ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ಭೇಟಿ ವೇಳೆಯಲ್ಲಿ ಆದ ಭದ್ರತಾ ಲೋಪಕ್ಕೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಇಲಾಖೆ ಗುರುವಾರ ವರದಿ ಪ್ರಕಟಿಸಿದ್ದು, ಘಟನಾ ಸಂಬಂಧ ಹೊಣೆ ನಿಗದಿ ಪಡಿಸುವಂತೆ ಪಂಜಾಬ್ ಸರಕಾರಕ್ಕೆ ತಾಕೀತು ಮಾಡಿದೆ.
ಈ ಸಂಬಂಧ ಪಂಜಾಬ್ ಸರಕಾರಕ್ಕೆ ಸುತ್ತೋಲೆ ಹೊರಡಿಸಿರುವ ಕೇಂದ್ರ ಗೃಹ ಇಲಾಖೆ ಪ್ರಧಾನಿ ಸಂಚರಿಸುವ ಮಾರ್ಗದ ಬಗ್ಗೆ ಸಾಕಷ್ಟು ಮುಂಚಿತವಾಗಿ ಮಾಹಿತಿ ನೀಡಿದ್ದರೂ ಭದ್ರತಾ ಲೋಪವಾಗಿರುವುದಕ್ಕೆ ಕಾರಣ ಏನು ? ಈ ಬಗ್ಗೆ ಅತಿ ಶೀಘ್ರದಲ್ಲೇ ವಿಸ್ತ್ರತ ವರದಿ ನೀಡುವುದರ ಜತೆಗೆ ಭದ್ರತಾ ಲೋಪಕ್ಕೆ ಕಾರಣರಾದವರ ವಿರುದ್ಧ ಹೊಣೆಗಾರಿಕೆ ನಿಗದಿ ಮಾಡಿ ಕ್ರಮ ತೆಗೆದುಕೊಳ್ಳಬೇಕು. ಇದೊಂದು ಗಂಭೀರ ಭದ್ರತಾ ಲೋಪದ ಪ್ರಕರಣವಾಗಿದೆ ಎಂದು ಎಚ್ಚರಿಕೆ ನೀಡಿದೆ.
ಪ್ರಧಾನಿ ಪ್ರಯಾಣಿಸುವ ಮಾರ್ಗದ ಬಗ್ಗೆ ಸಾಕಷ್ಟು ಮುಂಚಿತವಾಗಿ ಪಂಜಾಬ್ ಸರಕಾರಕ್ಕೆ ಮಾಹಿತಿ ನೀಡಲಾಗಿತ್ತು. ನಿಯಮ ಪ್ರಕಾರ ಪ್ರಧಾನಿ ಬೆಂಗಾವಲು ಪಡೆ ಸಾಗುವ ಮಾರ್ಗದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ, ಹೆಚ್ಚುವರಿ ಪಡೆ, ಅನಿವಾರ್ಯ ಬಂದರೆ ಪರ್ಯಾಯ ಮಾರ್ಗದ ಬಗ್ಗೆ ಸರಕಾರ ವ್ಯವಸ್ಥೆ ಮಾಡಬೇಕಿತ್ತು. ಆದರೆ ಪಂಜಾಬ್ ಸರಕಾರ ಹೆಚ್ಚುವರಿ ಭದ್ರತಾ ಪಡೆ ನಿಯೋಜನೆ ಮಾಡದೇ ಇರುವುದು ಮೇಲ್ನೋಟಕ್ಕೆ ಸ್ಪಷ್ಟ ವಾಗಿದೆ ಎಂದು ಗೃಹ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ರಸ್ತೆ ಮಾರ್ಗದ ಮೂಲಕ ಪ್ರಯಾಣಿಸುತ್ತೇವೆ ಎಂದು ಪಂಜಾಬ್ ಡಿಜಿಪಿಗೆ ಮಾಹಿತಿ ರವಾನಿಸಲಾಗಿತ್ತು. ಅವರು ಪ್ರಯಾಣಕ್ಕೆ ಒಪ್ಪಿಗೆ ಹಾಗೂ ಮಾರ್ಗದ ಬಗ್ಗೆ ಒಪ್ಪಿಗೆ ನೀಡಿದ ಬಳಿಕ ಪ್ರಯಾಣ ಸಾಗಿತ್ತು.ಆದರೂ ರೈತರು ಇದೇ ಮಾರ್ಗದಲ್ಲಿ ಪ್ರತಿಭಟನೆ ಹೇಗೆ ನಡೆಸಿದರು ? 20 ನಿಮಿಷ ಪ್ರಧಾನಿ ಮೇಲುಸೇತುವೆಯಲ್ಲಿ ಕಾಯುವಂತಾಗಿದ್ದು ಭಾರಿ ಲೋಪ ಎಂದು ಗೃಹ ಇಲಾಖೆ ಪತ್ರದಲ್ಲಿ ಆಕ್ಷೇಪಿಸಿದೆ.
ಅದೇ ರೀತಿ ಪ್ರಧಾನಿ ಕಾರ್ಯಕ್ರಮ ಮೊಟಕುಗೊಳಿಸಿದ್ದು ಭದ್ರತಾ ಲೋಪದಿಂದ ಅಲ್ಲ. ಕಾರ್ಯಕ್ರಮದಲ್ಲಿ ಜನರಿಲ್ಲದೇ ವಾಪಾಸ್ ಆದರು ಎಂದು ಪಂಜಾಬ್ ಸಿಎಂ ಚನ್ನಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರ್ಯಾಲಿಯಲ್ಲಿ ಸೇರಿದ್ದ ಜನಸ್ತೋಮದ ವಿಡಿಯೋ ಹಂಚಿಕೊಂಡಿದೆ.