Advertisement

ಪ್ರಾಥಮಿಕ –ಪ್ರೌಢ ಶಿಕ್ಷಣ ನಿರ್ಲಕ್ಷಿಸುತ್ತಿರುವ ಸರ್ಕಾರ

03:16 PM Jul 01, 2017 | |

ಧಾರವಾಡ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ರಾಜ್ಯ ಸರ್ಕಾರ ತೀವ್ರ ನಿರ್ಲಕ್ಷಿಸುತ್ತಿದ್ದು, ಹೀಗೆ ಮುಂದುವರಿದರೆ ಇನ್ನು ಐದು ವರ್ಷದಲ್ಲಿ ರಾಜ್ಯದ 22 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳು ಮುಚ್ಚಲಿವೆ ಎಂದು ಶಿಕ್ಷಣ ತಜ್ಞ ನಿರಂಜನ್‌ ಆರಾಧ್ಯ ಆತಂಕ ವ್ಯಕ್ತ ಪಡಿಸಿದರು. 

Advertisement

ಇಲ್ಲಿನ ನೌಕರರ ಸಂಘದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ 7 ಶೈಕ್ಷಣಿಕ ಜಿಲ್ಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಸಮಾಲೋಚನಾ ಸಭೆಯ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಬಂದ ಮೇಲೆ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಅನುದಾನ ಮತ್ತು ಪ್ರೋತ್ಸಾಹ ನೀಡುವುದಾಗಿ ಹೇಳುತ್ತಲೇ ಇದ್ದಾರೆ. ಆದರೆ ವಾಸ್ತವದಲ್ಲಿ ಅನುದಾನ ಕಡಿತಗೊಳಿಸಿದ್ದು, ಅದರ ದುಷ್ಪರಿಣಾಮ ಗೋಚರಿಸುತ್ತಿದೆ.  

2013ರಲ್ಲಿ ಒಟ್ಟು ಬಜೆಟ್‌ನ ಶೇ.12.9 ರಷ್ಟು ಅನುದಾನ ನೀಡಿದ್ದರೆ, 2014ರಲ್ಲಿ ಶೇ.12.9, 2015ರಲ್ಲಿ ಶೇ.11.62, 2016ರಲ್ಲಿ ಶೇ.10.72 ಹಾಗೂ 2017ರಲ್ಲಿ ಶೇ.9.79 ರಷ್ಟು ಅನುದಾನ ಇಳಿಮುಖವಾಗುತ್ತ ಹೋಗಿದೆ. ಮಾತಿನಲ್ಲಿ ಮಾತ್ರ ಸರ್ಕಾರಿ ಶಾಲೆಗಳು ಸುಧಾರಣೆಯಾಗುತ್ತಿದ್ದು, ಕೃತಿಯಲ್ಲಿ ಅವುಗಳನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. 

ಆಗಿಲ್ಲ ಕೊಠಡಿಗಳ ರಿಪೇರಿ: ರಾಜ್ಯದಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 53690 ಕೊಠಡಿಗಳಿದ್ದು, ಈ ಪೈಕಿ 37,079 ಕೊಠಡಿಗಳು ಮಾತ್ರ ಉತ್ತಮವಾಗಿದ್ದು, ಇನ್ನುಳಿದವು ರಿಪೇರಿ ಹಂತದಲ್ಲಿವೆ. ಅದೇ ರೀತಿ ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ 9018 ಕೊಠಡಿಗಳು ದುರಸ್ತಿ ಕಾಣಬೇಕಿದೆ. 1-8ನೇ ತರಗತಿ ಇರುವ ಶಾಲೆಗಳಲ್ಲಿ 73,129 ಕೊಠಡಿಗಳ ಸ್ಥಿತಿ ಹದಗೆಟ್ಟು ಹೋಗಿದೆ. ಈವರೆಗೂ ಮೂಲಭೂತ ಸೌಕರ್ಯಗಳನ್ನೇ ಅಭಿವೃದ್ಧಿ ಪಡಿಸಲು ತಡಕಾಡುತ್ತಿದೆ ಎಂದರು. 

Advertisement

ಎಂಟು ನಿರ್ಣಯ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಸುಧಾರಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯದ ಇತರ ಮೂರು ವಿಭಾಗವಾರು ಜಿಲ್ಲೆಗಳಲ್ಲಿ ಸಭೆ ನಡೆಸಲಾಗಿದ್ದು, ಧಾರವಾಡದಲ್ಲಿ ನಡೆದ ಈ ಸಭೆಯಲ್ಲಿ ಸರ್ಕಾರಕ್ಕೆ ಒಟ್ಟು ಶಿಫಾರಸು ಮಾಡಲು ಎಂಟು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. 

ಪ್ರಾಥಮಿಕ ಶಾಲೆಗಳಲ್ಲಿ ನರ್ಸರಿ ಶಿಕ್ಷಣವನ್ನು ಆರಂಭಿಸುವುದು. ಸರ್ಕಾರಿ ಶಾಲೆಗಳಲ್ಲಿ ಓದಿದವರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಶೇ.30ರಷ್ಟು ಮೀಸಲಾತಿಒದಗಿಸುವುದು. ಪ್ರತಿ ಶಾಲೆಯಲ್ಲಿ  ಕಡ್ಡಾಯವಾಗಿ ಒಬ್ಬ ಸಹಾಯಕನನ್ನು ನೇಮಕ ಮಾಡಿಕೊಳ್ಳುವುದು.

1ನೇ ತರಗತಿಯಿಂದಲೇ ಕನ್ನಡ ಶಾಲೆಗಳಲ್ಲೂ ಇಂಗ್ಲಿಷ್‌ನ್ನು ಕಲಿಸುವುದು. ಇಂಗ್ಲಿಷ್‌ ಕಲಿಕೆಗೆ ಒಬ್ಬ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಿಕೊಳ್ಳುವುದು. ವಿಷಯವಾರು ಶಿಕ್ಷಕರನ್ನು ನೇಮಿಸಿಕೊಳ್ಳುವುದು. ಎಸ್‌ ಡಿಎಂಸಿಗಳಿಗೆ ಗರಿಷ್ಠ ಅನುದಾನ ನೀಡುವುದು. ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದು. 

ಸಮನ್ವಯ ವೇದಿಕೆ ಸಮಾಲೋಚನಾ ಸಭೆಗೂ ಮುಂಚೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ,ಎಸ್‌. ಬಳ್ಳಾರಿ ಸೇರಿದಂತೆ ಧಾರವಾಡ,ಬೆಳಗಾವಿ, ಚಿಕ್ಕೋಡಿ, ಕಾರವಾರ, ಶಿರಸಿ, ಗದಗ, ಹಾವೇರಿ ಶೈಕ್ಷಣಿಕ ಜಿಲ್ಲೆಗಳ ಎಸ್‌ಡಿಎಂಸಿ ಸದಸ್ಯರು ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next