ಬೀದರ: ಕೇಳಿ ಕಲಿಯುವುದಕ್ಕಿಂತ ಕೈಯಿಂದ ಮಾಡಿ ಕರಗತವಾದರೆ ಕೌಶಲತೆ ಅಳವಡುತ್ತದೆ. ಐಟಿಐನಲ್ಲಿ ವೃತ್ತಿ ಸಿದ್ಧಾಂತಕ್ಕಿಂತ ಪ್ರಾಯೋಗಿಕ ಪ್ರಾವೀಣ್ಯತೆಗೆ ಹೆಚ್ಚು ಬೆಲೆ. ಇದರಿಂದ ಯುವಕರ ಭವಿಷ್ಯ ನಿರ್ಮಾಣಗೊಳ್ಳುತ್ತದೆ ಎಂದು ಇಂಡೊ-ಜರ್ಮನ್ ವೃತ್ತಿ ಶಿಕ್ಷಣದ ಮುಖ್ಯಸ್ಥ ಡಾ| ರೊಡ್ನಿ ರೆವಿಯರ್ ಕರೆ ನೀಡಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕೌಶಲತೆ ಮತ್ತು ಯುವಜನತೆ ಸಂವಾದ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ನಾನು ನನ್ನ ಜೀವನದಲ್ಲಿ ಹೆಚ್ಚೇನು ಕಲಿಯಲಿಲ್ಲ. ಆದರೆ, ಪ್ರಾಯೋಗಿಕ ಕ್ಷೇತ್ರದಲ್ಲಿ ಪರಿಪೂರ್ಣ ಜ್ಞಾನ ಹೊಂದಿರುವ ಕಾರಣ ಉನ್ನತ ಹುದ್ದೆ ಲಭಿಸಿದೆ. ವೆಲ್ಡಿಂಗ್ ನೋಡಿದರೆ ಸಾಕಾಗೊಲ್ಲ ಕೈಯಲ್ಲಿ ಎಲೆಕ್ಟ್ರೋಡ್ ಹೋಲ್ಡರ್ ಹಿಡಿದು ಕೆಲಸ ಮಾಡಿದರೆ ನಮ್ಮಲ್ಲಿ ಪರಿಣತೆ ಅಳವಡುತ್ತದೆ ಎಂದರು.
ಇಂದು ಐಟಿಐ ಪ್ರತಿ ವೃತ್ತಿಗಳಿಗೆ ಬೆಲೆ ಇದೆ. ಅದರ ಒಳಹೊಕ್ಕು ತಂತ್ರಜ್ಞಾನ ಕರಗತ ಮಾಡಿಕೊಂಡರೆ ಅವನೊಬ್ಬ ಕುಶಲಕರ್ಮಿ ಎನ್ನಬಹುದು. ತಮ್ಮ ಸಂಸ್ಥೆಯು ಕಲಿತ ಕುಶಲಕರ್ಮಿಗಳಿಗೆಲ್ಲರಿಗೆ ಉದ್ಯೋಗ ಕೊಡಿಸಿರುವುದು ಗಮನಸಿ ಪುಳುಕಿಗೊಂಡಿರುವೆನು. ಖಾಸಗಿ ಸಂಸ್ಥೆಯಲ್ಲಿ ಈ ರೀತಿ ದಾಖಲೆ ನೋಡಿರುವೆ. ಆದರೆ, ಸರಕಾರಿ ಸಂಸ್ಥೆಯೊಂದು ಸಾವಿರಾರು ಐಟಿಐ ತರಬೇತಿದಾರರಿಗೆ ಗುಣಾತ್ಮಕ ತರಬೇತಿ ಜೊತೆಗೆ ಉದ್ಯೋಗ ಕೊಟ್ಟಿರುವ ಕಾರ್ಯ ಸ್ಮರಣೀಯ ಎಂದರು.
ತಾಂತ್ರಿಕ ಸಲಹೆಗಾರ ಬೆಂಗಳೂರಿನ ಟಿ. ಜಯರಾಮ ಮಾತನಾಡಿ, ಬೀದರ ಐಟಿಐನಲ್ಲಿ ಮೊದಲು ಕಲಿಯಿರಿ. ತದನಂತರ ಶಿಶಿಕ್ಷುಗಾಗಿ ಸಹಕರಿಸಲು ಬದ್ಧನಾಗಿದ್ದೇನೆ. ಈಗಾಗಲೇ ಐದು ಕಂಪನಿಗಳು ಜುಲೈನಲ್ಲಿ ಕ್ಯಾಂಪಸ್‌ಗೆ ಬರಲು ಒಪ್ಪಿಗೆ ನೀಡಿದ್ದು, ಅವರನ್ನು ಕರೆ ತರುವ ಜವಾಬ್ದಾರಿ ನನ್ನದಾಗಿದೆ ಎಂದರು.
ಸಂಸ್ಥೆಯ ಪ್ರಾಚಾರ್ಯ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿ, ಅನೇಕ ಕೈಗಾರಿಕೆಗಳು ಬೀದರಿಗೆ ಬರಲು ತುದಿಗಾಲಿನ ಮೇಲೆ ನಿಂತಿವೆ. ತಾವೆಲ್ಲರೂ ಐಟಿಐ ಕಲಿಯಿರಿ. ಮುಂದಿನ ಕೆಲಸ ನನ್ನದು. ಇಂದು ಜರ್ಮನ ದೇಶದವರು ನಮ್ಮ ಸರ್ಕಾರಿ ಐಟಿಐಗೆ ಭೇಟಿ ನೀಡಿ ಮಕ್ಕಳಿಗೆ ಉಪದೇಶ ನೀಡಿದ್ದು ಉತ್ತೇಜನ ನೀಡಿದಂತಾಗಿದೆ ಎಂದು ಹೇಳಿದರು. ತಾಂತ್ರಿಕ ಸಲಹೆಗಾರರಾದ ಸಾಕ್ಷಿ ಶೈಲಾ, ಸಾರಾ, ಚೆನಿ ರಾಜ ಸಹ ತಮ್ಮ ಕೌಶಲತೆಯ ವಿವಿಧ ವೃತ್ತಿಗಳ ಅನುಭವ ಹಂಚಿಕೊಂಡರು.