Advertisement

2.95 ಲಕ್ಷ ಜನ್‌-ಧನ್‌ ಖಾತೆ ಸ್ತಬ್ಧ: ಸಕ್ರಿಯಗೊಳಿಸಲು ಇದೆ ಅವಕಾಶ

01:14 AM Jan 04, 2023 | Team Udayavani |

ಮಂಗಳೂರು: ಬಹುನಿರೀಕ್ಷಿತ ಪ್ರಧಾನಮಂತ್ರಿ ಜನ್‌-ಧನ್‌ ಯೋಜನೆ (ಪಿಎಂಜೆಡಿವೈ)ಯಲ್ಲಿ ಕರಾವಳಿಯಲ್ಲಿ ತೆರೆದ ಖಾತೆಗಳ ಪೈಕಿ 2.95 ಲಕ್ಷ ಖಾತೆಗಳು ಸ್ತಬ್ಧವಾಗಿವೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ 5,18,496 ಖಾತೆ ಗಳಲ್ಲಿ 2,08,602 ಹಾಗೂ ಉಡುಪಿ ಜಿಲ್ಲೆಯ 2,64,704ರಲ್ಲಿ 86,487 ಬಳಕೆ ಯಾಗದೇ ನಿಷ್ಕ್ರಿಯವಾಗಿವೆ. ಈ ಖಾತೆ ಆರಂಭಿಸಿ 18 ತಿಂಗಳ ವರೆಗೆ ಬಳಸದಿದ್ದರೆ ಅದು ನಿಷ್ಕ್ರಿಯವಾಗುತ್ತದೆ. ಬಹುತೇಕರು ಖಾತೆ ತೆರೆದ ಬಳಿಕ ಸಕ್ರಿಯಗೊಳಿಸಿಲ್ಲ. ಅಲ್ಲದೆ ಸರಕಾರದ ವಿವಿಧ ಯೋಜನೆಗಳ ಹಣ ಪಡೆಯಲು ಬಹುತೇಕರು ಪ್ರತ್ಯೇಕ ಖಾತೆ ತೆರೆದ ಕಾರಣ ಇದನ್ನು ಬಳಸದಿರಲೂ ಬಹುದು.

ಪಿಎಂಜೆಡಿವೈ ಖಾತೆ ಯಾಕೆ?
ಸರಕಾರದ ವಿವಿಧ ಯೋಜನೆಗಳಿಗೆ ನೇರ ಫಲಾನುಭವಿ ವರ್ಗಾವಣೆ (ಡಿಬಿಟಿ), ಪಿಎಂ ಜೀವನ್‌ ಜ್ಯೋತಿ ವಿಮಾ ಯೋಜನೆ, ಸುರಕ್ಷಾ ವಿಮಾ ಯೋಜನೆ, ಅಟಲ್‌ ಪಿಂಚಣಿ ಯೋಜನೆ ಪಡೆಯಲು ಈ ಖಾತೆ ಅಗತ್ಯ. ಇದಕ್ಕೆ ರೂಪೇ ಡೆಬಿಟ್‌ ಕಾರ್ಡ್‌ ಒದಗಿಸುವುದಲ್ಲದೇ, 2 ಲಕ್ಷ ರೂ. ಅಪಘಾತ ವಿಮಾ ರಕ್ಷಣೆ ಇದೆ. ಈ ಖಾತೆಯಲ್ಲಿನ ಠೇವಣಿಯ ಮೇಲೆ ಬಡ್ಡಿ ಸಿಗುತ್ತದೆ. ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳಬೇಕಿಲ್ಲ. ದ.ಕ. ಜಿಲ್ಲೆಯ 1,89,255 ಹಾಗೂ ಉಡುಪಿ ಜಿಲ್ಲೆಯ 1,05,902 ಖಾತೆಗಳಿಗೆ ಕೇಂದ್ರ ಸರಕಾರದಿಂದ ಆರ್ಥಿಕ ನೆರವು ಜಮೆಯಾಗಿದೆ.

ಬ್ಯಾಂಕ್‌ನಲ್ಲಿ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌, ಫೋಟೊ ನೀಡಿ ಖಾತೆಗೆ ಮರುಜೀವ ತುಂಬಬಹುದು. ಸರಕಾರದ ಹಣ ಜಮೆಗೆ “ಖಾತೆ ನಿಷ್ಕ್ರಿಯ’ ಸಮಸ್ಯೆಇಲ್ಲ. ಆದರೆ ಅದನ್ನು ಪಡೆಯಲು ಬ್ಯಾಂಕ್‌ಗೆ ಕೆವೈಸಿ ಪರಿಷ್ಕೃತಗೊಳಿಸಬೇಕು.

ನಿಷ್ಕ್ರಿಯ ಖಾತೆಗಳ ಗ್ರಾಹಕರ ಮೊಬೈಲ್‌ ಸಂಖ್ಯೆಗೆ ಬ್ಯಾಂಕ್‌ಗಳ ಮೂಲಕ ಖಾತೆಯನ್ನು ಸಕ್ರಿಯಗೊಳಿಸಲು ಸಂದೇಶ ಕಳುಹಿಸಲಾಗುತ್ತಿದೆ. ಕೆಲವು ಪಂಚಾಯತ್‌/ ಬ್ಯಾಂಕ್‌ ಮಟ್ಟ ದಲ್ಲೂ ಶಿಬಿರ ಆಯೋಜಿಸಲಾಗಿದೆ.

Advertisement

ಪರಿಣಾಮ ಏನು?
ಜನ್‌-ಧನ್‌ ಖಾತೆ ಸ್ಥಗಿತದ ಪರಿಣಾಮ ಸದ್ಯಕ್ಕೆ ಏನೂ ಆಗದು. 2 ಲಕ್ಷ ರೂ.ಗಳ ವಿಮೆ ಇರುವುದು ಈ ಖಾತೆಯ ವೈಶಿಷ್ಟé. ಮುಂದೆ ಎಲ್ಲ ಯೋಜನೆಗಳ ಫ‌ಲ‌ ಪಡೆಯಲು ಇದೇ ಖಾತೆ ಅನಿವಾರ್ಯ ಎಂದು ಸರಕಾರ ಹೇಳಿದರೆ ಖಾತೆ ನಿಷ್ಕ್ರಿಯಗೊಂಡವರಿಗೆ ಸಮಸ್ಯೆ ಎದುರಾದೀತು. ಆಗ ಖಾತೆಗೆ ಮರುಜೀವ ತುಂಬಬೇಕಾದೀತು.

ನಿಷ್ಕ್ರಿಯ ಖಾತೆಯನ್ನು ಸಮೀಪದ ಬ್ಯಾಂಕ್‌ಗೆ ತೆರಳಿ ಸಕ್ರಿಯಗೊಳಿಸಿ. ಈ ಖಾತೆಯ ಮೂಲಕ ಸರಕಾರದ ಸವಲತ್ತುಗಳನ್ನು ಪಡೆಯಲು ಅವಕಾಶಗಳಿವೆ.
– ಪ್ರವೀಣ್‌, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next