ತಿರುಪತಿ: ಹೆತ್ತವರಿಗೆ ಮಕ್ಕಳು ಸಾಧನೆ ಮಾಡಿದರೆ ಹೆಮ್ಮೆಯೇ. ಅದಕ್ಕೊಂದು ಉದಾಹರಣೆ ತಿರುಪತಿಯಲ್ಲಿ ನಡೆದಿದೆ. ನಗರದಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿರುವ ಶ್ಯಾಮಸುಂದರ್, ಪುತ್ರಿ ಜೆಸ್ಸಿ ಪ್ರಶಾಂತಿ ಅವರಿಗೆ ಗೌರವ ಸಲ್ಲಿಸಿದ್ದಾರೆ.
2018ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅವರು ಡಿವೈಎಸ್ಪಿಯಾಗಿದ್ದಾರೆ. ಸಭೆಯಲ್ಲಿ ಹಿರಿಯ – ಕಿರಿಯ ಅಧಿಕಾರಿಗಳು ಎಲ್ಲರೂ ಇದ್ದರು. ಒಂದು ಹಂತದಲ್ಲಿ ಅಪ್ಪ-ಮಗಳು ಮುಖಾಮುಖೀಯಾದರು.
ಅಧಿಕಾರಿಗಳ ಶ್ರೇಯಾಂಕದಲ್ಲಿ ಹಿರಿಯ ಅಧಿಕಾರಿಯಾಗಿರುವ ಪುತ್ರಿಯನ್ನು ಕಂಡು ತಂದೆ, ಸರ್ಕಲ್ ಇನ್ಸ್ ಪೆಕ್ಟರ್ ಶಿಸ್ತಿನಲ್ಲಿ ಸೆಲ್ಯೂಟ್ ಮೂಲಕ ಗೌರವ ಸಲ್ಲಿಸಿದರು. ಅದೇ ಕ್ಷಣ ಅಲ್ಲಿದ್ದವರೆಲ್ಲ ಅಚ್ಚರಿಗೊಳಗಾದರು.
ಇದನ್ನೂ ಓದಿ:ಪಟ್ಟುಬಿಡದ ರೈತರು: 7ನೇ ಸುತ್ತಿನ ಮಾತುಕತೆ ವಿಫಲ; ಮುಂದಿನ ಸಭೆ ಜ.8ಕ್ಕೆ ನಿಗದಿ
ಶ್ಯಾಮ್ ಸುಂದರ್ ಪುತ್ರಿಯನ್ನು “ಮ್ಯಾಡಮ್’ ಎಂದು ಕರೆದರು. ಅದಕ್ಕೆ ಪೂರಕವಾಗಿ ಪ್ರಶಾಂತಿ ಕೂಡ ಉತ್ತರಿಸಿದರು. ಕೂಡಲೇ ಅಲ್ಲಿದ್ದವರಿಗೆ ಶ್ಯಾಮ್ ಅವರನ್ನು “ನನ್ನ ತಂದೆ’ ಎಂದು ಪರಿಚಯಿಸಿದರು. “ಜೀವನದಲ್ಲಿ ಮಕ್ಕಳು ಸಾಧನೆ ಮಾಡುವುದೆಂದರೆ ಹೆತ್ತವರಿಗೆ ಸಂತೋಷದ ವಿಚಾರ. ಜನರಿಗೆ ಉತ್ತಮ ರೀತಿಯಲ್ಲಿ ಪುತ್ರಿ ಸೇವೆ ಸಲ್ಲಿಸಲಿದ್ದಾಳೆ ಎಂಬ ನಂಬಿಕೆ ನನಗೆ ಇದೆ’ ಎಂದು ಶ್ಯಾಮ್‌ಸುಂದರ್ ಹೇಳಿದ್ದಾರೆ.