ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಶನಿವಾರ ಮುಂಜಾನೆ 6.30 ಕ್ಕೆ ಗ್ರೀಸ್ ನಿಂದ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಜೈ ವಿಜ್ಞಾನ, ಜೈ ಅನುಸಂಧಾನ” ಘೋಷಣೆಯನ್ನು ಮೊಳಗಿಸಿದರು.
ಎರಡು ರಾಷ್ಟ್ರಗಳ ಭೇಟಿಯನ್ನು ಮುಗಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಿಗ್ಗೆ ಬೆಂಗಳೂರಿಗೆ ಬಂದು ತಲುಪಿದ ಅವರು ನೆರೆದಿದ್ದ ಜನರ ಬಳಿ ನಾನು ಜೈ ವಿಜ್ಞಾನ್ ಎನ್ನುತ್ತೇನೆ, ನೀವು ಜೈ ಅನುಸಂಧಾನ್ ಎನ್ನಿ ಎಂದು ಜನರಿಗೆ ಹೇಳಿಕೊಟ್ಟು ಘೋಷಣೆ ಕೂಗಿಸಿದರು,
ಬಳಿಕ ಮಾತನಾಡಿದ ಅವರು ಬೆಂಗಳೂರಿನಲ್ಲಿ ಇಂದಿನ ಸೂರ್ಯೋದಯ ಕಾಣುತ್ತಿದ್ದೇನೆ. ದೇಶದ ವೈಜ್ಞಾನಿಕತೆಗೆ ಸಿದ್ಧಿ ಪ್ರಾಪ್ತಿಯಾಗಿದೆ. ಬೆಂಗಳೂರಿನಲ್ಲಿ ಕಾಣುತ್ತಿರುವ ಈ ಉತ್ಸಾಹವನ್ನು ಜೋಹಾನ್ಸ್ ಬರ್ಗ್, ಗ್ರೀಸ್ ಅಲ್ಲೂ ನೋಡಿದೆ. ಜಗತ್ತಿನ ಪ್ರತಿ ಮೂಲೆಯಲ್ಲೂ ಕಂಡಿದ್ದೇನೆ. ಎಲ್ಲೆಡೆ ವಿಜ್ಞಾನ ಹಾಗೂ ಭವಿಷ್ಯದ ಮೇಲೆ ಇದೇ ವಿಶ್ವಾಸದಿಂದ ನೋಡುತ್ತಿದ್ದಾರೆ.
ಚಂದ್ರಯಾನ-3 ಸಾಧನೆ ಆಗುವಾಗ ನಾನು ವಿದೇಶದಲ್ಲಿದ್ದೆ. ಆದರೆ, ನನ್ನ ಮನಸ್ಸೆಲ್ಲ ಬೆಂಗಳೂರಿನಲ್ಲೇ ಇತ್ತು. ಭಾರತಕ್ಕೆ ಹೋಗುತ್ತೇನೆ. ಮೊದಲು ಬೆಂಗಳೂರಿಗೆ ತೆರಳುತ್ತೇನೆ. ಎಲ್ಲಕ್ಕಿಂತ ಮೊದಲು ನಮ್ಮ ವಿಜ್ಞಾನಿಗಳನ್ನು ಅಭಿನಂದಿಸಲು ಕಾತರನಾಗಿದ್ದೆ ಎಂದ ಅವರು ಯಾವುದೇ ಶಿಷ್ಟಾಚಾರ ಬೇಡ ಎಂದು ಸಿಎಂ, ಡಿಸಿಎಂ, ರಾಜ್ಯಪಾಲರಿಗೆ ಮನವಿ ಮಾಡಿದ್ದೆ. ಅದಕ್ಕೆ ಸಹಕರಿಸಿದ್ದಕ್ಕೆ ಧನ್ಯವಾದ.
ವಿಜ್ಞಾನಿಗಳನ್ನು ಭೇಟಿಯಾಗಬೇಕು, ಕಾತರನಾಗಿದ್ದೇನೆ. ಬೆಂಗಳೂರಿನ ನಾಗರಿಕರು ಬೆಳಗ್ಗೆಯೇ ಇಷ್ಟು ಉತ್ಸಾಹದಿಂದ ಸೇರಿದ್ದೀರಿ. ಸಣ್ಣ ಮಕ್ಕಳೂ ಸೇರಿದ್ದೀರಿ. ಇದು ಭಾರತದ ಭವಿಷ್ಯ ಎಂದು ಹರ್ಷ ವ್ಯಕ್ತಪಡಿಸಿದರು.
ಬಳಿಕ ಚಂದ್ರಯಾನ-3ರ ಯಶಸ್ಸಿನ ಹಿಂದೆ ಇದ್ದ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಲು ತೆರಳಿದರು.