ಹಿಮಾಚಲ ಪ್ರದೇಶ : ಪ್ರಧಾನಿ ನರೇಂದ್ರ ಮೋದಿ ಇಂದು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಜಲ ವಿದ್ಯುತ್ ಯೋಜನೆಗಳೂ ಸೇರಿದಂತೆ 28000 ಕೋಟಿ ರೂ. ಮೌಲ್ಯದ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಹೂಡಿಕೆಗೆ ಉತ್ತೇಜನ ನೀಡುವುದು, ಮೂಲ ಸೌಕರ್ಯ ಅಭಿವೃದ್ಧಿ, ಪ್ರವಾಸೋದ್ಯಮಕ್ಕೆ ಆದ್ಯತೆ ಹಾಗೂ ಜಲವಿದ್ಯುತ್ ಯೋಜನೆಗಳ ಅನುಷ್ಠಾನಕ್ಕೆ ಇದರಿಂದ ವೇಗ ದೊರಕಲಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವ ಭಾರಿ ಪ್ರಮಾಣದ ಅಭಿವೃದ್ಧಿ ಕಾಮಗಾರಿ ಚಾಲನಾ ಕಾರ್ಯಕ್ರಮ ಇದಾಗಿದೆ.
ಆರು ರಾಜ್ಯಗಳ ಸಹಕಾರದೊಂದಿಗೆ ಆರಂಭಿಸಿರುವ ರೇಣುಕಾಜಿ ಡ್ಯಾಂಗೆ ಪ್ರಧಾನಿ ಈ ಸಂದರ್ಭದಲ್ಲಿ ಚಾಲನೆ ನೀಡಲಿದ್ದಾರೆ. ಕಳೆದ ೩೦ ವರ್ಷದಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಈ ಯೋಜನೆಯೊಂದಕ್ಕೆ ಸುಮಾರು 11000 ಕೋಟಿ ರೂ. ವೆಚ್ಚವಾಗಲಿದೆ. ರಾಷ್ಟ್ರ ರಾಜಧಾನಿ ದಿಲ್ಲಿಗೆ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶವನ್ನೂ ಈ ಯೋಜನೆ ಹೊಂದಿದೆ.
ಯಮುನಾ ನದಿಯ ಉಪನದಿ “ಗಿರಿʼʼಗೆ ಹಿಮಾಚಲ ಪ್ರದೇಶದ ಸಿರಿಮೌರಿ ಜಿಲ್ಲೆಯಲ್ಲಿ ಈ ಡ್ಯಾಂ ನಿರ್ಮಿಸಲಾಗುತ್ತಿದೆ. ಇಲ್ಲಿಂದ ದಿಲ್ಲಿಗೆ ಪ್ರತಿ ವರ್ಷ 50 ಕೋಟಿ ಕ್ಯೂಬಿಕ್ ಮೀಟರ್ ನಷ್ಟು ನೀರು ಹರಿಸುವ ಉದ್ದೇಶವನ್ನು ಯೋಜನೆ ಹೊಂದಿದೆ.