆಗೆ ಅಗತ್ಯವಿರುವ ದಾಖಲಾತಿ ಸಂಗ್ರಹಕ್ಕೆ ಮುಂದಾಗಿದ್ದೇ ತಡ ರೈತರು ತಾವಾಗಿಯೇ ಕಚೇರಿಗೆ ಆಗಮಿಸಿ ಅರ್ಜಿ ನೀಡುತ್ತಿದ್ದಾರೆ.
ಅನ್ನದಾತನಿಗೆ ಉತ್ತೇಜನ ನೀಡಲು: ಸಕಾಲಕ್ಕೆ ಮಳೆ ಬೆಳೆ ಇಲ್ಲದೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಅನ್ನದಾನ ನೆರವಿಗಾಗಿ ನಮೋ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿದೆ. ಕೃಷಿ ಚಟುವಟಿಕೆಗಳಲ್ಲಿ ರೈತ ಉತ್ಸಾಹ ಕಳೆದುಕೊಳ್ಳದಿರಲು ದೇಶದ ಪ್ರತಿಯೊರ್ವ ಕೃಷಿಕನಿಗೆ ವಾರ್ಷಿಕ ಆರು ಸಾವಿರ ರೂ. ಸಹಾಯಧನ ಮೂರು ಕಂತುಗಳಲ್ಲಿ ನೀಡಲು ಯೋಜನೆ ರೂಪಿಸಿದ್ದಾರೆ.
ಕಡಿವಾಣಕ್ಕೆ ಮುಂದಾಗಬೇಕು: ಸರ್ಕಾರ ರೈತರಿಗೆ ಉಚಿತವಾಗಿ ನೀಡುವ ಪಿಎಂಕೆ ಅರ್ಜಿಗಳನ್ನು ಜೆರಾಕ್ಸ್ ಅಂಗಡಿಗಳು ಹಣಕ್ಕೆ ಮಾರಾಟ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಿ ಅನ್ನದಾನರಿಗೆ ಮೋಸ ಮಾಡುವ ಜೆರಾಕ್ಸ್ ಅಂಗಡಿ ಪತ್ತೆ ಹಚ್ಚಿ ಅನಧಿಕೃತವಾಗಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಲೂಕು ರೈತ ಸಂಘ ಆಗ್ರಹಿಸಿದೆ.
● ಶಾಮಸುಂದರ್ ಕೆ. ಅಣ್ಣೇನಹಳ್ಳಿ